
ಧಾರವಾಡ, ಡಿ.31: ಧಾರಾವಾಡವನ್ನು ಅರೆಮಲೆನಾಡು ಜಿಲ್ಲೆ ಎಂದು ಅನೇಕರು ಕರೆಯುತ್ತಾರೆ. ಇನ್ನು ಕೆಲವರು ಬೆಳವಲನಾಡು ( Kelageri Lake sunset) ಎನ್ನುತ್ತಾರೆ. ಇಲ್ಲಿ ಯಾವುದೇ ಬೀಜ ಎಸೆದರೂ ಮೊಳಕೆಯೊಡೆದು ಹೆಮ್ಮರವಾಗಿ ಬಿಡುತ್ತೆ ಎಂಬ ಮಾತಿದೆ. ಇದೇ ಕಾರಣಕ್ಕೆ ಈ ಊರನ್ನು ಬೆಳವಲನಾಡು ಎಂದು ಕರೆಯುತ್ತಾರೆ. ಈ ಎಲ್ಲ ಸಮೃದ್ಧಿಗೆ ಇಲ್ಲಿನ ಕೆರೆಗಳು ಕಾರಣ. ಜಿಲ್ಲೆಯ ಬಹುತೇಕ ಪ್ರದೇಶಗಳು ಕೆರೆಗಳಿಂದ ತುಂಬಿದೆ. ಅದರಲ್ಲೂ ಕೆಲಗೇರಿ ಕೆರೆ ಈ ಜಿಲ್ಲೆಯ ಜನರ ಜೀವನಾಡಿ. ಇಂತಹ ಸುಂದರವಾದ ಕೆರೆಯಲ್ಲಿ ಸುಂದರವಾದ ನೀರು-ಸೂರ್ಯನ ಆಟ ದೃಶ್ಯ ನೋಡುವುದೇ ಅದ್ಭುತ. ಹೊಸ ಆಚರಣೆಗೆ ಇಂದೊಂದು ಅದ್ಭುತ ದೃಶ್ಯ.
ಈ ಕೆರೆಯ ಸುತ್ತಮುತ್ತಲಿನ ಪರಿಸರದಲ್ಲಿ ಹೊಸ ಹೊಸ ದೃಶ್ಯಗಳು ಕಂಡು ಬಂದಿದೆ. ಸೂರ್ಯನ ಬೆಳಕಿನೊಂದಿಗೆ ನೀರಿನ ಆಟವೂ ಅಲ್ಲಿನ ಜನರ ಖುಷಿಯ ಕ್ಷಣಕ್ಕೆ ಕಾರಣವಾಗಿತ್ತು. ಸಂಜೆಯಾಗುತ್ತಿದ್ದಂತೆ ಸೂರ್ಯ ರಶ್ಮಿ ಜತೆಗೆ ಕೆರೆ ನೀರಿನ ಚೆಲ್ಲಾಟವನ್ನು ನೋಡಲು ಎರಡು ಕಣ್ಣು ಸಾಲದು, ಅಂತಹ ಅದ್ಭುತ ದೃಶ್ಯ ಕಂಡು ಬಂದಿದೆ. ಧಾರವಾಡದಿಂದ ಗೋವಾಕ್ಕೆ ಹೋಗುವ ದಾರಿಯಲ್ಲಿ ಸಿಗುವ ಕೆಲಗೇರಿ ಕೆರೆ. ಈ ಕೆರೆಯನ್ನು ಸರ್ ಎಂ. ವಿಶ್ವೇಶ್ವರಯ್ಯ ನಿರ್ಮಿಸಿದ್ದು, ಸೂರ್ಯನ ಸಂಜೆಯ ಬೆಳಕು ಬಣ್ಣ ಬಣ್ಣದ ಕಲ್ಲುಗಳಿಗೆ ನೀರಿನ ಅಲೆಗಳು ಮುತ್ತಿಡುವ ಕ್ಷಣ ನೋಡಲು ಎರಡು ಕಣ್ಣುಗಳು ಸಾಲದು, ಸೂರ್ಯನ ಬಿಂಬಕ್ಕೆ ವಿವಿಧ ಬಗೆಯ ಬಣ್ಣಗಳನ್ನು ಪಡೆದುಕೊಳ್ಳುತ್ತದೆ. ಒಂದು ಬಾರಿ ಬಂಗಾರದ ಬಣ್ಣ, ಮತ್ತೊಮ್ಮೆ ವಜ್ರ, ಹರಳುಗಳಂತೆ ಕಾಣುತ್ತದೆ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಕಾಡಿಗೆ ಹೋದವನಿಗೆ ವಿಷ್ಣುವಿನ ದರ್ಶನ; ದೇವಾಲಯ ಕಟ್ಟಿ ಪೂಜಿಸಿದ ಬೀದರ್ನ ಜನ
ಸಂಜೆ ಹೊತ್ತಿಗೆ ಬೆಟ್ಟ-ಗುಡ್ಡಗಳ ಮರೆಯಲ್ಲಿ ನಿಧಾನವಾಗಿ ಇಳಿಯುವ ಸೂರ್ಯ, ತನ್ನೆಲ್ಲಾ ಹಳೆಯ ನೆನಪುಗಳನ್ನ ಅಳಿಸಿ ಹಾಕಿ, ಹೊಸ ವರ್ಷಕ್ಕೆ ಹೊಸ ಬದುಕು ಹಾಗೂ ಭರವಸೆಯತ್ತ ಸಾಗುತ್ತಿರುವಂತೆ ಭಾಸವಾಗುತ್ತೆ. ನಿಧಾನವಾಗಿ ನೀರಿನಲ್ಲಿ ಇಳಿಯುವಂತೆ ಕಾಣುವ ಸೂರ್ಯ, ರಕ್ತದಲ್ಲಿ ಮಿಂದೆದ್ದವನಂತೆ ಕಾಣುತ್ತಾನೆ. ತನ್ನ ಸುತ್ತಮುತ್ತಲಿನ ಪರಿಸರಕ್ಕೂ ಅದನ್ನೇ ಹೊದಿಸುತ್ತಾನೆ. ಕ್ಷಣ ಉರುಳಿದಂತೆ ಚಿನ್ನದ ಬಣ್ಣಕ್ಕೆ ತಿರುಗುತ್ತಾ, ಕೆರೆಯ ಒಡಲನ್ನು ಚಿನ್ನದ ನೀರಿನಿಂದ ತುಂಬುತ್ತಾನೆ. ಅರೆಮಲೆನಾಡು ಜಿಲ್ಲೆಗಳಲ್ಲಿ ಜೂನ್ ಆರಂಭದಿಂದ ಡಿಸೆಂಬರ್ ಕೊನೆಯವರೆಗೆ ಸೂರ್ಯನ ಪ್ರಖರತೆ ಕಡಿಮೆ. ಮಳೆಗಾಲದಲ್ಲಿ ಸೂರ್ಯ ಮೋಡದ ಮರೆಯಲ್ಲಿ ಅವಿತುಕೊಂಡರೆ, ಚಳಿಗಾಲದಲ್ಲಿ ಮಂಜಿನಿಂದ ಹೊರ ಬಾರದೇ ಮರೆಯಾಗಿರುತ್ತಾನೆ. ಆದರೆ ಡಿಸೆಂಬರ್ ಮುಗಿಯುತ್ತಾ ಬರುತ್ತೋ ಆಗ ಮೋಡ-ಮಂಜಿನಿಂದ ಪ್ರಕೃತಿಯಷ್ಟೇ ಅಲ್ಲ, ಸೂರ್ಯನೂ ಮುಕ್ತಿ ಪಡೆದು, ತನ್ನ ಅಸ್ತಿತ್ವವನ್ನ ತೋರಿಸುತ್ತಾನೆ. ಈ ವೇಳೆಯಲ್ಲಿ ಕೆರೆಯ ನೀರಿನೊಂದಿಗೆ ಈತನ ಚೆಲ್ಲಾಟವನ್ನ ನೋಡಲಿಕ್ಕೆ ಎರಡು ಕಣ್ಣು ಸಾಲದು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Wed, 31 December 25