
ಬೆಂಗಳೂರು, (ಆಗಸ್ಟ್ 19): ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತ ಗಜರಾಜನ ರಾಜಗಾಂಭೀರ್ಯದ ಹೆಜ್ಜೆ ಹಾಕಿದ್ದ ಆನೆ ಅಭಿಮನ್ಯು (abhimanyu elephant) ನಿವೃತ್ತಿಯಾಗಿದ್ದಾನೆ. 6 ವರ್ಷ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅಭಿಮನ್ಯುಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿವೃತ್ತಿ ನೀಡಲಾಗಿದೆ. ಹೀಗಾಗಿ ಈ ಬಾರಿ ಅಂಬಾರಿ ಹೊರುವ ಆನೆ ಯಾವುದು ಎನ್ನುವು ಕುತೂಹಲ ಮೂಡಿಸಿದೆ. ಇದರ ಮಧ್ಯೆ ಆರು ಬಾರಿ ಚಿನ್ನದ ಅಂಬಾರಿ ಹೊತ್ತು ಜನರ ಅಚ್ಚುಮೆಚ್ಚಿನ ಆನೆ ಆಗಿದ್ದ ಅಭಿಮನ್ಯುಗೆ ಗೌರಯುತವಾಗಿ ಬೀಳ್ಕೊಡಿಗೆ ನೀಡುವ ಬೇಕೆನ್ನುವ ಮಾತುಗಳು ಕೇಳಿಬಂದಿವೆ. ಹೌದು…ಖುದ್ದು ಈ ಹಿಂದೆ ಅರಣ್ಯ ಸಚಿವರಾಗಿದ್ದ ಈಗಿನ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅವರು ಪತ್ರ ಬರೆದಿದ್ದಾರೆ.
ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಈಶ್ವರ್ ಖಂಡ್ರೆ ಪತ್ರ ಬರೆದಿದ್ದು, ಆರು ಬಾರಿ ಚಿನ್ನದಾಂಬರಿ ಹೊತ್ತ 60 ವರ್ಷದ ಕ್ಯಾಪ್ಟನ್ ಅಭಿಮನ್ಯುಗೆ ಈ ಬಾರಿ ಮೈಸೂರು ದಸರಾ ಜಂಬುಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ರಾಜೋಚಿತ ಬೀಳ್ಕೊಡಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಬಗ್ಗೆ ರಾಜ್ಯದ ಜನತೆಗೆ ಅವಿನಾಭಾವ ಸಂಬಂಧವಿದೆ. ಚಿನ್ನದಂಬಾರಿ ಹೊರುವ ಆನೆಗಳ ಬಗ್ಗೆಯಂತೂ ವಿಶೇಷ ಪ್ರೀತಿ ಇದೆ. ಈ ಬಾರಿ ದಸರಾ ಮಹೋತ್ಸವದಿಂದ ಕ್ಯಾಪ್ಟನ್ ಅಭಿಮನ್ಯುವನ್ನು ಕೈಬಿಟ್ಟಿರುವುದು ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ. ದಸರಾ ಮಹೋತ್ಸವದಲ್ಲಿ ಆರು ಬಾರಿ ನಾಡದೇವಿ ಚಾಮುಂಡೇಶ್ವರಿ ವಿರಾಜಮಾನಳಾದ 750 ಕೆ.ಜಿ. ತೂಕದ ಚಿನ್ನದಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಅಭಿಮನ್ಯುವಿಗೆ ನಾಡಿನಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಏಕಾ ಏಕಿ ಅಭಿಮನ್ಯುವನ್ನು ದಸರಾ ಮಹೋತ್ಸವದಿಂದ ಹೊರಗಿಡುವ ಬದಲು ನಿಶಾನೆ ಆನೆಯಾಗಿ ಬಳಸಿ, ಗೌರವಪೂರ್ವಕವಾಗಿ ಮತ್ತು ರಾಜೋಚಿತವಾಗಿ ಬೀಳ್ಕೊಡುಗೆ ನೀಡಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.
ನಾಗರಹೊಳೆಯ ಮತ್ತಿಗೋಡು ಶಿಬಿರದ 59 ವರ್ಷ ವಯಸ್ಸಿನ ಅಭಿಮನ್ಯು 300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆ ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾನೆ. 6 ಬಾರಿ ಅಂಬಾರಿ ಹೊತ್ತು ರಾಜ್ಯದ ಜನರ ಹೃದಯದಲ್ಲಿ ನೆಲೆಸಿದ್ದಾನೆ. 1968ರಲ್ಲಿ ಕಾಕನಕೋಟೆ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ 22 ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, 8 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ. 60 ವರ್ಷ ತುಂಬಿದ ಬಳಿಕವೂ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ. ಅದೇ ರೀತಿ ಬಲರಾಮ ಕೂಡ ಪಾಲ್ಗೊಂಡಿದ್ದ. ಈ ಗೌರವವನ್ನು ಅಭಿಮನ್ಯುವಿಗೂ ನೀಡಿ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡುವಂತೆ ಮತ್ತೊಮ್ಮೆ ಕೋರುತ್ತೇನೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಬರೆದಿದ್ದಾರೆ.