ವಿಘ್ನಗಳನ್ನ ನಿವಾರಿಸೋ ವಿಘ್ನೇಶ್ವರನ ಆರಾಧನೆಗೆ ವಿಘ್ನ, ಕರ್ನಾಟಕದ ಹಲವೆಡೆ ಗಣೇಶನ ಗಲಾಟೆ
Ganesh Chaturthi 2023: ಗಣೇಶ ಚತುರ್ಥಿ.. ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸೋ ಹಬ್ಬ. ಎಲ್ಲಾ ವಿಘ್ನಗಳನ್ನ ನಿವಾರಿಸೋ ವಿಘ್ನೇಶ್ವರನ ಆರಾಧನೆಗೆ ವಿಘ್ನ ಎದುರಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಣೇಶನ ಗಲಾಟೆ ಶುರುವಾಗಿದೆ.
ಬೆಂಗಳೂರು, (ಸೆಪ್ಟೆಂಬರ್ 15): ಮತ್ತೆ ಗಣೇಶನ (Ganesh Chaturthi 2023)ಆಗಮನವಾಗುತ್ತಿದೆ. ಭಾರತದಲ್ಲಿ ಯಾವುದೇ ಜಾತಿ, ಮತ, ಪಂಥಗಳ ಬೇಧಭಾವವಿಲ್ಲದೆ ಅತ್ಯಂತ ವೈಭವದಿಂದ ಆಚರಿಸುವ ಹಬ್ಬವೆಂದರೆ ಗಣೇಶ ಚತುರ್ಥಿ. ಸಕಲ ವಿಘ್ನಗಳನ್ನು ನಿವಾರಿಸುವ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾನೆ. ಆದ್ರೆ, ಕರ್ನಾಟಕದ ಹಲವು ಕಡೆಗಳಲ್ಲಿ ಗಣೇಶ ಕೂರಿಸುವ(Ganesha Idol) ವಿಚಾರಕ್ಕೆ ಗಲಾಟೆಗಳು ನಡೆಯುತ್ತಲೇ ಇವೆ. ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನೆ ಮಾಡುವ ವಿಚಾರಕ್ಕೆ ಬಿಗ್ ಫೈಟ್ ನಡೆಯುತ್ತಿದೆ. ಅತ್ತ ಬೆಳಗಾವಿಯಲ್ಲಿ ಮುಸ್ಲಿಂ ಸಮುದಾಯ ಗಣೇಶೋತ್ಸವಕ್ಕೆ ಸೌಹಾರ್ದಯುತ ಗಿಫ್ಟ್ ಕೊಟ್ರೆ, ಇತ್ತ ಶಿವಮೊಗ್ಗದಲ್ಲಿ ಏನಾಗುತ್ತೋ ಎನ್ನುವ ಟೆನ್ಷನ್. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಹುಬ್ಬಳ್ಳಿಯ ಈದ್ಗಾದಲ್ಲಿ ಗಣೇಶನನ್ನ ಕೂರಿಸುವಂತಿಲ್ಲ!
ಹುಬ್ಬಳ್ಳಿಯ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು ಎನ್ನುವ ಕೂಗು ತೀವ್ರ ಸ್ವರೂಪ ಪಡೆದುಕೊಂಡಿದೆ. ಆದ್ರೆ ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸಲು ಪಾಲಿಕೆ ಆಯುಕ್ತರು ಅನುಮತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಪಟ್ಟು ಹಿಡಿದಿವೆ. ಆದ್ರೆ ಅನುಮತಿ ಕೊಟ್ರೆ ಕೋಮುಗಲಭೆಗೆ ಅವಕಾಶ ಮಾಡಿಕೊಟ್ಟಂತಾಗುತ್ತೆ ಅಂತ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದನ್ನ ಖಂಡಿಸಿ ನಿನ್ನೆ ರಾತ್ರಿ ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಪಾಲಿಕೆ ಆಯುಕ್ತರ ಕೊಠಡಿಗೆ ಮುತ್ತಿಗೆ ಹಾಕಿ, ಆಕ್ರೋಶ ಹೊರಹಾಕಿದ್ರು. ನಾವು ಗಣೇಶನನ್ನ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದ್ರು.
ಗಣೇಶೋತ್ಸವಕ್ಕೆ ಮುಸ್ಲಿಂ ಸಮುದಾಯದ ‘ಸೌಹಾರ್ದ’
ಕುಂದಾನಗರಿ ಬೆಳಗಾವಿಯಲ್ಲಿ ಪ್ರತಿ ವರ್ಷ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 28ರಂದು ಗಣೇಶ ವಿಸರ್ಜನೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.. ಅದೇ ದಿನ ಈದ್ ಮಿಲಾದ್ ಮೆರವಣಿಗೆಯೂ ಫಿಕ್ಸ್ ಆಗಿತ್ತು.. ಎರಡೂ ಒಂದೇ ದಿನ ಇದ್ದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು. ಆದ್ರೆ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಈದ್ ಮಿಲಾದ್ ಮೆರವಣಿಗೆಯನ್ನು ಸೆಪ್ಟೆಂಬರ್ 28ರ ಬದಲು ಅಕ್ಟೋಬರ್ 1ರಂದು ನಡೆಸಲು ತೀರ್ಮಾನ ಕೈಗೊಳ್ಳಲಾಯ್ತು.
ಮಲೆನಾಡ ಹೆಬ್ಬಾಗಿಲಿನಲ್ಲೂ ಗಣೇಶ ಗಲಾಟೆ
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಇದೇ ಸಮಸ್ಯೆ ತಲೆದೋರಿದೆ.. ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆ ಹಾಗೂ ಈದ್ ಮಿಲಾದ್ ಹಬ್ಬದ ಮೆರವಣಿಗೆ ಸೆಪ್ಟೆಂಬರ್ 28ರಂದೇ ನಡೆಯಲಿದೆ.. ಇದು ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ತಲೆಬಿಸಿ ತಂದಿಟ್ಟಿದೆ.. ಹೇಳಿ ಕೇಳಿ.. ಶಿವಮೊಗ್ಗ ಕೋಮು ಸೂಕ್ಷ್ಮ ಪ್ರದೇಶ. ಒಂದೇ ದಿನ ಎರಡೆರಡು ಆಚರಣೆ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆ.ಸದ್ಯ ಸಂಧಾನ ಸಭೆ ನಡೆಯುತ್ತಿದ್ದು, ಚಂದ್ರನ ದರ್ಶನವಾದ ಬಳಿಕ ಹಬ್ಬದ ದಿನ ನಿರ್ಧಾರವಾಗುತ್ತೆ.
ಕರ್ನಾಟಕದ ಹಲವೆಡೆ ವಿಘ್ನೇಶ್ವರನ ಆರಾಧನೆಗೆ ವಿಘ್ನ
ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಕೊಪ್ಪಳ(ಗಂಗಾವತಿ), ಚಿತ್ರದುರ್ಗ ಸೇರಿದಂತೆ ಕರ್ನಾಟಕದ ಹಲವೆಡೆ ಈ ಹಿಂದೆ ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಕೋಮು ಸಂಘರ್ಷಗಳು ನಡೆದ ಉದಾಹರಣೆಗಳಿವೆ. ಈಗಲೂ ಸಹ ಕೆಲವೆಡೆ ಗಣೇಶನ ಗಲಾಟೆಗಳು ನಡೆಯುತ್ತಲೇ ಇವೆ. ಹೀಗಾಗಿ ಈ ಬಾರಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಗೃಹ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡಿದ್ದು, ಹಲವೆಡೆ ಹಿಂದೂ -ಮುಸ್ಲಿಂ ಮುಖಂಡರ ಸಭೆ ನಡೆಸುತ್ತಿದ್ದಾರೆ. ಅಲ್ಲದೇ ಗಣಪತಿ ಪ್ರತಿಷ್ಠಾಪಿಸುವ ಸಂಘ-ಸಂಸ್ಥೆಗಳು, ಮಂಡಳಿಗಳಿಗೂ ಸಹ ಆಯಾ ಪೊಲೀಸ್ ಠಾಣೆಗಳಿಂದ ಕೆಲ ಸಲಹೆ ಸೂಚನೆಗಳನ್ನು ಹೊರಡಿಸಲಾಗಿದೆ. ಇಂತಿಷ್ಟು ದಿನಗಳು ಮಾತ್ರ(5, 9, 11 ದಿನಗಳು) ಗಣೇಶನ ಕೂಡಿಸುವ ಷರತ್ತುಗಳನ್ನು ಹಾಕಲಾಗಿದೆ.
ಇತ್ತ ಈ ಬಾರಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರಿ ರಜೆಯ ಬಗ್ಗೆ ಗೊಂದಲ ಮುಂದುವರಿದಿದೆ. ಸೆಪ್ಟೆಂಬರ್ 19ರಂದು ಗಣೇಶ ಚತುರ್ಥಿ ಘಳಿಗೆ ಬಂದರೆ, ರಾಜ್ಯ ಸರ್ಕಾರ ಮಾತ್ರ ಸೆಪ್ಟೆಂಬರ್ 18ರಂದು ರಜೆ ಘೋಷಿಸಿದೆ. ಗಣೇಶ ಚತುರ್ಥಿಗೆ 18ರ ಬದಲು 19ರಂದು ಸರ್ಕಾರಿ ರಜೆ ಘೋಷಣೆ ಮಾಡುವಂತೆ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಏನೇ ಹೇಳಿ ಗಣೇಶೋತ್ಸವಕ್ಕೆ ಸಂಕಷ್ಟ ಎದುರಾಗಿದೆ. ಈ ವಿಘ್ನಗಳು ಅದ್ಹೇಗೆ ದೂರಾಗಿ ನಿರ್ವಿಘ್ನವಾಗಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡುತ್ತೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ