
ಹುಬ್ಬಳ್ಳಿ, ಅಕ್ಟೋಬರ್ 08: ಈ ಬಾರಿ ರಾಜ್ಯಾದ್ಯಂತ ಭೀಕರ ಬರ ಆವರಿಸಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರ ಸಂಕಷ್ಟ ಹೇಳತೀರದು. ಹಿಂಗಾರು ಬೆಳೆ ಕೂಡ ಬರುವುದು ಅನುಮಾನವಿದೆ. ಇದರ ಪರಿಣಾಮ ಜಾನುವಾರುಗಳ ಮೇಲೆ ಉಂಟಾಗಿದೆ. ಹಾಗಾಗಿ ಮೇವು, ನೀರಿನ ಕೊರತೆಯಿಂದ ಅನಿವಾರ್ಯವಾಗಿ, ತಮ್ಮ ಮಕ್ಕಳಂತೆ ಸಾಕಿದ್ದ ಜಾನುವಾರುಗಳ ಮಾರಾಟಕ್ಕೆ ರೈತರು ಮುಂದಾಗಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ನೂಲ್ವಿ ಜಾನುವಾರುಗಳ ಸಂತೆಯಲ್ಲಿ ಜಾನುವಾರುಗಳ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.
ಈ ಬಾರಿ ಮುಂಗಾರು ಮಳೆ ಕೊರತೆಯಿಂದ ರೈತನಿಗೆ ಆದಾಯವು ಇಲ್ಲ, ಜಾನುವಾರುಗಳಿಗೆ ಆಹಾರವು ಇಲ್ಲದಂತಾಗಿದೆ. ಇದೀಗ ಹಿಂಗಾರು ಬೆಳೆ ಕೂಡ ಬರುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಅನೇಕ ಕಡೆ ಮಳೆ ಆಗದಿರುವುದರಿಂದ ರೈತರು ಹಿಂಗಾರು ಬೆಳೆಗಳನ್ನು ಬೆಳೆಯುವುದು ಹೇಗೆ ಎಂದು ಚಿಂತೆಯಲ್ಲಿದ್ದಾರೆ. ಇದು ಜಾನುವಾರುಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ.
ಇದನ್ನೂ ಓದಿ: ಕೇಂದ್ರದ 10 ಅಧಿಕಾರಿಗಳ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ ಎನ್ನುವ ವಿವರ ಇಲ್ಲಿದೆ
ಬೆಳೆ ಬಂದರೆ ಜಾನುವಾರುಗಳಿಗೆ ಮೇವು ಸಿಗುತ್ತದೆ. ಆದರೆ ಬೆಳೆಯೇ ಬಾರದಿರುವುದರಿಂದ ಮೇವಿನ ಕೊರತೆ ಶುರುವಾಗಿದೆ. ಹೀಗಾಗಿ ರೈತರು ತಮ್ಮ ಮಕ್ಕಳಂತೆ ಸಾಕಿದ್ದ ಜಾನುವಾರುಗಳನ್ನು ಅನಿವಾರ್ಯವಾಗಿ ಮಾರಾಟ ಮಾಡುತ್ತಿದ್ದಾರೆ. ಜಾನುವಾರುಗಳ ಸಂತೆಯಲ್ಲಿ ಇದೀಗ ಖರೀದಿ ಮಾಡುವ ರೈತರಿಗಿಂತ ಮಾರಾಟ ಮಾಡುವ ರೈತರೇ ಹೆಚ್ಚಾಗಿದ್ದಾರೆ. ರೈತರು ತಮ್ಮ ಕೃಷಿಗಾಗಿ ಎತ್ತುಗಳ ಜೊತೆ ಹೈನುಗಾರಿಕೆಗಾಗಿ ನಾಲ್ಕೈದು ಆಕಳು, ಎಮ್ಮೆಗಳನ್ನು ಸಾಕಿದ್ದರು. ಇದರಿಂದ ಅವರ ಉಪಜೀವನ ನಡೆಯುತ್ತಿತ್ತು. ಆದರೆ ಇದೀಗ ಅವುಗಳಿಗೆ ಹಾಕಲು ಮೇವಿನ ಕೊರತೆ ಉಂಟಾಗಿದ್ದು, ರೈತರು ಒಂದು ಅಥವಾ ಎರಡು ಜಾನುವಾರುಗಳನ್ನು ಮಾತ್ರ ಇಟ್ಟುಕೊಂಡು, ಉಳಿದವುಗಳನ್ನ ಮಾರಾಟ ಮಾಡುತ್ತಿದ್ದಾರೆ.
ಕುಂದಗೋಳ, ನವಲಗುಂದ, ಅಣ್ಣಿಗೇರಿ ಸೇರಿದಂತೆ ಬಯಲ ಸೀಮೆಯ ಹೆಚ್ಚಿನ ರೈತರು ಜಾನುವಾರುಗಳ ಮಾರಾಟ ಮಾಡುತ್ತಿದ್ದಾರೆ. ಲಕ್ಷ ರೂ ಬೆಲೆಯೆ ಆಕಳು, ಎತ್ತನ್ನು 5ರಿಂದ 6 ಸಾವಿರ ರೂಪಾಯಿಗೂ ಯಾರು ಖರೀದಿ ಮಾಡುತ್ತಿಲ್ಲವಂತೆ. ‘ನಮಗೆ ಆಹಾರ, ನೀರಿನ ಕೊರತೆಯಾದರೆ ಎಲ್ಲೋ ಹೋಗಿ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಆದರೆ ಜಾನುವಾರುಗಳಿಗೆ ಆಹಾರ ಹೊಂದಿಸುವುದು ಕಷ್ಟವಾಗಿದೆ. ಅವುಗಳ ಮೇವನ್ನು ಖರೀದಿ ಮಾಡಲಿಕ್ಕೆ ಮತ್ತೆ ಸಾವಿರಾರು ರೂ. ಖರ್ಚು ಮಾಡುವ ಸ್ಥಿತಿ ರೈತರಿಗಿಲ್ಲ. ಹೀಗಾಗಿ ಕಡಿಮೆ ಬೆಲೆ ಬಂದರೂ ಕೂಡಾ ಮಾರಾಟ ಮಾಡುತ್ತಿದ್ದೇವೆ’ ಎಂದು ರೈತರಾದ ಹೇಮನಗೌಡ ಅವರ ಮಾತು.
‘ಇನ್ನು ಸರ್ಕಾರ, ಇಲ್ಲಿವರಗೆ ಮೇವು ಬ್ಯಾಂಕ್ ಆರಂಭಿಸಿಲ್ಲ. ಗೋ ಶಾಲೆಗಳನ್ನು ಕೂಡ ಆರಂಭಿಸಿಲ್ಲ. ಕನಿಷ್ಠ ಮೇವು ಬ್ಯಾಂಕ್, ಗೋ ಶಾಲೆಗಳನ್ನು ಆರಂಭಿಸಿದರೆ ಅಲ್ಲಿಯಾದರೂ ಜಾನುವಾರುಗಳನ್ನು ಬಿಡಬಹುದು. ಸದ್ಯ ಅಲ್ಲಿಯೂ ಬಿಡಲಾರದಂತಹ ಸ್ಥಿತಿಯಿಂದ ಮಾರಾಟ ಮಾಡುತ್ತಿದ್ದೇವೆ’ ಎಂಬುವುದು ರೈತರ ವಾದ.
ಇದನ್ನೂ ಓದಿ: 150 ವರ್ಷಗಳ ಇತಿಹಾಸದಲ್ಲೇ ಕರ್ನಾಟಕದಲ್ಲಿ ಅತ್ಯಂತ ತೀವ್ರ ಬರ: ರಾಜ್ಯದ ಪೈಕಿ ಮೈಸೂರಲ್ಲಿ ಮಳೆ ಕೊರತೆ ಅತ್ಯಧಿಕ!
ಈ ಬಾರಿ ಬರದ ಹೊಡೆತಕ್ಕೆ ರೈತರ ಜೊತೆ ಜಾನುವಾರುಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿ, ಸರ್ಕಾರ ಮೊದಲು ಗೋಶಾಲೆ ಮತ್ತು ಮೇವು ಬ್ಯಾಂಕ್ನ್ನು ಆರಂಭಿಸಬೇಕಿದೆ. ಆ ಮೂಲಕ ಸಂಕಷ್ಟದಲ್ಲಿರುವ ರೈತರು ಮತ್ತು ಜಾನುವಾರುಗಳನ್ನ ಕಾಪಾಡುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.