ಹುಬ್ಬಳ್ಳಿ ಕಿಮ್ಸ್​​ನಲ್ಲಿ ಹೆಣದ ಮೇಲೂ ಹಣ ಮಾಡ್ತಿರೋ ಸಿಬ್ಬಂದಿ!: ವ್ಯಾಪಕ ಆಕ್ರೋಶ

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಮೃತದೇಹದ ಮೇಲೂ ಹಣ ವಸೂಲಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.  ಶವ ಪ್ಯಾಕ್ ಮಾಡಲು, ವಾಹನಕ್ಕೆ ಸಾಗಿಸಲು ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಈ ಕುರಿತು ವರದಿ ಪ್ರಸಾರವಾಗುತ್ತಿದ್ದಂತೆ, ವೈದ್ಯಕೀಯ ಶಿಕ್ಷಣ ಇಲಾಖೆ ಕಿಮ್ಸ್ ನಿರ್ದೇಶಕರಿಂದ ವರದಿ ಕೇಳಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದೆ. ಕಿಮ್ಸ್‌ ನಿರ್ದೇಶಕರು ಕೂಡ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಹುಬ್ಬಳ್ಳಿ ಕಿಮ್ಸ್​​ನಲ್ಲಿ ಹೆಣದ ಮೇಲೂ ಹಣ ಮಾಡ್ತಿರೋ ಸಿಬ್ಬಂದಿ!: ವ್ಯಾಪಕ ಆಕ್ರೋಶ
ಕಿಮ್ಸ್​​ ಹುಬ್ಬಳ್ಳಿ
Edited By:

Updated on: Feb 11, 2026 | 5:01 PM

ಹುಬ್ಬಳ್ಳಿ, ಫೆಬ್ರವರಿ 11: ನಗರದಲ್ಲಿರುವ ಕಿಮ್ಸ್​ನ ಬಡವರ ಪಾಲಿನ ಸಂಜೀವಿನಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಆದ್ರೆ ಇದೇ ಕಿಮ್ಸ್​​ನಲ್ಲಿ ಸತ್ತ ಹೆಣದ ಮೇಲೂ ದುಡ್ಡು ಮಾಡುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದು, ಮೃತ ವ್ಯಕ್ತಿಯ ಶವ ಪ್ಯಾಕ್ ಮಾಡಿ ವಾಹನಕ್ಕ ಹಾಕುವುದರಿಂದ ಹಿಡಿದು ರೋಗಿಯನ್ನು ಶಿಫ್ಟ್​​ ಮಾಡೋದಕ್ಕೂ ಇಲ್ಲಿ ಹಣ ಕೊಡಲೇ ಬೇಕು. ಆಸ್ಪತ್ರೆಯಲ್ಲಿರುವ ಸ್ವಚ್ಚತಾ ಸಿಬ್ಬಂದಿ ಮತ್ತು ಡಿ ಗ್ರೂಪ್ ನೌಕರರು ರೋಗಿಗಳು ಮತ್ತು ಅವರ ಸಂಬಂಧಿಕರ ರಕ್ತ ಹೀರುವ ಕೆಲಸ ಮಾಡ್ತಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಶಾಳ ಅಡವಿಬಾವಿ ನಿವಾಸಿಯಾಗಿರೋ 52 ವರ್ಷದ ಗದ್ದೆಮ್ಮಾ ಎನ್ನುವ ಮಹಿಳೆ ಪಿತ್ತಕೋಶದ ಕಲ್ಲುಗಳಿಂದ ಅಸ್ವಸ್ಥರಾಗಿದ್ದರು. ಹೀಗಾಗಿ ಅವರನ್ನು ಕಳೆದ ಜನವರಿ 31ರಂದು ಹುಬ್ಬಳ್ಳಿ ಕಿಮ್ಸ್​​ಗೆ ದಾಖಲಿಸಲಾಗಿತ್ತು. ಕಳೆದ ಶನಿವಾರ ಆಕೆಗೆ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಆದ್ರೆ ಗದ್ದೆಮ್ಮ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ ಮೃತಪಟ್ಟಿದ್ದಾರೆ. ಅವರ ಶವವನ್ನು ಪ್ಯಾಕ್ ಮಾಡಿ ವಾಹನಕ್ಕೆ ಹಾಕಲು ಅಲ್ಲಿನ ಡ್ರಿ ಗ್ರೂಪ್ ಸಿಬ್ಬಂದಿ ಐನೂರು ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಕೊನೆಗೂ ಬೆನ್ನು ಬಿದ್ದು 200 ರೂಪಾಯಿ ಪಡೆದಿದ್ದಾರೆ. ಶವವನ್ನು ವಾಹನಕ್ಕೆ ಹಾಕಿದ ಮೇಲೆ ಮತ್ತೆ 200 ರೂಪಾಯಿಗಾಗಿ ಪೀಡಿಸಿದ್ದಾರೆ. ಇದರಿಂದ ನೊಂದ ಗದ್ದೆಮ್ಮ ಸಂಬಂಧಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರ ಕಳ್ಳಾಟ ಪ್ರಕರಣ; ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ

ಘಟನೆ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಕಿಮ್ಸ್ ನಿರ್ದಶಕ ಡಾ. ಈಶ್ವರ್ ಹೊಸಮನಿಗೆ ಕರೆ ಮಾಡಿ ವರದಿ ಕೇಳಿದ್ದು, ತಪ್ಪಿತಸ್ಥರ ವಿರುದ್ದ ಕ್ರಮಕ್ಕೂ ಸೂಚನೆ ನೀಡಿದ್ದಾರಂತೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಮ್ಸ್ ನಿರ್ದೇಶಕ, ನಾನು ಕೂಡ ವಿಡಿಯೋ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಏಜನ್ಸಿ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿರೋ ಕೆಲವರು ಕಿಮ್ಸ್​​ಗೆ ಕಪ್ಪು ಮಸಿ ಬಳಿಯೋ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಏಜನ್ಸಿ ಹಾಗೂ ಹಣ ತಗೆದುಕೊಂಡವರ ವಿರುದ್ದ ಕಠೀಣ ಕ್ರಮ ಕೈಗೊಳ್ಳುತ್ತೇವೆ. ಅವರನ್ನು ಕೆಲಸದಿಂದ ತೆಗೆದುಹಾಕ್ತೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us