ಕಾಂಗ್ರೆಸ್ ನಾಯಕತ್ವದ ವಿರುದ್ದ ಶಾಸಕರೇ ತಿರುಗಿ ಬಿದ್ದಿದ್ದಾರೆ. ದಿನ ಬೆಳಗಾದರೆ ಮುಖ್ಯಮಂತ್ರಿ ಕುರ್ಚಿಯ ಚರ್ಚೆಯೇ ನಡೆಯುತ್ತಿದೆ. ಮುಂದೆ ಯಾರು ಸಿಎಂ ಆಗಬೇಕು ಅನ್ನೋದರ ಕಡೆಯೇ ಕಾಂಗ್ರೆಸ್ ನಾಯಕರೆಲ್ಲರ ಗಮನ ಇದೆ. ಇದರ ದುಷ್ಪರಿಣಾಮದಿಂದಾಗಿ ರಾಜ್ಯದ ಆಡಳಿತ ಅಯೋಮಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (pralhad Joshi) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದರೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಇದರ ಪರಿಣಾಮ ಎಂಬಂತೆ ಅಭಿವೃದ್ಧಿ ಕಾರ್ಯ ಸಂಪೂರ್ಣ ನಿಂತು ಹೋಗಿದೆ. ರಸ್ತೆ ಕೆಲಸಗಳು ಆಗ್ತಿಲ್ಲ, ಕೆಲಸ ಮಾಡಿದವರಿಗೆ ಬಿಲ್ ಕೊಡ್ತಿಲ್ಲ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ಆ ಹಣವನ್ನೂ ಕೊಡುತ್ತಿಲ್ಲ ಎಂಬ ದೂರು ಬಂದಿದೆ.
ಕೆಲಸ ಮಾಡಿದವರು ಅಧಿಕಾರಿಗಳ ಬಳಿ ಹೋಗಿ ಹಣ ಕೇಳಿದರೆ ಈಗ ಹಣ ಕೊಡಬೇಡಿ ಅಂತ ಮೇಲಿನಿಂದ ಸೂಚನೆ ಬಂದಿದೆ ಅಂತ ಹೇಳ್ತಾರಂತೆ. ಈ ಮೇಲಿನವರು ಅಂದರೆ ಯಾರು? ಅವರು ಯಾಕೆ ಬಿಲ್ ಪೆಂಡಿಂಗ್ ಇಡಿ ಅಂತ ಹೇಳ್ತಾರೆ? ಕೆಲಸ ಸರಿ ಮಾಡಿಲ್ಲ ಅಂದ್ರೆ ಕ್ರಮ ಕೈಗೊಳ್ಳಿ, ಕೆಲಸ ಸರಿಯಾಗಿ ಮಾಡಿದ್ರೆ ಹಣ ಬಿಡುಗಡೆ ಮಾಡಿ, ಆ ಎರಡೂ ಮಾಡದೇ ಬಿಲ್ ಪೆಂಡಿಂಗ್ ಇಡಿ ಅಂತ ಮೇಲಿನಿಂದ ತಿಳಿಸಿದ್ದಾರೆ ಅಂದರೆ ಏನರ್ಥ? ಎಂದು ಪ್ರಲ್ಹಾದ ಜೋಶಿ ಪ್ರಶ್ನಿಸಿದರು. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡ್ತಿದೆ. ಇದರ ಪರಿಣಾಮವಾಗಿ ಆಡಳಿತ ನೆಲಕಚ್ಚಿದೆ ಅಂತ ಟೀಕಿಸಿದರು.
ಇದನ್ನೂ ಓದಿ: ಕಾಶಿಯಾತ್ರೆ ಯೋಜನೆಯಡಿ ಏಕಕಾಲಕ್ಕೆ 400 ಭಕ್ತಾಧಿಗಳಿಂದ ತೀರ್ಥಯಾತ್ರೆ: ದಿವ್ಯ ದರ್ಶನ ಸಿಗಲಿ ಎಂದು ಶುಭ ಹಾರೈಸಿದ ಪ್ರಲ್ಹಾದ ಜೋಶಿ
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಲ್ಹಾದ ಜೋಶಿ, ಈ ತೀರ್ಪನ್ನ ಮುನ್ನಡೆ ಅಂದ್ಕೋತಿರೋ, ಹಿನ್ನಡೆ ಅಂದ್ಕೋತಿರೋ ಅದು ನಿಮಗೆ ಬಿಟ್ಟಿದ್ದು, ಆದರೆ ಸಿಬಿಐ ತನಿಖೆ ಮುಂದುವರಿಯಲಿದೆ ಅನ್ನೋದು ಪ್ರಾಥಮಿಕ ಮಾಹಿತಿಗಳಿಂದ ತಿಳಿದಿದೆ. ಒಂದು ವೇಳೆ ಡಿಕೆ ಶಿವಕುಮಾರ್ ಸಿಬಿಐ ತನಿಖೆಗೆ ಸಹಕರಿಸದಿದ್ದರೆ ಆಗ ಸಿಬಿಐ ಅಧಿಕಾರಿಗಳು ಕೋರ್ಟ್ ಗೆ ಹೋಗಬಹುದು ಎಂದು ಪ್ರತಿಕ್ರಿಯೆ ನೀಡಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:06 pm, Thu, 30 November 23