ದೆಹಲಿ: ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಜಾಮೀನು ಪಡೆದು ಸುಮಾರು 50 ದಿನಗಳ ನಂತರ ಇಂದು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಅವರ ಅಭಿಮಾನಿಗಳು ರಾಜಧಾನಿಯಲ್ಲಿ ಮತ್ತು ರಾಮನಗರ ಜಿಲ್ಲೆಯಲ್ಲಿ ಭರ್ಜರಿ ರೋಡ್ ಷೋ ನಡೆಸುತ್ತಿದ್ದಾರೆ.
ಈ ಮಧ್ಯೆ, ಇ.ಡಿಯಿಂದ ಸಾಕಷ್ಟು ನೋವುಂಡಿರುವ ಡಿಕೆಶಿ ಅವರಿಗೆ ಸ್ವತಃ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವ್ರೇ ಅಭಯ ಹಸ್ತ ನೀಡಿ, ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಅಷ್ಟೇ ಅಲ್ಲ. ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲಿದ್ದಾರೆ ಎಂದು ಡಿಕೆಶಿ ಅಭಿಮಾನಿಗಳು ಆಶಿಸಿದ್ದರು.
ಸಿದ್ದರಾಮಯ್ಯ ಸೀದಾ ಗದಗದತ್ತ ಪ್ರಯಾಣ:
ಆದ್ರೆ ಈ ಆಶಯಗಳನ್ನೆಲ್ಲ ಗಾಳಿಯಲ್ಲಿ ತೂರಿಬಿಟ್ಟಿರುವ ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅವೆಲ್ಲ ಏನೂ ಇಲ್ಲ. ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ. ಅತ್ತ ಡಿಕೆಶಿ ಬೆಂಗಳೂರಿಗೆ ಆಗಮಿಸುತ್ತಿರುವಾಗ ಇತ್ತ ಸಿದ್ದರಾಮಯ್ಯ ಅವರು ಸೀದಾ ಗದಗದತ್ತ ಪ್ರಯಾಣ ಬೆಳೆಸಿರುವುದು ಕುತೂಹಲಕಾರಿಯಾಗಿದೆ.
Published On - 12:12 pm, Sat, 26 October 19