ಬೆಂಗಳೂರು: ಎಂಟು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಹಿಂಬಡ್ತಿ ನೀಡಲಾಗುವುದೆಂಬ ನ್ಯಾಯಾಲಯದ ಆದೇಶವನ್ನು ಇನ್ನಷ್ಟು ವಿಸ್ತೃತವಾಗಿ ಗಮನಿಸಬೇಕಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. , ನ್ಯಾಯಾಲಯದ ತೀರ್ಪನ್ನು ಇನ್ನಷ್ಟು ತಾಂತ್ರಿಕವಾಗಿ ಆಲೋಚಿಸಬೇಕಾದ ಅನಿವಾರ್ಯತೆ ಇದ್ದು ಈ ಹಂತದಲ್ಲಿ ಯಾವುದೇ ಶಿಕ್ಷಕರೂ ಅನಗತ್ಯ ಗೊಂದಲಕ್ಕೀಡಾಗುವುದು ಬೇಡ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪ್ರೌಢಶಾಲಾ ಶಿಕ್ಷಕರ ವೃಂದ ನಿಯಮಗಳಂತೆ ನೇರ ನೇಮಕಾತಿಯ ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಬಡ್ತಿಗೆ ನಿಗದಿ ಇರುವ ಅನುಪಾತದಂತೆ ಬಡ್ತಿ ಮುಖಾಂತರದಲ್ಲಿಯೂ ಪ್ರೌಢಶಾಲಾ ಶಿಕ್ಷಕ ಹುದ್ದೆಗಳನ್ನು ತುಂಬಲು ಅವಕಾಶವಿದೆ. ಈವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಎಂದರೆ ಏಕ ರೂಪದಲ್ಲಿ ಇದ್ದ 1 ರಿಂದ 7 ನೇ ತರಗತಿ ಶಿಕ್ಷಕ ವೃಂದವಾಗಿತ್ತು. ರಾಷ್ಟ್ರ ವ್ಯಾಪಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ಹುದ್ದೆಗೆ ಇರಬೇಕಾದ ವಿದ್ಯಾರ್ಹತೆಯನ್ನು ಶಾಸನಬದ್ಧ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು ( ಎನ್.ಸಿ.ಟಿ.ಇ) ನಿಯಮಿಸುವ ಅಧಿಕಾರವನ್ನು ಹೊಂದಿದ್ದು ಸದರಿ ನಿಯಮಗಳಂತೆ ಮತ್ತು ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ 6ರಿಂದ 8ನೇ ತರಗತಿಗಳಿಗೆ ಪ್ರತ್ಯೇಕವಾದ ಪದವಿ ವಿದ್ಯಾರ್ಹತೆಯುಳ್ಳ ಶಿಕ್ಷಕ ವೃಂದವನ್ನು ಹೊಂದಬೇಕಾಗಿರುತ್ತದೆ. ಅದರಂತೆ 2017ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ನಿಯಮಗಳನ್ನು ಪರಿಷ್ಕರಿಸಿ ಪ್ರಾಥಮಿಕ ಶಿಕ್ಷಕ 1 ರಿಂದ 7ನೇ ತರಗತಿಯ ಒಟ್ಟಾರೆ 188000 ವೃಂದ ಬಲದಲ್ಲಿಯೇ ಕಡಿತಗೊಳಿಸಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಗತ್ಯವಿರುವಂತೆ ಒಟ್ಟಾರೆ 52000 ಬಲದ 6 ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದವನ್ನು ಅಸ್ತಿತ್ವಕ್ಕೆ ತರಲಾಗಿದೆ. ಆದರೆ ಮೂಲ ವೃಂದದಲ್ಲಿಯೂ ಪದವೀಧರ ವಿದ್ಯಾರ್ಹತೆಯುಳ್ಳ ಶಿಕ್ಷಕರು ಇದ್ದು ಸದರಿಯವರಿಗೆ 6 ರಿಂದ 8ನೇ ತರಗತಿ ವೃಂದಕ್ಕೆ ಪರೀಕ್ಷೆ ಮುಖಾಂತರದಲ್ಲಿ ಸೇರ್ಪಡೆಗೊಳ್ಳಲು ಸದರಿ ನಿಯಮಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿಯಲ್ಲಿಯೇ ಪ್ರೌಢಶಾಲಾ ಶಿಕ್ಷಕ ವೃಂದಕ್ಕೆ ಇರುವ ಬಡ್ತಿ ನಿಯಮಗಳಿಗೂ 1 ರಿಂದ 5 ನೇ ತರಗತಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ ಮತ್ತು 6 ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದವರಿಗೆ ಆಯಾ ವೃಂದ ಬಲದ ಆಧಾರದಲ್ಲಿ ಬಡ್ತಿ ಪ್ರಮಾಣವನ್ನು ನಿರ್ಧರಿಸಿ ನಿಯಮಿಸಬೇಕಾಗಿದೆ. ಈ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಮೇಲಿನ ನ್ಯಾಯಾಲಯ ಆದೇಶ ಹೊರಬಿದ್ದಿದೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸದರಿ ನ್ಯಾಯಾಲಯ ಆದೇಶದಲ್ಲಿಯೂ ವೃಂದ ನಿಯಮಗಳಿಗೆ ತಿದ್ದುಪಡಿ ತಂದು 1ರಿಂದ 5ನೇ ತರಗತಿ ವೃಂದದಲ್ಲಿ ಅರ್ಹರಿಗೆ ಬಡ್ತಿಗೆ ಅವಕಾಶ ನೀಡಬಹುದಾಗಿದೆ ಎಂಬುದಾಗಿ ಇದೆ. ಜಾರಿಯಲ್ಲಿರುವ ವೃಂದ ನಿಯಮಗಳಲ್ಲಿ 1ರಿಂದ 5 ಮತ್ತು 6 ರಿಂದ 8 ಎಂಬುದನ್ನು ಪ್ರಸ್ತಾಪಿಸಿರುವುದಿಲ್ಲವಾದ್ದರಿಂದ 6 ರಿಂದ 8 ವೃಂದದಿಂದ ಬಡ್ತಿ ಸೂಕ್ತ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಹಾಗಾಗಿ 1ರಿಂದ 5ನೇ ತರಗತಿ ವೃಂದ ಬಡ್ತಿಗಳ ಬಗ್ಗೆ ಪ್ರಶ್ನೆ ಎತ್ತಿದೆ. ಇದು ತಾಂತ್ರಿಕವಾದ ವಿಷಯವಾಗಿದ್ದು 1967ರಿಂದಲೂ ವೃಂದ ನಿಯಮಗಳು ಜಾರಿ ಇದ್ದು 2017ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರು ಎಂದರೆ ಪೂರ್ವದಲ್ಲಿ 1ರಿಂದ 7ನೇ ತರಗತಿ ಶಿಕ್ಷಕ ವೃಂದ ಮತ್ತು ಇದೀಗ 1ರಿಂದ 5ನೇ ತರಗತಿ ಶಿಕ್ಷಕ ವೃಂದ ಎಂದು ನಾಮಾಂತನಗೊಂಡ ವೃಂದವೇ ಆಗಿದೆ. ಪ್ರಯುಕ್ತ, 2017ರ ನಂತರದಲ್ಲಿ ಈ ತಾಂತ್ರಿಕ ಸಮಸ್ಯೆ ಉಂಟಾಗಿದ್ದು ಎಲ್ಲ ಕಾಲದ ಬಡ್ತಿಗಳಿಗೆ ಇದು ಅನ್ವಯವಾಗುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಯುಕ್ತ, ಈ ಬಗ್ಗೆ ತುರ್ತಾಗಿ ಪರಿಶೀಲಿಸಿ ಕಾನೂನಾತ್ಮಕವಾದ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ನ್ಯಾಯಾಲಯದಲ್ಲಿಯೂ ಅಪೀಲು ಸಲ್ಲಿಸಿ ಈ ವಿಷಯವನ್ನು ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಶೀರ್ಷಿಕೆಗಳಿಂದ ಯಾವ ಶಿಕ್ಷಕರೂ ಆತಂಕ ಪಡಬೇಕಾಗಿಲ್ಲ ಎಂದು ಸಚಿವ ಸುರೇಶ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಇಂದು ಒಂದೇ ದಿನ 20,628 ಜನರಿಗೆ ಕೊವಿಡ್ ದೃಢ, ರಾಜ್ಯದ ಪಾಸಿಟಿವಿಟಿ ದರ ಶೇ.14.95
(Don’t scare about court order says Backlash of 8 thousand teachers informs Karnataka Education Minister S Suresh Kumar0
Published On - 8:32 pm, Sat, 29 May 21