ಪಿಂಚಣಿಯನ್ನು ತಪ್ಪು ಲೆಕ್ಕ ಹಾಕಿದ ಹುಬ್ಬಳ್ಳಿ PF ಇಲಾಖೆಗೆ 6.42 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ

| Updated By: ಸಾಧು ಶ್ರೀನಾಥ್​

Updated on: Sep 13, 2023 | 7:20 PM

ಹುಬ್ಬಳ್ಳಿಯ ಪ್ರಾವಿಡೆಂಟ್ ಫಂಡ್ ಇಲಾಖೆಯವರು ತಮ್ಮ ನಿವೃತ್ತಿ ನಂತರದ ಪಿಂಚಣಿಯನ್ನು ತಪ್ಪು ಲೆಕ್ಕ ಹಾಕಿ ಸೇವಾ ನ್ಯೂನತೆ ಎಸಗಿದ್ದಾರೆಂದು 6 ಪಿಂಚಣಿದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆದರೆ ಪಿ.ಎಫ್. ಇಲಾಖೆಯು ತನ್ನ ಪಿಂಚಣಿ ಲೋಕ್ ಅದಾಲತ್‌ನಲ್ಲಿ ದೂರುದಾರ ಭಾಗವಹಿಸಿ, ಪರಿಹಾರ ಕಂಡುಕೊಳ್ಳದೇ ಅನಗತ್ಯವಾಗಿ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದು ತಪ್ಪು ಅಂತಾ ವಾದಿಸಿತ್ತು. ಆದರೆ ಗ್ರಾಹಕರ ಆಯೋಗ ಹೇಳಿದ್ದೇ ಬೇರೆ...

ಪಿಂಚಣಿಯನ್ನು ತಪ್ಪು ಲೆಕ್ಕ ಹಾಕಿದ ಹುಬ್ಬಳ್ಳಿ PF ಇಲಾಖೆಗೆ 6.42 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ
ಸೇವಾ ನ್ಯೂನ್ಯತೆ ಎಸಗಿದ PF ಇಲಾಖೆಗೆ 6.42 ಲಕ್ಷ ರೂ. ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ
Follow us on

ಹುಬ್ಬಳ್ಳಿಯ ಪ್ರಾವಿಡೆಂಟ್ ಫಂಡ್ ಇಲಾಖೆಯವರು ತಮ್ಮ ನಿವೃತ್ತಿ ನಂತರದ ಪಿಂಚಣಿ ನಿಗದಿಪಡಿಸುವಾಗ ತಪ್ಪು ಲೆಕ್ಕ ಹಾಕಿ ಸೇವಾ ನ್ಯೂನತೆ ಎಸಗಿದ್ದಾರೆಂದು 6 ಮಂದಿ ಪಿಂಚಣಿದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದರು. ಆದರೆ ಪಿ.ಎಫ್. ಇಲಾಖೆಯಿಂದ ಪ್ರತಿ ತಿಂಗಳು ನಡೆಸುವ ಪಿಂಚಣಿ ಲೋಕ್ ಅದಾಲತ್‌ನಲ್ಲಿ ದೂರುದಾರ ಭಾಗವಹಿಸಿ ತಮ್ಮ ಪಿಂಚಣಿ ವ್ಯಾಜ್ಯಕ್ಕೆ ಪರಿಹಾರ ಕಂಡುಕೊಳ್ಳದೇ ಅನಗತ್ಯವಾಗಿ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದು ತಪ್ಪು, ಹಾಗಾಗಿ ಅವುಗಳನ್ನು ವಜಾಗೊಳಿಸಬೇಕು ಎಂದು ಪಿ.ಎಫ್. ಇಲಾಖೆಯವರು ಆಕ್ಷೇಪಿಸಿದ್ದರು.

ಈ ದೂರುಗಳ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ  (District Consumer Disputes Redressal Commission -DCDRC) ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪಿ. ಸಿ. ಹಿರೇಮಠ ಅವರು, ಎಲ್ಲ ದೂರುದಾರರ ಪಿಂಚಣಿ ನಿಗದಿಪಡಿಸುವಾಗ ಪಿ.ಎಫ್. ಇಲಾಖೆ ಸರಿಯಾಗಿ ಲೆಕ್ಕ ಹಾಕದೇ ತಪ್ಪೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಪಿ.ಎಫ್. ಇಲಾಖೆಯವರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ ಇದೇ ವೇಳೆ ಪಿ.ಎಫ್. ಇಲಾಖೆಯವರ ವಾದವನ್ನು ಆಯೋಗ ತಳ್ಳಿಹಾಕಿದೆ. ಆರು ಜನ ದೂರುದಾರರಿಗೆ ಅವರ ಪಿಂಚಣಿ ನಿಗದಿಪಡಿಸಿದ ದಿನಾಂಕದಿಂದ ಆಯೋಗ ಆದೇಶ ಹೊರಡಿಸಿದ ದಿನಾಂಕದವರೆಗೆ ಒಟ್ಟು ರೂ. 6 ಲಕ್ಷ 42 ಸಾವಿರ 68 ರೂಪಾಯಿ ಬಾಕಿ ಹಣ ಮತ್ತು ಅದರ ಮೇಲೆ ಶೇ.10 ರಂತೆ ಬಡ್ಡಿ ಲೆಕ್ಕ ಹಾಕಿ ನೀಡುವಂತೆ ಆದೇಶಿಸಿದೆ. ಜೊತೆಗೆ ಪ್ರತಿಯೊಬ್ಬ ದೂರುದಾರರಿಗೆ ಮಾನಸಿಕ ತೊಂದರೆಗಾಗಿ ತಲಾ ರೂ. 20 ಸಾವಿರ ಪರಿಹಾರ ಹಾಗೂ ತಲಾ ರೂ. 10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡಲು ಆಯೋಗ ಆದೇಶಿಸಿದೆ.

ಗೋಲ್ಡನ್ ಹೋಮ್ ಶೆಲ್ಟರ್ಸ್‍ಗೆ ಖರೀದಿ ಪತ್ರ ಬರೆದು ಕೊಡಲು ಆದೇಶ

ಹೊಸಪೇಟಿಯ ಎಂ.ಜಿ. ನಗರ ನಿವಾಸಿ ಧೀರೇಂದ್ರ ಉಪಾಧ್ಯಾಯ ಎಂಬುವವರು ಗೋಲ್ಡನ್ ಹೋಮ್ ಶೆಲ್ಟರ್ಸ್ ಜೊತೆ ಸೆ. 3, 2010ರಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಅಪಾರ್ಟ್ಮೆಂಟ್ ನ ಎಫ್ ಬ್ಲಾಕ್ 2ನೇ ಮಹಡಿಯಲ್ಲಿನ ಫ್ಲ್ಯಾಟ್ ನಂ. 202 ನ್ನು ರೂ.18,00,000/- ಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು. ಆ ಪೈಕಿ ಧೀರೇಂದ್ರ ರೂ.15,06,420/- ನ್ನು ಮುಂಗಡವಾಗಿ ಸಂದಾಯ ಮಾಡಿದ್ದರು. ಈ ಒಪ್ಪಂದದ ಪ್ರಕಾರ ಎದುರುದಾರರು 24 ತಿಂಗಳಲ್ಲಿ ಅಪಾರ್ಟ್ಮೆಂಟ್ ಕಾಮಗಾರಿ ಪೂರ್ಣಗೊಳಿಸಿ ಧೀರೇಂದ್ರ ಅವರಿಗೆ ಫ್ಲ್ಯಾಟ್ ಸ್ವಾಧೀನತೆ ಕೊಡುವುದರ ಜೊತೆಗೆ ಖರೀದಿ ಪತ್ರವನ್ನು ನೋಂದಣಿ ಮಾಡಿ ಕೊಡಬೇಕಾಗಿತ್ತು. ಆದರೆ ಬಿಲ್ಡರ್ ಒಪ್ಪಂದದ ಪ್ರಕಾರ ನಡೆದುಕೊಳ್ಳದೇ ತನಗೆ ಮೋಸ ಮಾಡಿದ್ದಾರೆಂದು ಧೀರೇಂದ್ರ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

Also Read: ಇಲ್ಲ ಸಲ್ಲದ ಕಾಯಿಲೆ ನೆಪ ಹೇಳಿ ವಿಮೆ ತಿರಸ್ಕರಿಸಿದ ಅಂಚೆ ಇಲಾಖೆಗೆ 3 ಲಕ್ಷ ದಂಡ ವಿಧಿಸಿದ ಧಾರವಾಡ ಗ್ರಾಹಕರ ಆಯೋಗ

ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಧೀರೇಂದ್ರ ಅವರಿಂದ ರೂ.15,06,420/- ಹಣ ಪಡೆದುಕೊಂಡು ಬಿಲ್ಡರ್ ಫ್ಲ್ಯಾಟಿನ ಸ್ವಾಧೀನತೆ ಕೊಟ್ಟಿಲ್ಲ. ಅಲ್ಲದೇ ಖರೀದಿ ಪತ್ರ ನೋಂದಣಿ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ. ಇದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಬಿಲ್ಡರ್ ದೂರುದಾರರಿಗೆ ಈ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಅಪಾರ್ಟ್ಮೆಂಟ್ ನ ಫ್ಲ್ಯಾಟ್ ನಂ:104 (ಇಬ್ಬರೂ ಮಾತನಾಡಿಕೊಂಡು ಫ್ಲ್ಯಾಟ್ ನಂ. 202ರ ಬದಲು ಫ್ಲ್ಯಾಟ್ ನಂ:104ನ್ನು ಕೊಡಲು ಒಪ್ಪಿರುತ್ತಾರೆ) ಖರೀದಿ ಪತ್ರವನ್ನು ನೋಂದಣಿ ಮಾಡಿಕೊಡಲು ಆಯೋಗ ನಿರ್ದೇಶಿಸಿದೆ. ತಪ್ಪಿದಲ್ಲಿ ದೂರುದಾರರು ಆಯೋಗದ ಮುಖಾಂತರ ತಮ್ಮ ಸ್ವಂತ ಖರ್ಚಿನಲ್ಲಿ ಆಯುಕ್ತರನ್ನು ನೇಮಿಸಿಕೊಂಡು ಖರೀದಿ ಪತ್ರವನ್ನು ನೋಂದಣಿ ಮಾಡಿಸಿಕೊಳ್ಳಲು ಅರ್ಹರಿದ್ದಾರೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎದುರುದಾರನಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ