ಪ್ರತ್ಯೇಕ ಘಟನೆ: ನೇಣು ಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆ, ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಜಿಲ್ಲೆಯ ಹೊನ್ನಾವರ ತಾಲೂಕಿನ ಬೈಲ್ ಗದ್ದೆ ಗ್ರಾಮದಲ್ಲಿ ನೇಣು ಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತರ ಕನ್ನಡ: ಜಿಲ್ಲೆಯ ಹೊನ್ನಾವರ ತಾಲೂಕಿನ ಬೈಲ್ ಗದ್ದೆ ಗ್ರಾಮದಲ್ಲಿ ನೇಣು ಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ವೆಂಕಟ ತಿಪ್ಪಣ್ಣ ನಾಯ್ಕ(65), ಪತ್ನಿ ಗೋಪಿ ವೆಂಕಟ ನಾಯ್ಕ(62) ಇಬ್ಬರು ಅಡಿಗೆ ಕೋಣೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆನೇಕಲ್: ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಬೆಂಗಳೂರು ಗ್ರಾಮಂತರ: ಆನೇಕಲ್ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಂಜು (32 )ಎಂಬ ಮಹಿಳೆ ಮೃತ ದುರ್ದೈವಿ. ದೇಹವನ್ನು ಕತ್ತರಿಸಿ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಲಾಗಿದೆ. ಸ್ಥಳಕ್ಕೆ ಅಡಿಷನಲ್ ಎಸ್ ಪಿ ಪುರುಷೋತ್ತಮ್ ಹಾಗೂ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತ ಮಹಿಳೆಯನ್ನ ಕೊಲೆ ಮಾಡಿರುವುದಾಗಿ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ರಾಮನಗರ: ಜಾತ್ರೆ ಮುಗಿಸಿ ಹಿಂದಿರುಗುವಾಗ ಬೈಕ್ ಅಪಘಾತ, ಇಬ್ಬರು ಸಾವು
ಗೃಹಿಣಿ ಅನುಮಾನಾಸ್ಪದ ಸಾವು; ಪತಿ ವಿರುದ್ದ ಹತ್ಯೆ ಆರೋಪ
ಚಿತ್ರದುರ್ಗ: ತಾಲೂಕಿನ ಗಾರೇಹಟ್ಟಿ ಗ್ರಾಮದಲ್ಲಿ ಗೃಹಿಣಿ ಪೂರ್ಣಿಮಾ(22) ಎಂಬುವವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪತಿ ಚಿತ್ರಲಿಂಗಪ್ಪ ವಿರುದ್ಧ ಹತ್ಯೆ ಆರೋಪ ಕೇಳಿ ಬಂದಿದೆ. 1 ವರ್ಷದ ಹಿಂದೆ ಚಿತ್ರಲಿಂಗಪ್ಪ ಹಾಗೂ ಪೂರ್ಣಿಮಾ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಬೇರೆ ಜಾತಿ ಎಂಬ ಕಾರಣಕ್ಕೆ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನ ಹತ್ಯೆ ಮಾಡಲಾಗಿದೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ. ಚಿತ್ರದುರ್ಗ ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬದ ನಡುವೆ ಗಲಾಟೆ, ಕೊಲೆಯಲ್ಲಿ ಅಂತ್ಯ
ಬೀದರ್: ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬದ ನಡುವೆ ಗಲಾಟೆಯಾಗಿ ಸಿದ್ದರಾಮಪ್ಪ ಎನ್ನುವ 65 ವರ್ಷದ ಮುದುಕನನ್ನ ಕೊಲೆ ಮಾಡಲಾಗಿದೆ. ಎರಡು ಕುಟುಂಬಗಳ ಗಲಾಟೆಯಲ್ಲಿ ಸಿದ್ದರಾಮಪ್ಪನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಬಳಿಕ ಗಾಯಗೊಂಡ ಅಜ್ಜನನ್ನ ಬೀದರ್ ಬ್ರೀಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಆತ ಮೃತಪಟ್ಟಿದ್ದಾನೆ. ಇನ್ನು ಘಟನೆ ಕುರಿತು ಐವರ ವಿರುದ್ಧ ಜನವಾಡ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಐವರು ಪರಾರಿಯಾಗಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Wed, 5 April 23