ರಾಜಕೀಯ ತಿರುವು ಪಡೆದುಕೊಂಡ ಬಿಜೆಪಿ ಯುವ ಮೋರ್ಚಾ ಮುಖಂಡ ಹತ್ಯೆ ಕೇಸ್; ಇದು ರಾಜಕೀಯ ಕೊಲೆ ಎಂದ ಪ್ರಲ್ಹಾದ್ ಜೋಶಿ

|

Updated on: Apr 19, 2023 | 3:39 PM

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್(36) ಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ನಾಯಕರು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ರಾಜಕೀಯ ತಿರುವು ಪಡೆದುಕೊಂಡ ಬಿಜೆಪಿ ಯುವ ಮೋರ್ಚಾ ಮುಖಂಡ ಹತ್ಯೆ ಕೇಸ್; ಇದು ರಾಜಕೀಯ ಕೊಲೆ ಎಂದ ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ, ಪ್ರವೀಣ್​​ ಕಮ್ಮಾರ
Follow us on

ಧಾರವಾಡ: ಕೋಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ಬಿಜೆಪಿ ಯುವ ಮೋರ್ಚಾ ಮುಖಂಡನೂ ಆದ ಪ್ರವೀಣ್(36) ಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಚುನಾವಣೆ ಹೊಸ್ತಿಲಲ್ಲೇ ಇಂತಹದೊಂದು ದುರ್ಘಟನೆ ನಡೆದಿದ್ದು ಘಟನೆ ಸಂಬಂಧ ಬಿಜೆಪಿ ನಾಯಕರು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧಾರವಾಡದ ಎಸ್​ಡಿಎಂ ಆಸ್ಪತ್ರೆಗೆ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ಇದು ರಾಜಕೀಯ ಕೊಲೆ ಎಂದು ಕಡ್ಡಿ ಮುರಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಗ್ರಾಮದ ಉಡಚಮ್ಮ ದೇವಿ ಜಾತ್ರೆ ವೇಳೆ ಕೆಲವರು ಕುಡಿದು ಜಗಳವಾಡುತ್ತಿದ್ದರು. ಆಗ ಗ್ರಾ.ಪಂ ಉಪಾಧ್ಯಕ್ಷ ಪ್ರವೀಣ್​​ ಕಮ್ಮಾರ ಜಗಳ ಬಿಡಿಸಿ ಕಳುಹಿಸಿದ್ದರು. ಜಗಳ ಮಾಡಿದ ಮತ್ತೊಂದು ಗುಂಪು ಪ್ರವೀಣ್​ಗೆ ಚಾಕು ಇರಿದಿದೆ. ತೀವ್ರ ಗಾಯಗೊಂಡಿದ್ದ ಪ್ರವೀಣ್​​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಧಾರವಾಡದ ಎಸ್​ಡಿಎಂ ಆಸ್ಪತ್ರೆಗೆ ಕೇಂದ್ರ ಸಚಿವ ಜೋಶಿ ಭೇಟಿ ನೀಡಿ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಬಿಜೆಪಿಯ ಕೆಳಹಂತದ ಕಾರ್ಯಕರ್ತನ ಹತ್ಯೆ ಆಗಿದೆ. ಇದು ರಾಜಕೀಯ ಕೊಲೆ. ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿರುವುದು ದುರ್ದೈವದ ಸಂಗತಿ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಹಿಂದೆ ಯೋಗೀಶ್ ಗೌಡ, ಈಗ ಪ್ರವೀಣ್ ಕೊಲೆ ಆಗಿದೆ.

ಇದನ್ನೂ ಓದಿ: ಧಾರವಾಡ: ಎರಡು ಗುಂಪಿನ ನಡುವೆ ಜಗಳ ಬಿಡಿಸಿ ಕಳಿಸಿದ್ದ ಗ್ರಾಮ‌ ಪಂಚಾಯಿತಿ ಉಪಾಧ್ಯಕ್ಷನನ್ನ ಚಾಕುವಿನಿಂದ ಇರಿದು ಕೊಲೆ

ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ರಾಜ್ಯ ಸರ್ಕಾರ ಅತ್ಯಂತ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು. ಕುಟುಂಬಕ್ಕೆ ನ್ಯಾಯ ಸಿಗಬೇಕು. ಕುಟುಂಬದೊಂದಿಗೆ ನಾನು, ಅಮೃತ ದೇಸಾಯಿ ಇರುತ್ತೇವೆ. ಕೊಲೆಗೆ ನಿಖರವಾಗಿ ಕಾರಣ ತಿಳಿದು ಬಂದಿಲ್ಲ. ಆದರೆ ಇದು ರಾಜಕೀಯಕ್ಕಾಗಿ ನಡೆದ ಕೊಲೆ ಅನ್ನೋ ಮಾಹಿತಿ ಸಿಕ್ಕಿದೆ. ಯಾರ ಜೊತೆಗೂ ಜಗಳ ಇಲ್ಲದ ವ್ಯಕ್ತಿ ಪ್ರವೀಣ್. ಈತ ಲಿಂಗಾಯತ ಪಂಚಮಸಾಲಿ ಸಮಾಜದ ಯುವಕ. ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಕುಟುಂಬಕ್ಕೆ ಪರಿಹಾರವನ್ನು ನೀಡುತ್ತೇವೆ ಎಂದು ತಿಳಿಸಿದರು.

ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಧಾರವಾಡ ಎಸ್ಪಿ ಲೋಕೇಶ ಜಗಲಾಸರ್, ಗರಗ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಿಳಿಸಿರುವ ಆರೋಪಿಗಳ ಪೈಕಿ ರಾಘವೇಂದ್ರ ಪಠಾತ್ ಸೇರಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಿಜೆಪಿ ಯುವ ಮೋರ್ಚಾ ಮೌನ ಪ್ರತಿಭಟನೆ

ಪ್ರವೀಣ್ ಹತ್ಯೆ ಖಂಡಿಸಿ ಧಾರವಾಡದಲ್ಲಿ ಬಿಜೆಪಿ ಯುವ ಮೋರ್ಚಾ ಮೌನ ಪ್ರತಿಭಟನೆ ನಡೆಸುತ್ತಿದೆ. ಡಿಸಿ ಕಚೇರಿ ಎದುರು ನೂರಕ್ಕೂ ಹೆಚ್ಚು ಕಾರ್ಯಕರ್ತರು ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜಕೀಯ ದ್ವೇಷದಿಂದಲೇ ಕೊಲೆ ಮಾಡಿದ್ದಾರೆ. ಈ ಹಿನ್ನೆಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:38 pm, Wed, 19 April 23