ಕರ್ನಾಟಕದಲ್ಲಿ ಈ ವರ್ಷದ ಎಸ್ಎಸ್ಎಲ್ಸಿ ವೇಳಾಪಟ್ಟಿ ಪ್ರಕಟವಾಗಿದ್ದು, ಜುಲೈ 19 ಹಾಗೂ 22ರಂದು ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ. ಜುಲೈ 19ರಂದು(ಸೋಮವಾರ) ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ಬೆಳಗ್ಗೆ 10.30ರಿಂದ 1.30ರ ತನಕ ಹಾಗೂ ಭಾಷಾ ವಿಷಯಗಳ (ಪ್ರಥಮ ಭಾಷೆ ಕನ್ನಡ, ಪ್ರಥಮ ಭಾಷೆ ಉರ್ದು, ಪ್ರಥಮ ಭಾಷೆ ಇಂಗ್ಲಿಷ್, ಪ್ರಥಮ ಭಾಷೆ ಸಂಸ್ಕೃತ, ದ್ವಿತೀಯ ಭಾಷೆ ಇಂಗ್ಲಿಷ್, ದ್ವಿತೀಯ ಭಾಷೆ ಕನ್ನಡ, ತೃತೀಯ ಭಾಷೆ ಹಿಂದಿ, ತೃತೀಯ ಭಾಷೆ ಇಂಗ್ಲಿಷ್) ಪರೀಕ್ಷೆ ಜುಲೈ 22ರಂದು (ಗುರುವಾರ) ಬೆಳಗ್ಗೆ 10.30ರಿಂದ 1.30ರ ಪರೀಕ್ಷೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಜೂನ್ 30ರಂದು ಪರೀಕ್ಷಾ ಹಾಲ್ಟಿಕೆಟ್ಗಳನ್ನು ಶಾಲೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವರ್ಷ 8,76,581 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ, ಕಳೆದ ಬಾರಿ 8 ಲಕ್ಷದ 46 ಸಾವಿರ ವಿದ್ಯಾರ್ಥಿಗಳಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆಗೆಂದೇ ಈ ವರ್ಷ 73,066 ಪರೀಕ್ಷಾ ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರವಾಗಿರಲಿವೆ. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ಪರೀಕ್ಷಾ ತುರ್ತು ಸಿದ್ಧತೆಯನ್ನು ಆರಂಭಿಸಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೊರೊನಾ ನಿಯಮಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆರು ಆಡಿಗೆ ಒಂದರಂತೆ ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು, ಕೊಠಡಿಯಲ್ಲಿ ಗಾಳಿ, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಜತೆಗೆ, ಸಿಸಿಟಿವಿ ಕ್ಯಾಮರಾ ಅಳವಡಿಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ಅಂತರದಲ್ಲಿ ನಿಷೇಧಾಜ್ಞೆ ಇರಲಿದೆ ಎಂದು ತಿಳಿಸಿದ್ದಾರೆ.
ಯಾವುದಾದರೂ ಮಗುವಿಗೆ ಪಾಸಿಟಿವ್ ಇದ್ದರೂ ಪರೀಕ್ಷೆ ಬರೆಯುವ ಆಸೆ ಇದ್ದರೆ, ಹತ್ತಿರದ ಕೊವಿಡ್ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಜತೆಗೆ, ಪರೀಕ್ಷೆ ಬರೆಯುವಾಗ ಯಾವುದಾದರೂ ರೋಗ ಲಕ್ಷಣಗಳಿದ್ದರೆ ಅವರಿಗೆ ಪ್ರತ್ಯೇಕ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು. ಮಕ್ಕಳಿಗೆ ಎನ್ 95 ಮಾಸ್ಕ್ ಅಗತ್ಯವಿಲ್ಲ, ಉತ್ತಮ ಬಟ್ಟೆಯ ಮಾಸ್ಕ್ ಸಾಕು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಸ್ವಚ್ಛವಾದ ಬಟ್ಟೆಯ ಮಾಸ್ಕ್ ಅಥವಾ ಸರ್ಜಿಕಲ್ ಮಾಸ್ಕ್ ಬಳಕೆ ಮಾಡಬಹುದು. ಯಾರಿಗಾದರೂ ರೋಗ ಲಕ್ಷಣಗಳಿದ್ದರೆ ಅವರಿಗೆ ಎನ್95 ಕಡ್ಡಾಯ ಎಂದು ಸೂಚಿಸಿದ್ದಾರೆ. ಅಂತೆಯೇ, ಕೊವಿಡ್ ಕಾರಣಕ್ಕೆ ಯಾವುದಾದರೂ ವಿದ್ಯಾರ್ಥಿ ಪರೀಕ್ಷೆ ಬರೆಯಲಾಗದಿದ್ದರೆ ಅವರಿಗೆ ಮತ್ತೊಮ್ಮೆ ಪರೀಕ್ಷೆ ನೀಡಿ, ಹೊಸಬರೆಂದೇ ಪರಿಗಣಿಸಿ ಪರೀಕ್ಷೆ ಬರೆಸಲಾಗುವುದು ಇದರಲ್ಲಿ ಭಯಬೇಡ ಎಂದು ಹೇಳಿದ್ದಾರೆ.
ಎಲ್ಲಾ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುವುದು, ಪರೀಕ್ಷಾ ಚಟುವಟಿಕೆಗಳಿಗೆ ಸಹಾಯ ಮಾಡಲು ಸ್ಕೌಟ್ಸ್ ಅಂಡ್ ಗೈಡ್ಸ್ ಸ್ವಯಂ ಸೇವಕರು ಮುಂದೆ ಬಂದಿದ್ದಾರೆ. ಇನ್ನು ಆಶಾ ಕಾರ್ಯಕರ್ತೆಯರೂ ಜತೆಯಿರಲಿದ್ದಾರೆ. ಪರೀಕ್ಷಾ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಸಾಗಣೆಗೆ ಭಾರೀ ಭದ್ರತೆ ಕಲ್ಪಿಸಲಾಗುವುದು. ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ವದಂತಿಗಳನ್ನು ಹರಡಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಬರುವ ಸಿಬ್ಬಂದಿ ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ಆಗಿರಬೇಕು. ಲಸಿಕೆ ತೆಗೆದುಕೊಂಡ ನಂತರವೂ ಯಾವುದಾದರೂ ಸಿಬ್ಬಂದಿಗೆ ರೋಗ ಲಕ್ಷಣವಿದ್ದರೆ ಅವರನ್ನು ವಾಪಾಸು ಕಳಿಸಬೇಕು ಎಂದು ಹೇಳಲಾಗಿದೆ. ಮಕ್ಕಳಿಗೆ ಹೋಗುವಾಗ, ಬರುವಾಗ ಸ್ಯಾನಿಟೈಸ್ ಕೂಡಾ ಮಾಡುತ್ತೇವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುವುದು. ಮಕ್ಕಳು ಇದನ್ನು ಅನುಸರಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.
ಕಳೆದ ಬಾರಿ ಜೂನ್ 26 ರಿಂದ ಜುಲೈ 4ರ ತನಕ ಎಸ್ಎಸ್ಎಲ್ಸಿ ಪರೀಕ್ಷೆ ಮಾಡಲಾಗಿತ್ತು. ಅದು ಯಾವುದೇ ಅವಘಡ ಇಲ್ಲದೇ ಯಶಸ್ವಿಯೂ ಆಗಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ, ಪರೀಕ್ಷೆ ಮಾದರಿಯೂ ಬದಲಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸೂಕ್ತ ಸಲಹೆಯನ್ನೂ ಪಡೆಯಲಾಗಿದೆ. ಈ ಬಾರಿ ಎರಡು ದಿನ ಪರೀಕ್ಷೆ ನಡೆಯಲಿದ್ದು ಒಂದು ದಿನ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಇನ್ನೊಂದು ದಿನ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಇದರಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ನೀಡುವ ಕುರಿತು ಈಗಾಗಲೇ ಶಿಕ್ಷಣ ಇಲಾಖೆ ಮಾಹಿತಿ ನೀಡಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆಗಳನ್ನು ರೂಪಿಸಲಾಗುವುದು. ಯಾವ ವಿದ್ಯಾರ್ಥಿಯನ್ನೂ ನಪಾಸು ಮಾಡುವ ಉದ್ದೇಶ ನಮಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಎಲ್ಲಾ ವಿಷಯಗಳ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟವಾಗಿದ್ದು, ಪರೀಕ್ಷಾ ಸ್ವರೂಪದ ಬಗ್ಗೆ ಗೊಂದಲವಿರುವ ವಿದ್ಯಾರ್ಥಿಗಳು ಇದನ್ನು ನೋಡಿಕೊಂಡು ಅಭ್ಯಾಸ ಮಾಡಬಹುದಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುರಕ್ಷಿತ ವಾತಾವರಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಜಿಲ್ಲಾಧಿಕಾರಿಗಳು, ಸಿಇಒ, ಎಸ್ಪಿ, ಡಿಎಚ್ಒಗಳು ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯದ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಪಾಲ್ಗೊಂಡಿದ್ದರು.
ಮಾದರಿ ಪ್ರಶ್ನೆಪತ್ರಿಕೆ ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಪ್ರಥಮ ಭಾಷೆ ಕನ್ನಡ, ಪ್ರಥಮ ಭಾಷೆ ಉರ್ದು, ಪ್ರಥಮ ಭಾಷೆ ಇಂಗ್ಲಿಷ್, ಪ್ರಥಮ ಭಾಷೆ ಸಂಸ್ಕೃತ, ದ್ವಿತೀಯ ಭಾಷೆ ಇಂಗ್ಲಿಷ್, ದ್ವಿತೀಯ ಭಾಷೆ ಕನ್ನಡ, ತೃತೀಯ ಭಾಷೆ ಹಿಂದಿ, ತೃತೀಯ ಭಾಷೆ ಇಂಗ್ಲಿಷ್ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಪ್ರತಿ ವಿಷಯಕ್ಕೆ ತಲಾ 40 ಅಂಕಗಳಂತೆ ಒಟ್ಟು 120 ಅಂಕದ 2 ಪ್ರಶ್ನೆಪತ್ರಿಕೆಗಳನ್ನು ಈ ಬಾರಿ ನೀಡಲಾಗುತ್ತಿದ್ದು, 3 ಗಂಟೆಗಳ ಕಾಲ ಪರೀಕ್ಷೆ ಜರುಗಲಿದೆ. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳು ಬಹು ಆಯ್ಕೆಗೆ ಸಂಬಂಧಿಸಿದವುಗಳೇ ಆಗಿರಲಿದ್ದು, ಉತ್ತರಗಳನ್ನು OMR ಶೀಟ್ನಲ್ಲಿ ನಮೂದಿಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಒಎಮ್ಆರ್ ಶೀಟ್ ಮಾದರಿಯನ್ನೂ ಇಲಾಖೆ ಪ್ರಕಟ ಮಾಡಿದೆ.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರೀಕ್ಷಾ ಕೇಂದ್ರಗಳ ಸಿದ್ಧತೆ ನಡೆಯುತ್ತಿದೆ. ತುರ್ತಾಗಿ ಪರೀಕ್ಷಾ ಕೇಂದ್ರಗಳ ರಚನೆ ಮಾಡಿ ಮಾಹಿತಿ ನೀಡುವಂತೆ ರಾಜ್ಯದ ಎಲ್ಲಾ ನೋಡಲ್ ಅಧಿಕಾರಿಗಳು, ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಿರ್ದೇಶಕರು ಸೂಚನೆ ನೀಡಿದ್ದಾರೆ. ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಗೆ ಕಳೆದ ಸಲಕ್ಕಿಂತ ಹೆಚ್ಚಿನ ಶಿಕ್ಷಕರ ಅವಶ್ಯಕತೆ ಇದೆ. ಹೀಗಾಗಿ ಕೊವಿಡ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು ಹಾಗು ಸಿಬ್ಬಂದಿ ವರ್ಗವನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಪತ್ರ ಬರೆದಿದ್ದಾರೆ.
ಜುಲೈ ಎರಡನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟ
ಜುಲೈ ಎರಡನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸಲು ಪಿಯು ಮಂಡಳಿ ಸಿದ್ಧವಾಗಿದೆ. ಒಂದುವೇಳೆ ಯಾವುದಾದರೂ ಮಗುವಿಗೆ ಫಲಿತಾಂಶದ ಬಗ್ಗೆ ಅಸಮಾಧಾನವಿದ್ದರೆ ಅವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಯಾರಿಗೂ ಅನ್ಯಾಯವಾಗದಂತೆ ಫಲಿತಾಂಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಖಾಸಗಿ ಶಾಲೆಗಳು, ಪೋಷಕರು ಕುಳಿತು ಮಾತನಾಡಬೇಕು
ಖಾಸಗಿ ಶಾಲೆಗಳ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸುರೇಶ್ ಕುಮಾರ್, ಕಳೆದ ವರ್ಷ ಶೇ.30 ರಷ್ಟು ಶುಲ್ಕ ಕಡಿತ ಮಾಡಿದ್ದೆವು. ಅದನ್ನು ಪೋಷಕರು ಹಾಗೂ ಕೆಲ ಖಾಸಗಿ ಶಾಲಾ ಒಕ್ಕೂಟ ಸ್ವಾಗತ ಮಾಡಿದ್ದರು. ಆದರೆ, ಇನ್ನು ಕೆಲವರು ಅದನ್ನು ವಿರೋಧಿಸಿ ಕೋರ್ಟ್ ಮೊರೆ ಹೋಗಿದ್ದರು. ಈ ಬಾರಿ ನಾವು ನಾವು ಕೋರ್ಟ್ ಗಮನಕ್ಕೆ ತಂದಿದ್ದೇವೆ. ಶುಲ್ಕ ಸಮಿತಿ ವಿಚಾರ ಕೋರ್ಟ್ ಮುಂದೆ ಪ್ರಸ್ತಾಪ ಮಾಡಿದ್ದೇವೆ. ಕೋರ್ಟ್ ಏನು ಹೇಳುತ್ತೆ ಎಂದು ನೋಡೋಣ. ಪೋಷಕರ ಪರಿಸ್ಥಿತಿ ಕೂಡ ನಮಗೆ ಅರ್ಥವಾಗುತ್ತೆ. ಜತೆಗೆ, ಶಾಲೆಗಳು ಕೂಡ ಪೋಷಕರು ಶುಲ್ಕ ಕಟ್ಟಿಲ್ಲ ಅಂದರೆ ಶಿಕ್ಷಕರಿಗೆ ಸಂಬಳ ಕೊಡಲು ಸಾಧ್ಯವಿಲ್ಲ ಎಂದು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿವೆ. ಹೀಗಾಗಿ, ಪೋಷಕರು ಹಾಗೂ ಖಾಸಗಿ ಶಾಲೆಗಳು ಕುಳಿತು ಮಾತನಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
School Reopening: ಶಿಕ್ಷಣದ ಜತೆ ಮಕ್ಕಳ ಜೀವವೂ ಮುಖ್ಯ, ಶಾಲೆ ಆರಂಭಕ್ಕೆ ಆತುರ ಬೇಡ – ಆರೋಗ್ಯ ಸಚಿವ ಡಾ.ಸುಧಾಕರ್
Published On - 1:10 pm, Mon, 28 June 21