ಧಾರವಾಡ: ಅವತ್ತು ಜೂನ್ 9, ಮಧ್ಯಾಹ್ನದ ಹೊತ್ತಿಗೆ ಧಾರವಾಡ(Dharwad) ಗ್ರಾಮೀಣ ಠಾಣೆ ಪೊಲೀಸರಿಗೆ ಕರೆಯೊಂದು ಬಂದಿತ್ತು. ಧಾರವಾಡ ತಾಲೂಕಿನ ಗೋವನಕೊಪ್ಪ ರಸ್ತೆಯ ಪಕ್ಕದಲ್ಲಿನ ಹೊಲದಲ್ಲಿ ಮಹಿಳೆಯ ಶವ ಒಂದು ಪತ್ತೆಯಾಗಿರೋದಾಗಿ ಮಾಹಿತಿ ಬಂದಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರಿಗೆ ಇದು ಕೊಲೆ ಎಂದು ಗೊತ್ತಾಗಿತ್ತು. ಹೀಗೆ ಅವತ್ತು ಹೊಲವೊಂದರಲ್ಲಿ ಕೊಲೆಯಾಗಿ ಹೋಗಿದ್ದ ಮಹಿಳೆ ಹೆಸರು 45 ವರ್ಷದ ರೂಪಾ ಸವದತ್ತಿ. ಧಾರವಾಡ ನಗರದ ಕಿಲ್ಲಾ ಪ್ರದೇಶದ ರೂಪಾಗೆ, ನಿತ್ಯವೂ ಗಾಂಧಿ ವೃತ್ತದ ಬಳಿಯ ದರ್ಗಾಕ್ಕೆ ಹೋಗೋ ರೂಢಿ ಇತ್ತು. ಇದೇ ರೀತಿ ಅವತ್ತು ದರ್ಗಾಕ್ಕೆ ಹೋಗಿ, ಅಲ್ಲಿಂದ ಹೊರ ಬಂದಿದ್ದ ಆಕೆ ಕಾಣೆಯಾಗಿದ್ದಳು. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದರೆ, ಹಾಗೆ ನಾಪತ್ತೆಯಾದ ಮರುದಿನ ಹೊಲವೊಂದರಲ್ಲಿ ರೂಪಾಳ ಶವ ಪತ್ತೆಯಾಗಿತ್ತು. ಈ ವೇಳೆ ಅಲ್ಲಿದ್ದ ಓರ್ವ ವ್ಯಕ್ತಿ ಕುಟುಂಬಸ್ಥರನ್ನೆಲ್ಲ ಸಂತೈಸುತ್ತಾ ಓಡಾಡುತ್ತಿದ್ದ. ಅಲ್ಲದೇ ಹೀಗೆ ರೂಪಾಳನ್ನು ಪತ್ತೆ ಹಚ್ಚಲು ಹಗಲು-ರಾತ್ರಿ ಅನ್ನದೇ ಹುಡುಕಾಡಿದ್ದಾಗಿ ಹೇಳಿದ್ದ.ಹೀಗೆ ಆಕೆಯನ್ನ ಹುಡುಕಿರೋದಾಗಿ ಹೇಳಿದ ಈತನೇ ಇದೀಗ ಕೊಲೆ ಮಾಡಿದ್ದಾನೆ.
ಹೌದು, ಹೀಗೆ ಅಮಾಯಕನಂತೆ ಅವತ್ತು ಫೋಸ್ ಕೊಟ್ಟ ದುರುಳನೇ ರೂಪಾಳನ್ನು ಕೊಂದು ಹಾಕಿದ್ದ. ಸಂಬಂಧದಲ್ಲಿ ರೂಪಾ ಈ ರಾಕೇಶನಿಗೆ ಅತ್ತಿಗೆ ಆಗಬೇಕು. ಇಬ್ಬರ ವಯಸ್ಸಿನಲ್ಲಿ ಹತ್ತು ವರ್ಷಗಳ ಅಂತರವಿದೆ. ರಾಕೇಶನ ಕಟುಮಸ್ತಾದ ದೇಹವನ್ನು ನೋಡಿ ಐದಾರು ವರ್ಷಗಳ ಹಿಂದೆ ರೂಪಾ ಮೋಹಿಸ ತೊಡಗಿದ್ದಳು. ಕೆಲವೇ ದಿನಗಳಲ್ಲಿ ಇಬ್ಬರೂ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದರು. ಅವಕಾಶ ಸಿಕ್ಕಾಗಲೆಲ್ಲ ಹೊರಗಡೆ ಹೋಗಿ ಸರಸವಾಡಿ ಬರುತ್ತಿದ್ದರು. ಅದರಲ್ಲೂ ಇಬ್ಬರೂ ಸೇರಿದರೆ ಹೆಚ್ಚಾಗಿ ಹೋಗುತ್ತಿದ್ದುದೇ ಗೋವನಕೊಪ್ಪ ರಸ್ತೆಯ ಕಡೆಗೆ. ಇನ್ನು ಜೂನ್ 8 ರಂದು ಕೂಡ ದರ್ಗಾಕ್ಕೆ ಹೋಗಿ ಹೊರಗೆ ಬಂದ ರೂಪಾ ರಾಕೇಶ್ಗೆ ಫೋನ್ ಮಾಡಿದ್ದಾಳೆ. ಆಕೆಯನ್ನು ಕರೆದುಕೊಂಡು ಗೋವನಕೊಪ್ಪ ಗ್ರಾಮದ ರಸ್ತೆ ಕಡೆ ಬೈಕ್ನಲ್ಲಿ ಹೋದ ರಾಕೇಶ, ರಸ್ತೆ ಪಕ್ಕದ ಹೊಲದೊಳಗೆ ಆಕೆಯನ್ನು ಕರೆದೊಯ್ದಿದ್ದಾನೆ.
ಇದನ್ನೂ ಓದಿ:Dharwad News: ಮನೆಯಿಂದ ಹೊರಹೋದ ಮಹಿಳೆ ಶವವಾಗಿ ಪತ್ತೆ; ಕಣ್ಣೀರಿನಲ್ಲಿ ಕುಟುಂಬ
ಈ ವೇಳೆ ಫೋನ್ ಮಾಡಿದಾಗ ಸ್ವೀಕರಿಸದೇ ಇದ್ದಾಗ ದೊಡ್ಡ ರಂಪಾಟ ಮಾಡುತ್ತಿದ್ದ ರೂಪಾ, ಅವತ್ತು ಕೂಡ ಅದೇ ರೀತಿ ಜಗಳಕ್ಕೆ ಇಳಿದಿದ್ದಾಳೆ. ಆಕೆಯ ರಂಪಾಟದಿಂದ, ಕಿರಿಕಿರಿಯಿಂದ ಬೇಸತ್ತು ಹೋಗಿದ್ದ ರಾಕೇಶ, ಆಕೆಯೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಈ ವೇಳೆ ಒಮ್ಮೆ ಜೋರಾಗಿ ಆಕೆಗೆ ಹೊಡೆದಿದ್ದಾನೆ. ಆಕೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಅಲ್ಲಿಯೇ ಇದ್ದ ಕಲ್ಲಿನಿಂದ ಜೋರಾಗಿ ತಲೆ, ಮುಖಕ್ಕೆ ಚಚ್ಚಿದ್ದಾನೆ. ಅಲ್ಲಿಗೆ ರೂಪಾಳ ಕಥೆ ಮುಗಿದೇ ಹೋಗಿದೆ. ಬಳಿಕ ನೇರವಾಗಿ ಮನೆಗೆ ಬಂದು ಏನೂ ನಡೆದೇ ಇಲ್ಲ, ಎನ್ನುವಂತೆ ಇದ್ದಾನೆ. ನಂತರ ತಾನೇ ರೂಪಾಳ ಪತಿ ಲಕ್ಷ್ಮಣನನ್ನು ಕರೆದೊಯ್ದು ಉಪನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ.
ಅಲ್ಲದೇ ಬಳಿಕ ಹುಡುಕಾಟದ ನಾಟಕವಾಡಿ, ರೂಪಾಳನ್ನು ಕೊಲೆ ಮಾಡಿದ್ದ ರಸ್ತೆಗೆ ಯಾರಿಗೂ ಗೊತ್ತಾಗದಂತೆ ಕರೆದೊಯ್ದಿದ್ದಾನೆ. ತಾನು ಬುದ್ಧಿವಂತ ಅಂತಾ ತೋರಿಸಿಕೊಂಡ ರಾಕೇಶನ ವರ್ತನೆ ಬಗ್ಗೆ ಅನುಮಾನ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕರೆಯಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಗೆ ಬಂದಿದೆ. ಇದೀಗ ರಾಕೇಶನನ್ನು ಬಂಧಿಸಿರೋ ಪೊಲೀಸರು, ಜೈಲಿಗೆ ಅಟ್ಟಿದ್ದಾರೆ. ಅತ್ತಿಗೆಯೊಂದಿಗೆ ಸರಸ-ಸಲ್ಲಾಪವಾಡಿದ್ದ ಮೈದುನ ಎಲ್ಲರೆದುರೇ ನಾಟಕ ಮಾಡಿ, ಇದೀಗ ಜೈಲಿ ಕಂಬಿ ಎಣಿಸುತ್ತಿದ್ದಾನೆ.
ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9 ಧಾರವಾಡ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Tue, 13 June 23