ಹುಬ್ಬಳ್ಳಿ, ಸೆಪ್ಟೆಂಬರ್ 14: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ (Idgah Maidan) ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನಿರಾಕರಣೆ ವಿಚಾರವಾಗಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ (Arvind Bellad) ನೇತೃತ್ವದ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೇ ವೇಳೆ, ಮಾತನಾಡಿದ ಅರವಿಂದ ಬೆಲ್ಲದ, ಅನುಮತಿ ಕೊಡದಿದ್ದರೂ ಈದ್ಗಾದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈದ್ಗಾದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕೊಟ್ಟರೂ ಮಾಡುತ್ತೇವೆ. ಅನುಮತಿ ಕೊಡದೇ ಇದ್ದರೂ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೆಳಿಗ್ಗೆಯಿಂದಲೂ ಹೋರಾಟ ಮಾಡುತ್ತಿದ್ದೇವೆ. ಆದರೆ ಇದುವರೆಗೂ ಕಮೀಷನರ್ ಮಾತ್ರ ಅನುಮತಿ ನೀಡಿಲ್ಲ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಶಾಂತಿಯುತವಾಗಿ ಮುಂದುವರೆಯಲಿದೆ. ಕೋರ್ಟ್ ಸ್ಪಷ್ಟವಾಗಿಯೇ ಹೇಳಿದ್ದು ಅನುಮತಿ ನೀಡಲು ಅವಕಾಶವಿದೆ. ಹೀಗಿದ್ದರೂ ಅನುಮತಿ ನೀಡಲು ಹಿಂದೇಟು ಹಾಕುತ್ತಿರುವುದು ಹಿಂದೂಗಳ ಭಾವನೆಗೆ ದಕ್ಕೆಯನ್ನುಂಟು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇಂತಹ ಜನವಿರೋಧಿ ನೀತಿಯನ್ನು ಸರ್ಕಾರ ಕೈ ಬಿಡಬೇಕು. ಸರ್ಕಾರದ ಕೈಗೊಂಬೆಯಾಗಿ ಕಮಿಷನರ್ ಕೆಲಸ ಮಾಡುತ್ತಿದ್ದಾರೆ. ಪಾಲಿಕೆ ಆಯುಕ್ತರಿಗೆ ಅನುಮತಿ ಕೊಡಲು ಯಾವುದೇ ತೊಡಕಿಲ್ಲ. ಕಾನೂನಾತ್ಮಕ ತೊಡಕಿಲ್ಲ ಎಂದು ಬೆಲ್ಲದ ಹೇಳಿದ್ದಾರೆ.
ಈ ಮಧ್ಯೆ ಪ್ರತಿಭಟನಾಕಾರರು ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಆಯುಕ್ತರ ಕಚೇರಿಗೆ ನುಗ್ಗಿದ್ದಾರೆ. ಪಾಲಿಕೆ ಆಯುಕ್ತರ ಕೊಠಡಿಗೆ ಮುತ್ತಿಗೆ ಹಾಕಿರುವ ಬಿಜೆಪಿ ಕಾರ್ಯಕರ್ತರು, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುಮತಿ ನೀಡುವವರೆಗೆ ಸ್ಥಳದಿಂದ ತೆರಳಲ್ಲವೆಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಅನುಮತಿ ನೀಡಬೇಕು; ಪ್ರಲ್ಹಾದ್ ಜೋಶಿ ಆಗ್ರಹ
ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗುರುವಾರ ಸಂಜೆ ಸರ್ಕಾರವನ್ನು ಆಗ್ರಹಿಸಿದ್ದರು. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಅವರು, ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಯನ್ನು ನಡೆಸಲು ಸರಕಾರ ಈ ಕೂಡಲೇ ಜಿಲ್ಲಾಡಳಿತಕ್ಕೆ ಸೂಚಿಸಿ ಅನುಮತಿ ನೀಡಬೇಕೆಂದು ಆಗ್ರಹಿಸುತ್ತೇನೆ ಎಂದು ಉಲ್ಲೇಖಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ