
ನವದೆಹಲಿ, ಅಕ್ಟೋಬರ್ 27: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್ ಸಂಬಂಧ ವಿನಯ್ ಕುಲಕರ್ಣಿಗೆ ಜಾಮೀನು ಪ್ರಶ್ನಿಸಿ ಸಿಬಿಐ ಮತ್ತು ಯೋಗೀಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆದಿದೆ. ನ್ಯಾ.ಪ್ರಶಾಂತ್ ಕುಮಾರ್, ನ್ಯಾ.ಶ್ರೀಚಂದ್ರಶೇಖರ್ ಪೀಠ ವಾದ ಮತ್ತು ಪ್ರತಿವಾದ ಆಲಿಸಿದ್ದು, ರಾಜಕೀಯ ಕೊಲೆಗಳನ್ನು ಕಠಿಣವಾಗಿ ಪರಿಗಣಿಸಬೇಕು. ರಾಜಕೀಯ ಕೊಲೆಗಾರರು ಕಾನೂನಿನಿಂದ ತಪ್ಪಿಸಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಐದು ದಿನಗಳ ಗಡುವು ನೀಡಿ, ಆದೇಶ ಕಾಯ್ದಿರಿಸಿದೆ.
ಸಿಬಿಐ ಪರ ಎಎಸ್‌ಜಿ ಎಸ್.ವಿ.ರಾಜು ವಾದ ಮಂಡಿಸಿದ್ದು, ಸುಪ್ರೀಂಕೋರ್ಟ್ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ ದೋಷಿ ಎಂಬ ತೀರ್ಪಿಗೆ ಯಾವಾಗ ತಡೆ ನೀಡಬೇಕೆಂಬ ಬಗ್ಗೆ ನಿಯಮವಿದೆ ಎಂದು ಕೋರ್ಟ್ ಗಮನ ಸೆಳೆದಿದ್ದಾರೆ. ಶಾಸಕನಾಗಿ ಸಾಕ್ಷ್ಯನಾಶದ ಆರೋಪವೂ ಇವರ ಮೇಲಿದೆ. ಇದೇ ಕಾರಣಕ್ಕೆ ಹಿಂದೆ ವಿನಯ್ ಕುಲಕರ್ಣಿ ಜಾಮೀನು ರದ್ದಾಗಿತ್ತು. ಭ್ರಷ್ಟಾಚಾರ ಪ್ರಕರಣಗಳಲ್ಲಿ ತಡೆ ನೀಡಬಾರದೆಂದು ಹಿಂದಿನ ತೀರ್ಪುಗಳಿವೆ. ಸಾಕ್ಷಿಗಳಿಗೆ ಆಮಿಷ ಒಡ್ಡಲು ಯತ್ನಿಸಿರುವ ಕಾರಣ ಇದು ಕೂಡ ಭ್ರಷ್ಟಾಚಾರದ ಭಾಗವೇ ಆಗಿದೆ. ಮಾಫಿ ಸಾಕ್ಷಿಯ ಹೇಳಿಕೆಯಿಂದಲೇ ಆರೋಪಿಯನ್ನು ಶಿಕ್ಷಿಸಬಹುದು. ಈ ಕೇಸಿನಲ್ಲಿ ಮಾಫಿ ಸಾಕ್ಷಿ ಜೊತೆಗೆ ಪೂರಕ ಸಾಕ್ಷಿಗಳಿವೆ. ಕ್ರಿಮಿನಲ್ ಹಿನ್ನೆಲೆಯಿಲ್ಲವೆಂಬ ಹೈಕೋರ್ಟ್‌ನ ಅಭಿಪ್ರಾಯದಲ್ಲಿ ಲೋಪವಿದೆ. ಹಿಂದಿನ 2 ಕೇಸ್ಗಳನ್ನು ನೀಡಿದ್ದರೂ ಅದನ್ನು ಪರಿಗಣಿಸಿಲ್ಲ. ಹೀಗಾಗಿ ಶಿಕ್ಷೆಗೆ ತಡೆ, ಜಾಮೀನು ನೀಡಿದ್ದು ಸರಿಯಲ್ಲ ಎಂದವರು ವಾದಿಸಿದ್ದರು.
ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ವಿರುದ್ಧದ ಮೇಲ್ಮನವಿ ವಿಚಾರಣೆ ಅ.27ಕ್ಕೆ ಮುಂದೂಡಿದ ಸುಪ್ರೀಂ
ಮೊದಲ ಆರೋಪಪಟ್ಟಿಯಲ್ಲಿ ವಿನಯ್ ಕುಲಕರ್ಣಿ ಹೆಸರು ಇರಲಿಲ್ಲ. ಮೂರು ವರ್ಷಗಳ ಕಾಲ ಧಾರವಾಡದಲ್ಲಿ ಸಾಕ್ಷ್ಯ ವಿಚಾರಣೆ ನಡೆದಿದೆ. 4 ವರ್ಷಗಳ ಬಳಿಕ ವಿನಯ್ ಕುಲಕರ್ಣಿ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಕೆ ಮಾಡಿದೆ. ಮಾಫಿಸಾಕ್ಷಿ ಬಸವರಾಜ ಮುತ್ತಗಿ ಕೇಸ್‌ನ ಏಕೈಕ ಸಾಕ್ಷಿಯಾಗಿದ್ದಾರೆ. 30ನೇ ಸಾಕ್ಷಿ ಹೊರತುಪಡಿಸಿ ಉಳಿದವರು ಪ್ರತಿಕೂಲ ಸಾಕ್ಷಿಯಾಗಿದ್ದಾರೆ. ಹಿಂದೆ ನಡೆದ ಸಾಕ್ಷ್ಯ ವಿಚಾರಣೆಯನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ. ಶಿಕ್ಷೆಗೆ ತಡೆ ನೀಡಿದರೆ ಶಾಸಕ ಸ್ಥಾನ ನಷ್ಟವಾಗುತ್ತದೆ. ಮುಂದೆ ಹೈಕೋರ್ಟ್‌ನ ತೀರ್ಪು ಅದನ್ನು ಸರಿಪಡಿಸುವುದಿಲ್ಲ ಎಂದು ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದಿಸಿದ್ದಾರೆ. ಭೂ ವಿವಾದದಿಂದಾಗಿ ಯೋಗೀಶ್ ಗೌಡ ಕೊಲೆಯಾಗಿದೆ ಎಂದು ಆತನ ಪತ್ನಿಯೇ ಕೋರ್ಟ್‌ನಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಇದನ್ನು ನಿರ್ಲಕ್ಷಿಸಿ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎ-1 ಆಗಿದ್ದ ಮಾಫಿ ಸಾಕ್ಷಿ ಹೇಳಿಕೆ ಆಧರಿಸಿ ತೀರ್ಪು ನೀಡಿದೆ. ಈ ತೀರ್ಪಿಗೆ ಹೈಕೋರ್ಟ್ ತಡೆ ನೀಡಿರುವುದು ಸೂಕ್ತವಾಗಿದೆ. ಹೀಗಾಗಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡದಂತೆ ಅವರು ಮನವಿ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:40 pm, Tue, 27 October 26