ಧಾರವಾಡದಲ್ಲಿ ರೈತರ ಸಭೆ, ಮತ್ತೆ ಮಹದಾಯಿ ಹೋರಾಟಕ್ಕೆ ನಿರ್ಣಯ

| Updated By: Rakesh Nayak Manchi

Updated on: Aug 08, 2023 | 6:04 PM

ನಾಲ್ಕು ಜಿಲ್ಲೆಗಳ ಒಂಭತ್ತು ತಾಲೂಕುಗಳ ಜನರ ಬಹು ದಶಕಗಳ ಬೇಡಿಕೆಯಾಗಿರೋ ಮಹದಾಯಿ ನದಿ ತಿರುವು ಯೋಜನೆಗೆ ಮತ್ತೊಮ್ಮೆ ವಿಘ್ನ ಎದುರಾಗೋ ಎಲ್ಲ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ರೈತರು ಮತ್ತೊಮ್ಮೆ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

ಧಾರವಾಡದಲ್ಲಿ ರೈತರ ಸಭೆ, ಮತ್ತೆ ಮಹದಾಯಿ ಹೋರಾಟಕ್ಕೆ ನಿರ್ಣಯ
ಮಹದಾಯಿ ಹೋರಾಟ ವಿಚಾರವಾಗಿ ಧಾರವಾಡದಲ್ಲಿ ಸಭೆ ನಡೆಸಿದ ರೈತರು ಮತ್ತು ಹೋರಾಟಗಾರರು
Follow us on

ಧಾರವಾಡ, ಆಗಸ್ಟ್ 8: ವಿವಿಧ ಜಿಲ್ಲೆಗಳ ಬಹುದಶಕಗಳ ಬೇಡಿಕೆಯಾಗಿರುವ ಮಹದಾಯಿ ಯೋಜನೆ (Mahadayi Project) ಇನ್ನೇನು ಆರಂಭವಾಗಿಯೇ ಬಿಟ್ಟಿತು ಅನ್ನುವಂತೆ ಪ್ರಚಾರ ಮಾಡಲಾಗಿತ್ತು. ಆದರೆ ನದಿ ತಿರುವು ಯೋಜನೆಗೆ ಮತ್ತೊಮ್ಮೆ ವಿಘ್ನ ಎದುರಾಗುವ ಲಕ್ಷಣಗಳು ಕಂಡುಬಂದ ಹಿನ್ನೆಲೆ ರೈತರು ಮತ್ತೊಮ್ಮೆ ಹೋರಾಟ ನಡೆಸಲು ನಿರ್ಧರಿಸಿದ್ದು, ಧಾರವಾಡದಲ್ಲಿ (Dharwad) ಸಭೆಯನ್ನೂ ನಡೆಸಿದ್ದಾರೆ.

ನಾಲ್ಕು ಜಿಲ್ಲೆಗಳ ಒಂಭತ್ತು ತಾಲೂಕುಗಳ ಜನರ ಬಹು ದಶಕಗಳ ಬೇಡಿಕೆಯಾಗಿರುವ ಮಹದಾಯಿ ನದಿ ತಿರುವು ಯೋಜನೆಗೆ ಮತ್ತೊಮ್ಮೆ ವಿಘ್ನ ಎದುರಾಗೋ ಎಲ್ಲ ಲಕ್ಷಣಗಳು ಕಂಡು ಬಂದಿವೆ. ಏಕೆಂದರೆ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಯೋಜನೆಗೆ ಎಲ್ಲ ರೀತಿಯ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಇದೇ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವವನ್ನೂ ಆಚರಿಸಿದ್ದರು.

ಆದರೆ, ಅದೆಲ್ಲ ಚುನಾವಣೆಯ ಸ್ಟಂಟ್ ಅನ್ನೋದು ಬಯಲಿಗೆ ಬಂದಿದೆ. ಗೋವಾ ಸರಕಾರ ಈ ಯೋಜನೆಗೆ ಈಗಾಗಲೇ ಮತ್ತೊಮ್ಮೆ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರಕಾರ ಇದೀಗ ಮಹದಾಯಿ ನ್ಯಾಯಾಧಿಕರಣದ ಅವಧಿಯನ್ನು ಮತ್ತೊಂದು ವರ್ಷ ಹೆಚ್ಚಿಸಿದೆ.

ಇದೇ ಕಾರಣಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಸಭೆ ಮಾಡಿದ 9 ತಾಲೂಕುಗಳ ರೈತರು ಹಾಗೂ ಹೋರಾಟಗಾರರು, ಈ ಎಲ್ಲ ಬೆಳವಣಿಗೆಗಳ ಹಿಂದಿನ ಮರ್ಮಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಕೆಲ ನಿರ್ಣಯ ಕೈಗೊಂಡರು.

ಕೆಲ ವರ್ಷಗಳ ಹಿಂದೆ ಈ ಯೋಜನೆಯ ಜಾರಿಗಾಗಿ ನಡೆದಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ನಡೆದ ಲಾಠಿ ಚಾರ್ಜ್ ವೇಳೆ ಅನೇಕರು ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ ಅನೇಕರು ಜೈಲಿಗೆ ಕೂಡ ಹೋಗಿ ಬಂದಿದ್ದರು. ಅದಾದ ಬಳಿಕ ನಡೆದ ಅನೇಕ ಬೆಳವಣಿಗೆಗಳು ಮಹದಾಯಿ ಯೋಜನೆಗೆ ಗ್ರೀನ್ ಸಿಗ್ನಲ್ ಸಿಗುವಂತೆ ಕಂಡು ಬಂದಿದ್ದವು. ಆದರೆ ಅಸಲಿಗೆ ಅದೆಲ್ಲ ಸುಳ್ಳು ಅನ್ನೋದು ಹೋರಾಟಗಾರರ ಆರೋಪವಾಗಿದೆ.

ಇದನ್ನೂ ಓದಿ: ನರ್ಸ್​​ಗಳನ್ನು ಗುರಿಯಾಗಿಸಿಕೊಂಡು ರೀಲ್ಸ್​: ಹುಬ್ಬಳ್ಳಿಯ ಕಿಮ್ಸ್​ನ 11 ಎಂಬಿಬಿಎಸ್​ ವಿದ್ಯಾರ್ಥಿಗಳು ಅಮಾನತು

ನಮ್ಮದು ಒಕ್ಕೂಟ ವ್ಯವಸ್ಥೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳನ್ನು ಕರೆದು ಸಭೆ ನಡೆಸಬೇಕಿತ್ತು. ಆಗ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ಮೂರೂ ಕಡೆಗಳಲ್ಲಿಯೂ ಬಿಜೆಪಿ ಸರಕಾರವೇ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಆ ಕೆಲಸ ಮಾಡಲಿಲ್ಲ. ಇದನ್ನೆಲ್ಲ ನೋಡಿದರೆ, ಅವರಿಗೆ ಒಕ್ಕೂಟ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಅನ್ನೋದು ಹೋರಾಟಗಾರರ ಅಸಮಾಧಾನ. ಈಗಾಗಲೇ ಒಂದು ಬಾರಿ ದೊಡ್ಡ ಪ್ರಮಾಣದ ಹೋರಾಟ ಮಾಡಲಾಗಿದೆ. ಮತ್ತೊಮ್ಮೆ ಅಂಥದ್ದೇ ಹೋರಾಟವನ್ನು ಮಾಡುವುದು ಅನಿವಾರ್ಯವಾಗಲಿದೆ ಎಂದು ಹೋರಾಟಗಾರರು ಹೇಳುತ್ತಿದ್ದಾರೆ.

ಈ ಹಿಂದೆ 2018 ರಲ್ಲಿ ನ್ಯಾಯಾಧಿಕರಣ 13.5 ಟಿಎಂಸಿ‌ ನೀರು ರಾಜ್ಯಕ್ಕೆ ನೀಡಲು ಆದೇಶ ನೀಡಿತ್ತು. ಅದರಲ್ಲಿ ಕುಡಿಯಲು 5.5 ಟಿಎಂಸಿ, ವಿದ್ಯುತ್ ಉತ್ಪಾದನೆಗೆ 8.02 ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ ಅದರಲ್ಲಿ ಒಂದು ಹನಿ ನೀರು ಬರಲಿಲ್ಲ. ಈ ವಿಚಾರವನ್ನು ಇಷ್ಟು ದಿನ ರಾಜಕಾರಣಕ್ಕೆ ಬಳಸಿಕೊಂಡು ಮತ ಹಾಕಿಸಿಕೊಂಡ ಜನಪ್ರತಿನಿಧಿಗಳಿಗೆ‌ ಹಾಗೂ ರಾಜಕೀಯ ಪಕ್ಷಗಳಿಗೆ ಕೂಡಾ ಬುದ್ಧಿ ಕಲಿಸಲು ಹೋರಾಟಗಾರರು ಅಣಿಯಾಗಿದ್ದಾರೆ.

ಹೀಗಾಗಿ‌ ಮುಂಬರುವ ಲೋಕಸಭಾ‌ ಚುನಾವಣೆ ವೇಳೆಗೆ ನೀರು ಬರದೇ‌ ಇದ್ದರೆ ಇವರಿಗೆ ಹೇಗೆ ಬುದ್ದಿ ಕಲಿಸಬೇಕು ಅನ್ನೋದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸಭೆಗೆ ಬಂದಿದ್ದ ರೈತರು ಹಾಗೂ ಹೋರಾಟಗಾರರು ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

ಬಹುತೇಕರು ಮತ್ತೊಮ್ಮೆ ಹೋರಾಟ ಆರಂಭಿಸುವುದೇ ಸೂಕ್ತ ಅನ್ನುವ ನಿರ್ಧಾರವನ್ನು ಪ್ರಕಟಿಸಿದರು. ಇದೇ ಕಾರಣಕ್ಕೆ ಸಭೆಯಲ್ಲಿ ಕೇಳಿ ಬಂದ ಅಭಿಪ್ರಾಯದಂತೆ ಇದೀಗ ಮತ್ತೊಮ್ಮೆ ಹೋರಾಟವನ್ನು ಆರಂಭಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಹೋರಾಟ ಆರಂಭವಾದರೆ ಅದು ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದಂತೂ ಸತ್ಯ.

ಟಿವಿ 9 ಡಿಜಿಟಲ್ ಜೊತೆಗೆ ಮಾತನಾಡಿದ ಮಹದಾಯಿ ಹೋರಾಟಗಾರ ಶಂಕರ ಅಂಬಲಿ, ಈ ಯೋಜನೆಯೊಂದು ಮತ ಬ್ಯಾಂಕ್ ಆಗಿ ಹೋಗಿದೆ. ಪ್ರತಿಬಾರಿಯೂ ಚುನಾವಣೆ ಬಂದಾಗ ಎಲ್ಲ ಪಕ್ಷಗಳ ನಾಯಕರು ಈ ಯೋಜನೆಯ ಬಗ್ಗೆ ಮಾತನಾಡುತ್ತಾರೆ. ಚುನಾವಣೆ ಬಳಿಕ ಎಲ್ಲರೂ ಒಂದೊಂದು ನೆಪ ಹೇಳಿ ಇದನ್ನು ಮರೆತು ಬಿಡುತ್ತಾರೆ. ಇದೇ ಕಾರಣಕ್ಕೆ 9 ತಾಲೂಕುಗಳ ಹೋರಾಟಗಾರರು, ರೈತರು ಸಭೆ ನಡೆಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದರು.

ಈಗಾಗಲೇ ಹಲವಾರು ವರ್ಷಗಳ ಕಾಲ ಹೋರಾಟ ನಡೆದಿದೆ. ಇದೀಗ ಮತ್ತೆ ಅಷ್ಟೇ ವರ್ಷಗಳವರೆಗೆ ಹೋರಾಟ ನಡೆಯುವ ಲಕ್ಷಣಗಳು ಕಂಡು ಬಂದಿವೆ. ಇದೇ ಕಾರಣಕ್ಕೆ ನಾವು ಈ ಬಾರಿ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಶಂಕರ ಹೇಳಿದ್ದಾರೆ.

ಟಿವಿ 9 ಡಿಜಿಟಲ್ ಜೊತೆಗೆ ಮಾತನಾಡಿದ ಮತ್ತೊಬ್ಬ ಹೋರಾಟಗಾರ ಲೋಕನಾಥ ಹೆಬಸೂರು, ಈ ಯೋಜನೆಯ ಜಾರಿಗಾಗಿ ಹೋರಾಟ ಮಾಡಿ ನಾವೆಲ್ಲರೂ ಲಾಠಿ ಏಟು ತಿಂದು, ಜೈಲು ಕೂಡ ನೋಡಿ ಬಂದಿದ್ದೇವೆ. ಆದರೆ ಈ ಯೋಜನೆ ಇದುವರೆಗೂ ಜಾರಿಯಾಗಲೇ ಇಲ್ಲ. ನಾವೆಲ್ಲ ನಮ್ಮ ವೈಯಕ್ತಿಕ ಬದುಕನ್ನು ಈ ಯೋಜನೆಯ ಸಲುವಾಗಿ ಕಳೆದುಕೊಂಡಿದ್ದೇವೆ. ಆದರೆ ಜನಪ್ರತಿನಿಧಿಗಳಿಗೆ ಇದ್ಯಾವುದೂ ಕಾಣುವುದೇ ಇಲ್ಲ ಎಂದರು.

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಕರೆದು ಸಭೆ ನಡೆಸಬೇಕು. ಆಗಷ್ಟೇ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಇಲ್ಲದಿದ್ದರೆ ಗೋವಾ ಹಾಗೂ ಮಹಾರಾಷ್ಟ್ರದವರು ಇದರ ವಿರುದ್ಧ ದನಿ ಎತ್ತುತ್ತಲೇ ಇರುತ್ತಾರೆ. ಹೀಗಾಗಿ ಈ ಯೋಜನೆ ಜಾರಿ ಆಗುವುದೇ ಇಲ್ಲ ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ