ಹುಬ್ಬಳ್ಳಿ: ಖೋಟಾ ನೋಟು (Kota Note) ಚಲಾವಣೆ ಮಾಡುತ್ತಿದ್ದ ಬಿಜೆಪಿ (BJP) ಮುಖಂಡ ಸಾಗರ್ ಕಾಶಪ್ಪ ಸೇರಿ ಮೂವರನ್ನು ಧಾರವಾಡ (Dharwad) ಜಿಲ್ಲೆ ಕುಂದಗೋಳ (Kundagol) ಠಾಣೆ ಪೊಲೀಸ್ರು ಬಂಧಸಿದ್ದಾರೆ. ಹಾಲು ಮಾರುವ ಸೋಗಿನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದನು. ಈ ಸಂಬಂಧ ಕುಂದಗೋಳ ಸಿಪಿಐ ಮಾರುತಿ ಗುಳಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 500 ರೂ. ಮುಖಬೆಲೆಯ 47 ಖೋಟಾ ನೋಟು ಮತ್ತು ಕಲರ್ ಜೆರಾಕ್ಸ್ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವ್ಯಕ್ತಿಗೆ ಚಾಕುವಿನಿಂದ ಇರಿದು ರೌಡಿಶೀಟರ್ ಪರಾರಿ
ಯಾದಗಿರಿ: ವ್ಯಕ್ತಿಗೆ ಚಾಕುವಿನಿಂದ ಇರಿದು ರೌಡಿಶೀಟರ್ ಪರಾರಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ. ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ನವಾಬ್ ಹವಾಲ್ದಾರ್ ಚಿರಾಗ್ ಅಲಿ ಎಂಬುವರ ಮೇಲೆ ಹಲ್ಲೆಗೈದು ಪರಾರಿಯಾಗಿದ್ದಾನೆ.
ಚಿರಾಗ್ ಅಲಿ ಪುತ್ರಿ ಬೀಬಿಯ ಬಗ್ಗೆ ಮಾನಹಾನಿ ಆರೋಪ ಮಾಡಿಕೊಂಡು ನವಾಬ್ ಓಡಾಡುತ್ತಿದ್ದನು. ಈ ಕಾರಣಕ್ಕೆ ಚಿರಾಗ್ ಮತ್ತು ಕುಟುಂಬಸ್ಥರು, ನವಾಬ್ನನ್ನು ಕೇಳಲು ಹೋದಾಗ ರೌಡಿಶೀಟರ್ ನವಾಬ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಗಾಯಾಳು ಚಿರಾಗ್ಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ರಕ್ತ ಚಂದನ ತುಂಡುಗಳ ಸಾಗಾಟ ಆರೋಪಿಗಳ ಬಂಧನ
ಬೆಂಗಳೂರು: ಅಕ್ರಮವಾಗಿ ರಕ್ತ ಚಂದನ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಐಡಿ ಅರಣ್ಯ ಘಟಕ ಪೊಲೀಸರು ಬಂಧಿಸಿದ್ದಾರೆ. ಅನಿಲ್ ಕುಮಾರ್ ಮತ್ತು ಕಿರಣ್ ಕುಮಾರ್ ಬಂಧಿತ ಆರೋಪಿಗಳು.
ಆರೋಪಿಗಳು ಕನಕಪುರದ ನ್ಯಾಯಾಲಯ ಮುಂಭಾಗದ ಪೈಪ್ ಲೈನ್ ರಸ್ತೆಯಲ್ಲಿ ಆಟೋದಲ್ಲಿ ಸಾಗಾಟ ಮಾಡುತ್ತಿದ್ದರು. ಆರೋಪಿ ಅನಿಲ್ ಸ್ವತಃ ಆಟೋ ಚಲಾಯಿಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಪೊಲೀಸರು ರಕ್ತಚಂದನ ತುಂಡುಗಳ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ರಕ್ತ ಚಂದನ ಸಾಗಿಸ್ತಿದ್ದ ಆರೋಪಿಗಳ ವಿರುದ್ದ ಕನಕಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ಅರಣ್ಯ ಕಾಯ್ದೆ ಅಡಿ ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸಿಲಾಗಿದೆ.
ಹಾಡಹಗಲೇ ಸುಲಿಗೆ ಮಾಡುತ್ತಿದ್ದವರ ಬಂಧನ
ರಾಯಚೂರು: ಹಾಡಹಗಲೇ ತರಕಾರಿ ಮತ್ತು ಹಣ್ಣಿನ ವ್ಯಾಪಾರಿಗಳನ್ನು ಸುಲಿಗೆ ಮಾಡುತ್ತಿದ್ದ ರವಿ, ರಮೇಶ್, ಈರಕುಮಾರ್ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 1 ಲಕ್ಷ ನಗದು, ಬೈಕ್ ಜಪ್ತಿ ಮಾಡಲಾಗಿದೆ. ಜು.29ರಂದು ಸಿಂಧನೂರು ತಾಲೂಕಿನ ಜವಳಗೆರಾ ಬಳಿ ತರಕಾರಿ ವ್ಯಾಪಾರಿ ಭೀಮಣ್ಣ ಎಂಬುವರನ್ನು ಅಡ್ಡಗಟ್ಟಿ ಆರೋಪಿಗಳು 1 ಲಕ್ಷ ನಗದು ದೋಚಿದ್ದರು. ಬಳಗಾನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೂ ಕುಂಡಗಳಲ್ಲಿ ಗಾಂಜಾ ಬೆಳೆದಿದ್ದ ಖತರ್ನಾಕ್ ಆಸಾಮಿಯ ಬಂಧನ
ತುಮಕೂರು: ಹೂ ಕುಂಡಗಳಲ್ಲಿ ಗಾಂಜಾ (cannabis) ಬೆಳೆದಿದ್ದ ಖತರ್ನಾಕ್ ಆಸಾಮಿಯ ಬಂಧನವಾಗಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ಪಟ್ಟಣದ ಜ್ಯೋತಿನಗರದಲ್ಲಿ ನಡೆದಿದೆ. ಗಾಂಜಾ ಸಮೇತ ಗಫರ್ ಅಲಿಖಾನ್(42) ಎಂಬಾತನನ್ನು ಬಂಧಿಸಲಾಗಿದೆ. ಆಟೋ ಚಾಲಕನಾಗಿ ಗುರುತಿಸಿಕೊಂಡಿದ್ದ ಗಫರ್ ಅಲಿಖಾನ್, ತನ್ನ ಮನೆಯ ಎರಡು ಹೂವಿನ ಕುಂಡಗಳಲ್ಲಿ ಗಾಂಜಾ ಸೊಪ್ಪು ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ಗುಬ್ಬಿ ಮತ್ತು ಚೇಳೂರು ಪೊಲೀಸರು ದಾಳಿ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಗುಬ್ಬಿ ತಹಶಿಲ್ದಾರ್ ಆರತಿ ಮಹಜರ್ ನಡೆಸಿದರು. ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Published On - 8:03 pm, Mon, 8 August 22