ಹುಬ್ಬಳ್ಳಿ: ಡಿಸೆಂಬರ್ 19ರ ಸೋಮವಾರದಿಂದ ಕರ್ನಾಟಕ ವಿಧಾನ ಮಂಡಲ ಅಧಿವೇಶನ(Belagavi Winter Session) ಶುರುವಾಗಲಿದೆ. ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಮಹಾ ಮೇಳಾವ್ ಎಂಬ ಕಾರ್ಯಕ್ರಮ ಆಯೋಜಿಸಿದೆ. ನಗರದ ವ್ಯಾಕ್ಸಿನ್ ಡಿಪೊದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಧೈರ್ಯಶೀಲ ಭಾಷಣ ಮಾಡಲಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ MES ಪುಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಎಂಇಎಸ್ ಪುಂಡಾಟ ಇದೇ ಮೊದಲಲ್ಲ. ಕಳೆದ 50 ವರ್ಷದಿಂದ ಎಂಇಎಸ್ ಪುಂಡಾಟ ಮಾಡುತ್ತಲೇ ಬಂದಿದೆ. ಅವರನ್ನು ಯಾವ ರೀತಿ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಗೊತ್ತಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಗೆ ಬರುತ್ತಿದ್ದೇನೆ, ಸೂಕ್ತ ಭದ್ರತೆ ಕೊಡಿ; ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮಹಾ ಸಂಸದ ಧೈರ್ಯಶೀಲ ಮಾನೆ ಪತ್ರ
ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು
ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಂಡಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯನ್ನ ಗಮನಿಸಿ ಪ್ರತಿಕ್ರಿಯೆ ನೀಡಬೇಕು. ಅದು ಆಕಸ್ಮಿಕ ಘಟನೆ, ಕುಕ್ಕರ್ನಿಂದ ಆಗಿದ್ದು ಎಂದು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಹೇಳಿದ ಮಾತು ಕೇಳಿಸಿಕೊಂಡು ಮಾತಾಡಲಿ ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಸಚಿವ ಕಾರಜೋಳ ವಾಗ್ದಾಳಿ
ಇನ್ನು ಮತ್ತೊಂದೆಡೆ ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವೆ ಗಡಿ ವಿವಾದ ಸಂಬಂಧ ಬೊಮ್ಮಾಯಿ ವೀಕ್ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಕಾರಜೋಳ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಅವನೇ 5 ವರ್ಷ ಇದ್ದನಲ್ಲ ಏನು ಮಾಡುತ್ತಿದ್ದ. ಯಾಕೆ ಆಗ ಗಡಿ ಸಮಸ್ಯೆ ಸರಿಪಡಿಸಲಿಲ್ಲ. ಸುಮ್ಮನೆ ಬಾಯಿ ಚಪಲಕ್ಕೆ ಏನೇನೋ ಮಾತನಾಡಬಾರದು. 60 ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್ ಸಮಸ್ಯೆ ಸರಿಪಡಿಸಬಹುದಿತ್ತು. ಅಂದಿನ ಕಾಂಗ್ರೆಸ್ ತ್ರಿಬಲ್ ಇಂಜಿನ್ ಸರ್ಕಾರ ಯಾಕೆ ಮಾಡಲಿಲ್ಲ. ಸಮಸ್ಯೆ ಬಗೆಹರಿಸಬೇಡಿ ಎಂದು ಯಾರಾದರೂ ಆಣೆ ಹಾಕಿದ್ದರಾ? ಎಂದು ಸಚಿವ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:01 pm, Sun, 18 December 22