ಹಾವೇರಿ: ಬೇಡಿಕೆ ಕಡಿಮೆಯಾಗಿದ್ದಕ್ಕೆ ಬೇಸತ್ತ ಬೆಳೆಗಾರ ತಾವು ಬೆಳೆದ ಚೆಂಡು ಹೂವನ್ನೇ ನಾಶ ಮಾಡಿದ ಘಟನೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ನಡೆದಿದೆ. ತಾನೇ ಬೆಳೆದ ಹೂವಿನ ಗಿಡಗಳನ್ನು ನಾಶ ಮಾಡಿದ್ದು, ವೀರಪ್ಪ ಎಂಬ ರೈತ.
ದೀಪಾವಳಿ, ತುಳಸಿ ಮದುವೆ ಮುಗಿದ ಮೇಲೆ ಅದ್ದೂರಿ ಜಾತ್ರೆ, ಉತ್ಸವ ಅದೂ-ಇದು ಎನ್ನುತ್ತ ಹೇಗೂ ಹೂವಿಗೆ ಬೇಡಿಕೆ ಇದ್ದೇ ಇರುತ್ತದೆ ಎಂದು ರೈತ ವೀರಪ್ಪ ತನ್ನ 30 ಗುಂಟೆ ಜಮೀನಿನಲ್ಲಿ ಹಳದಿ, ಕೇಸರಿ ಬಣ್ಣದ ಚೆಂಡು ಹೂವುಗಳನ್ನು ಬೆಳೆದಿದ್ದರು. ಆದರೆ ಈ ಬಾರಿ ಕೊರೊನಾ ಕಾಟದಿಂದ ಜಾತ್ರೆ, ಉತ್ಸವಗಳೆಲ್ಲ ಸರಳವಾಗಿ ನಡೆಯುತ್ತಿವೆ. ಹೂವಿಗೂ ಬೇಡಿಕೆ ಕಡಿಮೆ ಆಯಿತು. ಹಾಗಾಗಿ ಗಿಡಗಳನ್ನೇ ನಾಶ ಮಾಡಿದ್ದಾರೆ.
3 ವರ್ಷಗಳಿಂದ ನಷ್ಟ
ಚೆಂಡು ಹೂ ಬೆಳಗಾರನಾದ ರೈತ ವೀರಪ್ಪ, ಕಳೆದ ಮೂರು ವರ್ಷಗಳಿಂದಲೂ ನಷ್ಟದಲ್ಲೇ ಇದ್ದರು. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಹೂವು ಬೆಳೆಯಲು ಹಾಕಿದ ಬಂಡವಾಳವೂ ಕೈ ಸೇರದಂತೆ ಆಗಿತ್ತು. ಈ ಬಾರಿ ದೀಪಾವಳಿ, ತುಳಸಿ ಮದುವೆ ಸಮಯದಲ್ಲಿ ಚೆಂಡು ಹೂವಿಗೆ ಬೇಡಿಕೆ ಬಂದು ಸ್ವಲ್ಪ ಮಟ್ಟಿನ ಲಾಭ ಕಂಡಿತ್ತಾದರೂ, ಕಡೆಗೆ ಕುಗ್ಗಿತ್ತು. ಇನ್ನೂ ಒಂದೊಂದು ಗಿಡಗಳಲ್ಲಿ 60-70 ಹೂವುಗಳು ಇದ್ದವು. ಯಾವುದೇ ಜಾತ್ರೆ, ಉತ್ಸವಗಳು ಇಲ್ಲದ ಕಾರಣ, ರೈತ ವೀರಪ್ಪ ಟ್ರ್ಯಾಕ್ಟರ್ನಿಂದ ರೋಟರ್ ಹೊಡೆಸಿ, ಚೆಂಡು ಹೂವುಗಳನ್ನು ನಾಶ ಮಾಡಿದ್ದಾರೆ.
ನೆರವಿಗೆ ಬರಲಿಲ್ಲ ಸಹಾಯಧನ
ಕೊರೊನಾ ಲಾಕ್ಡೌನ್ ಸಮಯದಲ್ಲಿ ಹೂವು ಬೆಳೆದು ನಷ್ಟ ಅನುಭವಿಸಿದವರಿಗೆ ಸಹಾಯಧನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ರೈತ ವೀರಪ್ಪ, ಮೂರು ವರ್ಷಗಳಿಂದ ಚೆಂಡು ಹೂವು ಬೆಳೆಯುತ್ತಿದ್ದರೂ ಸರ್ಕಾರ ಕೊರೊನಾ ಲಾಕ್ಡೌನ್ ಸಮಯದಲ್ಲಿ ಘೋಷಿಸಿದ ಸಹಾಯಧನ ರೈತನ ಕೈ ಸೇರಿಲ್ಲ. ಅರಳಿ ನಿಂತ ಹೂವುಗಳನ್ನು ನಾಶ ಮಾಡಲು ಸಂಕಟವಾದರೂ, ಬೇರೆ ಬೆಳೆ ಬೆಳೆಯಬಹುದಲ್ಲಾ ಎಂಬ ಆಸೆಯಿಂದ ನಾಶ ಮಾಡಿದ್ದಾಗಿ ವೀರಪ್ಪ ಹೇಳಿದ್ದಾರೆ.
Published On - 9:40 pm, Thu, 10 December 20