ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru Mysuru Expressway) ಅಳವಡಿಸಿರುವ ವಿದ್ಯುತ್ ಕಂಬಗಳು (Electric poles) ರಸ್ತೆಗೆ ಕುಸಿದು ಬೀಳುತ್ತಿದ್ದು, ಪ್ರಯಾಣಿಕರಿಗೆ ಆತಂಕ ಎದುರಾಗಿದೆ. ಭಾರಿ ಗಾಳಿಗೆ ಮದ್ದೂರಿನ ರುದ್ರಾಕ್ಷಿಪುರ ಹಾಗೂ ತೂಬಿನಕೆರೆ ಬಳಿಯ ಎಕ್ಸ್‌ಪ್ರೆಸ್‌ವೇನಲ್ಲಿ ನಾಲ್ಕೈದು ವಿದ್ಯುತ್ ಕಂಬಗಳು ಧರೆಗುರುಳಿವೆ. ಪ್ರಯಾಣಿಕರ ಹಿತದೃಷ್ಟಿಯಿಂದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಒಪ್ಪಿಗೆ ನೀಡಿತ್ತು. ಆದರೆ ಕಾಮಗಾರಿ ವಿಳಂಬವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಎಕ್ಸ್‌ಪ್ರೆಸ್‌ವೇಯ ಉದ್ದಕ್ಕೂ ಅಳವಡಿಸಲಾಗಿರುವ ವಿದ್ಯುತ್ ಕಂಬಗಳು ದುರ್ಬಲಗೊಂಡಿವೆ ಮತ್ತು ಅಲುಗಾಡುತ್ತಿವೆ. ವಿದ್ಯುತ್ ಕಂಬಗಳ ಆಧಾರಕ್ಕಾಗಿ ಅವುಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಲೋಹದ ಬಾರ್‌ಗಳನ್ನು ದುಷ್ಕರ್ಮಿಗಳು ಕಳವು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಲೋಹದ ಬಾರ್‌ಗಳನ್ನು ತೆಗೆಯುವ ಕಾರಣ ಕಂಬಗಳು ದುರ್ಬಲಗೊಂಡು ಗಾಳಿಗೆ ಧರೆಗುರುಳುತ್ತಿವೆ ಎನ್ನಲಾಗಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (CESC) ಅಧಿಕಾರಿಯೊಬ್ಬರು ಇತ್ತೀಚೆಗೆ 240 ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಆಧಾರವಾಗಿ ಇಟ್ಟಿದ್ದ ಲೋಹದ ಬಾರ್‌ಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಒಟ್ಟು 400 ವಿದ್ಯುತ್ ಕಂಬಗಳಿವೆ.
ಇದನ್ನೂ ಓದಿ: Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಎಸ್ಒಎಸ್ ಬಾಕ್ಸ್; ಏನಿದು, ಬಳಸುವುದು ಹೇಗೆ?
ವಿದ್ಯುತ್ ಕಂಬಗಳು 18 ರಿಂದ 21 ಮೀಟರ್ ಉದ್ದವಿದೆ. ರಾತ್ರಿ ವೇಳೆ ದುಷ್ಕರ್ಮಿಗಳು ಕಂಬಗಳಿಗೆ ಅಡ್ಡಲಾಗಿರುವ ಲೋಹದ ಬಾರ್‌ಗಳನ್ನು ಕದಿಯುತ್ತಾರೆ. ವಿದ್ಯುತ್ ಕಂಬಗಳನ್ನು ಉನ್ನತ ದರ್ಜೆಯ ಉಕ್ಕಿನಿಂದ ಮಾಡಲಾಗಿದ್ದು, ವಿದ್ಯುತ್ ಕಂಬಗಳಿಂದ ಲೋಹದ ಬಾರ್‌ಗಳನ್ನು ಕದ್ದು ಸ್ಕ್ರ್ಯಾಪ್ ಯಾರ್ಡ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಎನ್‌ಎಚ್‌ಎಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ