ಗ್ಯಾರಂಟಿಗಳು ತಲುಪಿವೆಯೇ ಎಂಬುದನ್ನು ಜನರಲ್ಲಿ ಕೇಳಬೇಕು: ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು

| Updated By: Rakesh Nayak Manchi

Updated on: Nov 12, 2023 | 2:52 PM

ಗ್ಯಾರಂಟಿಗಳಿಗೆ ಮರುಳಾಗಬೇಡಿ ಎಂಬ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕುಮಾರಸ್ವಾಮಿಗೂ ಗ್ಯಾರಂಟಿ ಯೋಜನೆಗಳಿಗೆ ಏನು ಸಂಬಂಧ ಎಂದು ಕೇಳಿದರಲ್ಲದೆ, ಯೋಜನೆಗಳು ತಲುಪಿದೆಯೋ ಇಲ್ಲವೋ ಎಂಬುದನ್ನು ಮತದಾರರಲ್ಲಿ ಕೇಳಬೇಕು ಎಂದರು.

ಗ್ಯಾರಂಟಿಗಳು ತಲುಪಿವೆಯೇ ಎಂಬುದನ್ನು ಜನರಲ್ಲಿ ಕೇಳಬೇಕು: ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು
ಡಿಕೆ ಶಿವಕುಮಾರ್ ಮತ್ತು ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ನ.12: ಗ್ಯಾರಂಟಿ ಯೋಜನೆಗಳು (Guarantee Schemes) ತಲುಪಿವೆಯೇ ಇಲ್ಲವೇ ಎಂಬುದನ್ನು ಮತದಾರರಲ್ಲಿ ಕೇಳಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K. Shivakumar) ಹೇಳಿದರು. ಗ್ಯಾರಂಟಿಗಳಿಗೆ ಮರುಳಾಗಬೇಡಿ ಎಂಬ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (H.D. Kumaraswamy) ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿಗೂ ಗ್ಯಾರಂಟಿ ಯೋಜನೆಗಳಿಗೆ ಏನು ಸಂಬಂಧ ಎಂದು ಕೇಳಿದರು.

ನಗರದಲ್ಲಿ ಮಾತನಾಡಿದ ಅವರು, ನಮ್ಮ ಗ್ಯಾರಂಟಿಗಳ ಬಗ್ಗೆ ಕುಮಾರಸ್ವಾಮಿಗೆ ಏನು ಗೊತ್ತಿದೆ? ಕುಮಾರಸ್ವಾಮಿ ಏನಾದರೂ ಫಲಾನುಭವಿಯಾ? ಅವರ ಪಂಚರತ್ನ ಯೋಜನೆ ಇಂಪ್ಲಿಮೆಂಟ್ ಮಾಡಲು ಆಗಲಿಲ್ಲ. ಜನರಿಗೆ ತಲುಪಿದೇಯೋ ಇಲ್ಲ ಅಂತ ಮತದಾರರ ಕೇಳಬೇಕು. ನಾನು ಚನ್ನಪಟ್ಟಣ ಮತದಾರರ ಜೊತೆ ನಾನೇ ಮಾತನಾಡಿದ್ದೇನೆ. ಅವರನ್ನು ಕೇಳಿದರೆ ಕುಮಾರಸ್ವಾಮಿಗೆ ಗೊತ್ತಾಗುತ್ತದೆ. ಗೃಹಲಕ್ಷ್ಮೀ ಯೋಜನೆ ವಿಚಾರದಲ್ಲಿ ಶೇ.5ರಷ್ಟು ಮಾತ್ರ ತೊಂದರೆ ಆಗಿದೆ ಎಂದರು.

ಪಾಪ ಅವರು ಮಾತನಾಡುತ್ತಿದ್ದಾರೆ ಮಾತನಾಡಲಿ. ಬಡವರು, ಹೆಣ್ಣುಮಕ್ಕಳ ನೋವು ಗೋತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದ ಖುಷಿಯಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ. ದಸರಾಗೆ ಬಂದಿದ್ದ ಜನರು ನೋಡಿದರೆ ಗೋತ್ತಾಗುತ್ತದೆ. ಕುಮಾರಸ್ವಾಮಿ ಬಹಳ ಅರ್ಜೆಂಟ್ ಅಲ್ಲಿ ಇದ್ದಾರೆ. ಸುಮ್ಮನೆ ಸಚಿವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿರುವುದು ಡುಪ್ಲಿಕೇಟ್ ಸಿಎಂ, ಹೈಕಮಾಂಡ್​ಗೆ ಹಣಕೊಟ್ಟರೇ ಮಾತ್ರ ಮಂತ್ರಿ ಸ್ಥಾನ: ಕುಮಾರಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ನೋಟೀಸ್ ಮೇಲೆ ಇಟ್ಟಿದೆ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​ಗೂ ಕುಮಾರಸ್ವಾಮಿಗೂ ಏನ್ ಸಂಬಂಧ ಎಂದು ಕೇಳಿದರು. ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡಿದೆ. ಹೈಕಮಾಂಡ್ ಒನ್ ಲೈನ್ ರೆಸ್ಯೂಲೆಶನ್ ಮಾಡಿದೆ. ಹೈಕಮಾಂಡ್ ಸಿಎಂ ಸ್ಥಾನ ನೀಡಿದೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾವು ಪಾಲಿಸುತ್ತೇವೆ ಎಂದರು.

ಡಿಸೆಂಬರ್ 9 ರಂದು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ

ತೆಲಂಗಾಣ ಚುನಾವಣೆಯಲ್ಲಿ ಆರು ಭರವಸೆ ನೀಡಿದ್ದೇವೆ. ಈ ಬಾರಿ ಕಾಂಗ್ರೆಸ್​​ಗೆ ಅಧಿಕಾರ ನೀಡಬೇಕು. ಈ ಬಗ್ಗೆ ತೆಲಂಗಾಣ ಜನರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ ಡಿಕೆ ಶಿವಕುಮಾರ್, ಡಿಸೆಂಬರ್ 9 ರಂದು ತೆಲಂಗಾಣ ರಾಜ್ಯ ನಿರ್ಮಾನವಾದ ದಿನ. ಸೋನಿಯಾ ಗಾಂಧಿ ರಾಜ್ಯ ನಿರ್ಮಾಣ ಮಾಡಿದರು. ಅವತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರ ಬರುತ್ತದೆ ಎಂದರು.

ವಿಜಯೇಂದ್ರ ಬಿಜೆಪಿ ರಾಜ್ಯಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಮಾತನಾಡಿದ ಶಿವಕುಮಾರ್, ವಿಜಯೇಂದ್ರಗೆ ಒಳ್ಳೆಯದಾಗಲಿ ಎನ್ನುತ್ತಾ ಕುಮಾರಸ್ವಾಮಿಗೂ ಒಳ್ಳೆಯದಾಗಲಿ ಎಂದರು. ಅಲ್ಲದೆ, ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Sun, 12 November 23