ಯಾದಗಿರಿ ಸರ್ಕಾರಿ ಕಚೇರಿಯಲ್ಲಿ ಕವಿದ ಕತ್ತಲು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ ಸಾರ್ವಜನಿಕರು

ಜೆಸ್ಕಾ ಇಲಾಖೆ ಅಧಿಕಾರಿಗಳು ಎರಡು ತಿಂಗಳ ಹಿಂದೆಯೇ ವಿದ್ಯುತ್ ಬಿಲ್ ಪಾವತಿಸುವಂತೆ ಹೇಳಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ. ಹೀಗಾಗಿ ಮೂಲಾಜಿಲ್ಲದೆ ಕರೆಂಟ್ ಕಟ್ ಮಾಡಲಾಗಿದೆ.

ಯಾದಗಿರಿ ಸರ್ಕಾರಿ ಕಚೇರಿಯಲ್ಲಿ ಕವಿದ ಕತ್ತಲು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ ಸಾರ್ವಜನಿಕರು
ವಿದ್ಯುತ್ ಇಲ್ಲದೆ ಭೂಮಾಪನ ಇಲಾಖೆ ಕಚೇರಿಯಲ್ಲಿ ಜನರ ಪರದಾಟ
Updated By: sandhya thejappa

Updated on: Apr 19, 2021 | 4:29 PM

ಯಾದಗಿರಿ: ಜಿಲ್ಲೆಯ ಸರ್ಕಾರಿ ಕಚೇರಿಗೆ ಜನರು ಕೆಲಸಕ್ಕೆ ಬರಬೇಕಾದರೆ ಕೈಯಲ್ಲಿ ಟಾರ್ಚ್ ಹಿಡಿದು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಸರ್ಕಾರಿ ಕಚೇರಿಯಲ್ಲಿ ಕರೆಂಟ್ ಇಲ್ಲದೇ ಇರುವುದು. ಹೀಗಾಗಿ ಇಲ್ಲಿನ ಅಧಿಕಾರಿಗಳು ಕೆಲಸದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಮತ್ತು ಸಾರ್ವಜನಿಕರು ಕೆಲಸಕ್ಕಾಗಿ ಕಚೇರಿಗೆ ಬಂದಾಗ ಕರೆಂಟ್ ಇಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ.

ಯಾದಗಿರಿ ನಗರದಲ್ಲಿರುವ ಜಿಲ್ಲಾ ಭೂಮಾಪನ ಇಲಾಖೆ ಕಚೇರಿಯಲ್ಲಿ ಕಳೆದ ಎರಡು ತಿಂಗಳನಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಇನ್ನು ಈ ಕಚೇರಿಗೆ ಬರುವ ಸಾರ್ವಜನಿಕರು ಸಹ ಕೈಯಲ್ಲಿ ಟಾರ್ಚ್ ಹಿಡಿದುಕೊಂಡೆ ಒಳಗೆ ಬರಬೇಕು ಇಲ್ಲವಾದಲ್ಲಿ ಕಚೇರಿಯಲ್ಲಿ ಯಾರು ಎಲ್ಲಿದ್ದಾರೆ ಎಂದು ಗೊತ್ತಾಗುವುದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಬೆಳಕಿನ ಸಮಸ್ಯೆ ಇದೆ.

ಜಮೀನು ಅಥವಾ ನಿವೇಶಗಳು ಅಳತೆ ಮಾಡಲು ಅರ್ಜಿ ಸಲ್ಲಿಸಿ ನಾಲ್ಕೈದು ತಿಂಗಳು ಕಳೆದರು ಸಹ ಯಾವುದೇ ಕೆಲಸಗಳು ಆಗುತ್ತಿಲ್ಲ. ಕಚೇರಿಗೆ ಬಂದು ವಿಚಾರಸಿದರೆ ಕರೆಂಟ್ ಇಲ್ಲ ಎಂದು ಅಧಿಕಾರಿಗಳು ಉತ್ತರ ನೀಡುತ್ತಿದ್ದಾರೆ. ಇನ್ನು ಇದೆ ಜನವರಿ ಮತ್ತು ಫೆಬ್ರುವರಿಯಲ್ಲಿ ಕಚೇರಿಯಲ್ಲಿ ಸರ್ವರ್ ಬರುತ್ತಿಲ್ಲ ಎಂದು ಸಬೂಬು ನೀಡಿದ ಅಧಿಕಾರಿಗಳು, ಈಗ ಕರೆಂಟ್ ಇಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಏಕೆ ಗಮನ ಹರಿಸುತ್ತಿಲ್ಲ ಎಂದು ಯಾದಗಿರಿ ನಿವಾಸಿ ಕಾಶಿನಾಥ್ ಅಳಲು ತೋಡಿಕೊಂಡಿದ್ದಾರೆ.

ಸದ್ಯ ಯಾದಗಿರಿ ಜಿಲ್ಲಾ ಭೂಮಾಪನ ಇಲಾಖೆ ಕಚೇರಿಯನ್ನ ಯಾದಗಿರಿ ಜಿಲ್ಲಾ ನ್ಯಾಲಯದ ಮುಂಭಾಗದಲ್ಲಿರುವ ಖಾಸಗಿ ಕಾಂಪ್ಲೇಕ್ಸ್​ನಲ್ಲಿ ನಡೆಸಲಾಗುತ್ತಿದೆ. ಇದರ ಮಧ್ಯೆ ಸದ್ಯ ಕರೆಂಟ್ ಸಮಸ್ಯೆಯೊಂದು ಕಾಡುತ್ತಿದೆ. ಇನ್ನು ಗ್ರಾಮೀಣ ಭಾಗದ ಜನರು ಭೂಮಾಪನ ಇಲಾಖೆಯಲ್ಲಿ ಕೆಲಸ ಇದೆ ಅಂತ ನೂರಾರು ರೂಪಾಯಿ ಖರ್ಚು ಮಾಡಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಬರುತ್ತಾರೆ. ಆದರೆ ಇಲ್ಲಿ ನೋಡಿದರೆ ಕರೆಂಟ್ ಕಟ್ ಆಗಿದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಬಂದ ದಾರಿಗೆ ಸುಂಕ ಇಲ್ಲ ಎನ್ನುವ ಹಾಗೆ ಕಳೆದ ಎರಡು ತಿಂಗಳಿನಿಂದ ಅಲೆದಾಡುತ್ತಿದ್ದಾರೆ.

ಜೆಸ್ಕಾ ಇಲಾಖೆ ಅಧಿಕಾರಿಗಳು ಎರಡು ತಿಂಗಳ ಹಿಂದೆಯೇ ವಿದ್ಯುತ್ ಬಿಲ್ ಪಾವತಿಸುವಂತೆ ಹೇಳಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ. ಹೀಗಾಗಿ ಮೂಲಾಜಿಲ್ಲದೆ ಕರೆಂಟ್ ಕಟ್ ಮಾಡಲಾಗಿದೆ. ಕಳೆದ ಎರಡು ತಿಂಗಳಿನಿಂದ ಕರೆಂಟ್ ಇಲ್ಲದೆ ಇರುವ ಕಾರಣಕ್ಕೆ ಕಂಪ್ಯೂಟರ್​ಗಳು ಯಾರು ಬಳಕೆ ಮಾಡದೆ ಹಾಳಾಗುವ ಹಂತಕ್ಕೆ ಬಂದು ನಿಂತಿವೆ. ಇನ್ನು ಈ ಬಗ್ಗೆ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಬಿಲ್ ಕಟ್ಟದ ಕಾರಣಕ್ಕೆ ವಿದ್ಯುತ್ ಕಟ್ ಮಾಡಲಾಗಿದೆ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪ್ರಭಾರಿ ಭೂಮಾಪನಾ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಇಂಡಿಗೇರಿ ಹೇಳಿದ್ದಾರೆ.

ಒಟ್ಟಿನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಟ್ ಮಾಡುವುದು ಸಹಜ. ಆದರೆ ಸರ್ಕಾರಿ ಕಚೇರಿಗಳೇ ಹೀಗೆ ಬಿಲ್ ಕಟ್ಟದೆ ಇದ್ದರೆ ಹೇಗೆ ಎನ್ನುವ ಪ್ರಶ್ನೆ ಉದ್ಭವವಾಗಿದ್ದು, ಅದರಲ್ಲಿಯೂ ಹೀಗೆ ಬಿಲ್ ಕಟ್ಟದೆ ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗುವಂತೆ ನಡೆದುಕೊಂಡಿದ್ದು, ನಿಜಕ್ಕೂ ವಿಪರ್ಯಾಸದ ಸಂಗತಿಯೇ ಸರಿ.

ಇದನ್ನೂ ಓದಿ:

ಹಾಸನ: ಕತ್ತಲೆಯಲ್ಲಿ ಮುಳುಗಿದ ಬದುಕು.. ವಿದ್ಯುತ್​ ಭಾಗ್ಯಕ್ಕೆ ಗ್ರಾಮಸ್ಥರ ಆಗ್ರಹ

ಬಾಗಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೆಂಟ್ ಹೋದರೆ ಬೇರೆ ವ್ಯವಸ್ಥೆಯಿಲ್ಲ.. ಕಂಗಾಲಾದ ಜನರು!

(Electricity problem at Revenue Department in Yadgir and people express unhappy)