ಹುಬ್ಬಳ್ಳಿ, (ಡಿಸೆಂಬರ್ 06): ಮೊನ್ನೇ ಅಂದರೆ ಡಿಸೆಂಬರ್ 4ರಂದು ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ(Hubballi Muslim convention) ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ವ್ಯಕ್ತಿ ಭಾಗವಹಿಸಿದ್ದು, ಆತನ ಜತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಆರೋಪಿಸಿದ್ದಾರೆ. ಇದಕ್ಕೆ ಇದೀಗ ಸ್ವತಃ ಕಾರ್ಯಕ್ರಮ ಆಯೋಜಕ, ಬಾಷಾಪೀರ್ ದರ್ಗಾದ ಧರ್ಮಗುರು ಸೈಯದ್ ತಾಜುದ್ದೀನ್ ಖಾದ್ರಿ ಸ್ಪಷ್ಟನೆ ನೀಡಿದ್ದು, ಐಸಿಸ್ ಉಗ್ರರ ಜತೆ ಯಾರೆಲ್ಲಾ ನಂಟು ಇದ್ದರೆಂಬುದನ್ನು ಹೇಳಲಿ. ಉಗ್ರರ ಜತೆಗಿನ ನಂಟು ಇದ್ದವರ ಹೆಸರನ್ನು ಬಹಿರಂಗಪಡಿಸಲಿ ಎಂದು ಯತ್ನಾಳ್ಗೆ ಸವಾಲು ಹಾಕಿದರು.
ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಸೈಯದ್ ತಾಜುದ್ದೀನ್ ಖಾದ್ರಿ, ಅಂದು ಸಮಾವೇಶಕ್ಕೆ 150ಕ್ಕೂ ಹೆಚ್ಚು ಸೂಫಿಗಳಿಗೆ ಆಹ್ವಾನ ನೀಡಲಾಗಿತ್ತು. 100ಕ್ಕೂ ಹೆಚ್ಚು ಧರ್ಮ ಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಯಾರೊಬ್ಬರೂ ಐಸಿಸ್ ಉಗ್ರರ ಜತೆ ನಂಟು ಹೊಂದಿದ್ದವರು ಇಲ್ಲ. ಪೊಲೀಸ್ ಇಲಾಖೆ ಸೂಚನೆ ಮೇರೆಗೆ ವೇದಿಕೆಯ ಮೇಲೆ 25 ಜನರಿಗೆ ಅವಕಾಶ ನೀಡಲಾಗಿತ್ತು. ಯಾರೆಲ್ಲಾ ಭಾಗವಹಿಸಲಿದ್ದಾರೆಂಬ ಎಲ್ಲಾ ಮಾಹಿತಿಯನ್ನು ಪೊಲೀಸ್ ಇಲಾಖೆ, ಧಾರವಾಡ ಜಿಲ್ಲಾಡಳಿತಕ್ಕೆ ನಾವು ನೀಡಿದ್ದೆವು. ಐಸಿಸ್ ಉಗ್ರರ ಜತೆ ಯಾರೆಲ್ಲಾ ನಂಟು ಇದ್ದರೆಂಬುದನ್ನು ಯತ್ನಾಳ್ ಹೇಳಲಿ ಎಂದರು.
ಇದನ್ನೂ ಓದಿ: ಮುಸ್ಲಿಂ ಸಮಾವೇಶ: ಐಸಿಸ್ ಸಂಪರ್ಕ ಇರುವವನ ಜತೆ ವೇದಿಕೆ ಹಂಚಿಕೊಂಡ್ರಾ ಸಿದ್ದರಾಮಯ್ಯ?
ಉಗ್ರರ ಜತೆಗಿನ ನಂಟು ಇದ್ದವರ ಹೆಸರನ್ನು ಶಾಸಕ ಯತ್ನಾಳ್ ಬಹಿರಂಗಪಡಿಸಲಿ ಸವಾಲು ಹಾಕಿದ ಸೈಯದ್ ತಾಜುದ್ದೀನ್ ಖಾದ್ರಿ, ಒಂದು ವೇಳೆ ಐಎಸ್ ಉಗ್ರರ ಜೊತೆಗೆ ನಂಟು ಇದ್ದಿದ್ದು ಆದ್ರೆ ಗುಪ್ತ ಇಲಾಖೆಗೆ ಮಾಹಿತಿ ಇರಬೇಕಾಗಿತ್ತು. ನಾವು ಎಲ್ಲಾ ತನಿಖೆಗೆ ಸಿದ್ಧರಾಗಿದ್ದೇವೆ. ಸರಿಯಾದ ರೀತಿಯಲ್ಲಿ ತನಿಖೆ ಆಗಲೆಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ