ಸಾಯೋಕು ಮುನ್ನ ಗಂಡನಿಗೆ ಕೃತಿಕಾ ಕೊನೆ ಮೆಸೇಜ್: ಕರುಳು ಚುರ್ ಎನ್ನುವ ಸಂದೇಶಕ್ಕೂ ಕರಗಲಿಲ್ಲ ಕಿಲ್ಲರ್ ವೈದ್ಯನ​​ ಮನಸ್ಸು

ಬೆಂಗಳೂರಿನಲ್ಲಿ ವೈದ್ಯೆ ಕೃತಿಕಾ ಕೊಲೆ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪೊಲೀಸರ ತನಿಖೆ ಚುರುಕುಗೊಳಿಸಿದಂತೆಲ್ಲ ಒಂದೊಂದೇ ರೋಚಕ ರಹಸ್ಯಗಳು ಬಯಲಾಗುತ್ತಿವೆ. ಕಿಲ್ಲರ್ ಡಾಕ್ಟರ್ ಅದೆಷ್ಟು ಕ್ರೂರಿ, ಅದೆಂಥಾ ಕ್ರಿಮಿನಲ್ ಮೈಂಡೆಡ್ ಎನ್ನುವುದನ್ನು ನೋಡಿದರೆ ಬೆಚ್ಚಿಬೀಳಿಸುವಂತಿದೆ. ನೋವಿನಿಂದ ನರಳಿ ನರಳಿ ಸಾಯೋಕು ಮುನ್ನ ಗಂಡನಿಗೆ ಕೃತಿಕಾ ಕೊನೆಯ ಮೆಸೇಜ್ ಕಳುಹಿಸಿದ್ದಳು. ಕರುಳು ಚುರ್ ಎನ್ನುವ ಸಂದೇಶಕ್ಕೂ ಕಿಲ್ಲರ್ ವೈದ್ಯ ಪತಿಯ ಮನಸ್ಸು ಕರಗಲೇ ಇಲ್ಲ. ಅಷ್ಟಕ್ಕೂ ಕೊನೆಯ ಸಂದೇಶದಲ್ಲೇನಿತ್ತು? ಹೇಗೆ ಸ್ಕೆಚ್ ಹಾಕಿ ಕೊಂದ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಸಾಯೋಕು ಮುನ್ನ ಗಂಡನಿಗೆ ಕೃತಿಕಾ ಕೊನೆ ಮೆಸೇಜ್: ಕರುಳು ಚುರ್ ಎನ್ನುವ ಸಂದೇಶಕ್ಕೂ ಕರಗಲಿಲ್ಲ ಕಿಲ್ಲರ್ ವೈದ್ಯನ​​ ಮನಸ್ಸು
Dr Kruthika Murder Case

Updated on: Oct 17, 2025 | 3:52 PM

ಬೆಂಗಳೂರು, (ಅಕ್ಟೋಬರ್ 17): ಹೇಳಿ ಮಾಡಿಸಿದಂತಹ ಜೋಡಿ. ಮುತ್ತಿನಂತ ಮಡದಿ. ಹೇಳಿ ಕೇಳಿ ಡಾಕ್ಟರ್ ಬೇರೆ. ಮಾವ ಆಗರ್ಭ ಶ್ರೀಮಂತ. ನೂರಾರು ಕೋಟಿ ಒಡೆಯ. ಆದ್ರೆ ಕಾಯಿಲೆ ಬಿದ್ದವಳ ಜೊತೆಗೆ ಬದುಕಲು ಇಷ್ಟ ಇಲ್ಲ ಕಿಲ್ಲರ್ ಡಾಕ್ಟರ್ ಮಹೇಂದ್ರನಿಗೆ ಇಷ್ಟ ಇರಲಿಲ್ಲ. ಜೊತೆ ಬೇರೊಬ್ಬಳ ಜೊತೆ ಸಂಬಂಧ ಬೇರೆ ಇತ್ತು. ಹೀಗಾಗಿ ಸಿನಿಮಾ ಸ್ಟೈಲ್​ನಲ್ಲೇ ಡಾಕ್ಟರ್ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಪತ್ನಿ ಕೃತಿಕಾ ಕಾಲಿಗೆ ಐವಿ ಸಿರಿಂಜ್ ಹಾಕಿ ಉಸಿರನ್ನೇ ನಿಲ್ಲಿಸಿದ್ದ. ಕಿಲಾಡಿ ಮಹೇಂದ್ರ ಅನಸ್ತೇಷಿಯಾ ಬಗ್ಗೆ ಸಂಪೂರ್ಣವಾಗಿ ಅರಿತಿದ್ದ. ಹೀಗಾಗಿ ಪಕ್ಕಾ ಪ್ಲ್ಯಾನ್ ಮಾಡಿಯೇ ಕೃತಿಕಾಳನ್ನ ಸಾಯಿಸಿದ್ದಾನೆ.

ಸಿನಿಮಾ ಸ್ಟೈಲ್​ ನಲ್ಲೇ ಸ್ಕೆಚ್

ಮನುಷ್ಯನ ದೇಹದಲ್ಲಿ ಅನಸ್ತೇಷಿಯ ಹೆಚ್ಚು ಸಮಯ ಇರಲ್ಲ. ಅನಸ್ತೇಷಿಯಾ ಕೊಟ್ಟ 4 ಗಂಟೆಯಲ್ಲಿ 50% ಕಡಿಮೆಯಾಗಿರುತ್ತೆ. 24 ಗಂಟೆ ಕಳೆದ್ರಂತೂ ಸಂಪೂರ್ಣವಾಗಿ ಅನಸ್ತೇಷಿಯ ಅಂಶ ನಾಶವಾಗುತ್ತೆ. 24 ಗಂಟೆ ಕಳೆದ ಬಳಿಕ ಪೋಸ್ಟ್ ಮಾರ್ಟಂ ಮಾಡಿದ್ರೂ, ಮೃತದೇಹದಲ್ಲಿ ಅನಸ್ತೇಷಿಯಾ ಅಂಶ ಪತ್ತೆಯಾಗೋದು ವಿರಳ. ಹೀಗಾಗಿ ಕೃತಿಕಾ ಕಾಲಿಗೆ ಪ್ರೊಪೊಫೋಲ್ ಹೆಸರಿನ ಅನಸ್ತೇಷಿಯ ಕೊಟ್ಟಿದ್ದ ಡಾ.ಮಹೇಂದ್ರ. ಆದ್ರೆ ಕೃತಿಕಾ ಸತ್ತ 4 ಗಂಟೆಯಲ್ಲೇ ಮೃತದೇಹ ಆಸ್ಪತ್ರೆ ತಲುಪಿತ್ತು. ಅಷ್ಟೊತ್ತಿಗೆ 50% ಅನಸ್ತೇಷಿಯ ಅಂಶ ದೇಹದಲ್ಲಿ ಕಡಿಮೆಯಾಗಿತ್ತು. ಹೀಗಾಗಿ ಪೋಸ್ಟ್ ಮಾರ್ಟಮ್ ಬೇಡ ಎಂದು ಮಹೇಂದ್ರ ಹಠ ಹಿಡಿದಿದ್ದ.

ಇದನ್ನೂ ಓದಿ: ವೈದ್ಯೆ ಕೃತಿಕಾ ಹತ್ಯೆ ಕೇಸ್‌ಗೆ ಟ್ವಿಸ್ಟ್‌: ಬಗೆದಷ್ಟು ಬಯಲಾಗ್ತಿದೆ ರಹಸ್ಯ, ಕಿಲ್ಲರ್​ ಡಾಕ್ಟರ್ ಸಿಕ್ಕಿಬಿದ್ದಿದ್ಹೇಗೆ?

ಆದ್ರೆ ಮೃತಳ ಸಹೋದರಿ ನಿಖಿತಾ ಒತ್ತಾಯದ ಮೇರೆಗೆ ಪೋಷಕರು ಪೋಸ್ಟ್ ಮಾರ್ಟಂಗೆ ನಿರ್ಧರಿಸಿದ್ದರು. ಇತ್ತ ಮಹೇಂದ್ರ ಇವತ್ತು ಬೇಡ. ನಾಳೆ ಪೋಸ್ಟ್ ಮಾರ್ಟಂ ಮಾಡಿಸೋಣ ಎಂದು ಪಟ್ಟು ಹಿಡಿದಿದ್ದ. 24 ಗಂಟೆ ಕಳೆದ ಬಳಿಕ ಪೋಸ್ಟ್ ಮಾರ್ಟಂಗೆ ಪ್ಲ್ಯಾನ್ ಮಾಡಿದ್ದ. ಇದಕ್ಕೆ ಪೋಷಕರು ಒಪ್ಪದೆ ಪೋಸ್ಟ್ ಮಾರ್ಟಮ್ ‌ಮಾಡಿಸಿದ್ದರು. ಹೀಗಾಗಿ ಕಿಲ್ಲರ್ ಡಾಕ್ಟರ್ ಮಹೇಂದ್ರ ಪ್ಲಾನ್ ಎಲ್ಲವೂ ಹಾಳಾಗಿತ್ತು.

ಇನ್ನು ಡಾಕ್ಟರ್ ಮಹೇಂದ್ರ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 18 ತಿಂಗಳು ಕೆಲಸ ಮಾಡಿದ್ದ. ವಿಕ್ಟೋರಿಯಾ ಆಸ್ಪತ್ರೆಯಿಂದಲೇ ಅರವಳಿಕೆ ತಂದಿದ್ನಾ ಅನ್ನೋ ಬಗ್ಗೆಯೂ ಪೊಲೀಸ್ರು ತನಿಖೆ ನಡೆಸಿದ್ದಾರೆ. ಅರವಳಿಕೆ ವಿಭಾಗದ ಅಧಿಕಾರಿಗಳನ್ನೂ ವಿಚಾರಣೆ ನಡೆಸಲಿದ್ದಾರೆ. ಅರವಳಿಕೆ ಯಾರ್ಯಾರಿಗೆ ನೀಡಿದ್ರು. ಎಷ್ಟು ಸ್ಟಾಕ್ ಬಂದಿತ್ತು. ಎಷ್ಟು ಖಾಲಿಯಾಗಿದೆ ಎಂಬ ಡೇಟಾವನ್ನೂ ಪೊಲೀಸರು ಪರಿಶೀಲನೆ ಮಾಡಲಿದ್ದಾರೆ.

ಸಾಯೋಕು ಮುನ್ನ ಗಂಡನಿಗೆ  ಕೊನೆಯ ಮೆಸೇಜ್

ಡಾಕ್ಟರ್ ಕೃತಿಕಾ ನೂರಾರು ಕನಸು ಹೊತ್ತು ವೈದ್ಯ ಮಹೇಂದ್ರನ ಕೈ ಹಿಡಿದಿದ್ಲು. ತನ್ನ ಗಂಡನೇ ನನಗೆ ಯಮಲೋಕದ ದಾರಿ ತೋರಿಸ್ತಾನೆ ಅನ್ನೋ ಸಣ್ಣ ಅನುಮಾನವೂ ಆಕೆಗೆ ಇರ್ಲಿಲ್ಲ ಅನ್ಸುತ್ತೆ. ಕಿಲ್ಲರ್ ಪತಿ ಕೃತಿಕಾ ಕಾಲಿಗೆ ಓವರ್ ಡೋಸ್ ಐವಿ ಹಾಕಿ ಡ್ಯೂಟಿಗೆ ಹೋಗಿದ್ದ. ಕೃತಿಕಾ ಅದೆಷ್ಟು ನೋವು ತಿಂದಿದ್ಲೋ ಏನೋ. ಸಾವಿಗೂ ಕೆಲವೇ ನಿಮಿಷಗಳ ಮುನ್ನ ಪತಿಗೆ ಮೆಸೇಜ್ ಮಾಡಿದ್ಲು. ಏಪ್ರಿಲ್ 23 ರಂದು ವಾಟ್ಸಾಪ್ ಮೆಸೇಜ್ ಮಾಡಿದ್ದ ವೈದ್ಯೆ ಕಾಲು ತುಂಬಾ ನೋವಾಗ್ತಿದೆ, ತಡೆಯಲಾಗ್ತಿಲ್ಲ. ನಾನು ಐವಿ ಇಂಜೆಕ್ಷನ್ ತೆಗೆದುಬಿಡ್ತಿನಿ ಪ್ಲೀಸ್ ಅಂತಾ ಮೆಸೇಜ್ ಮಾಡಿದ್ಲು. ಆದ್ರೆ ನರರೂಪ ರಾಕ್ಷಸ ಪತಿ ಇವತ್ತು ಒಂದು ದಿನ ತಡ್ಕೋ.. ಏನು ಆಗಲ್ಲ ಅಂತಾ ರಿಪ್ಲೇ ಮಾಡಿದ್ದ. ಗಂಡನ ಮಾತು ಮೀರದ ಕೃತಿಕಾ ಕೊನೆಗೆ ಕಾಲಿಗೆ ಹಾಕಿದ್ದ ಐವಿ ಇಂಜೆಕ್ಷನ್ ತೆಗೆಯದೇ ಮತ್ತೆ ಬಾರದ ಲೋಕ ಸೇರಿದ್ದಾಳೆ.

ಹೀಗೆ ತನಿಖೆ ಚುರುಕುಗೊಂಡಂತೆಲ್ಲ, ಒಂದೊಂದೇ ರೋಚಕ ಸಂತತಿಗಳು ಬಯಲಾಗುತ್ತಿವೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಜಸ್ಟೀಸ್ ಫಾರ್ ಕೃತಿಕಾ ಅಭಿಯಾನ ನಡೆಯುತ್ತಿದೆ.