ಕೋಲಾರ: ಒಂದೇ ತರನಾದ ಬೆಳೆಯನ್ನು ಬೆಳೆದು ನಷ್ಟ ಅನುಭವಿಸುತ್ತಿದ್ದ ಕೋಲಾರದ ರೈತರು ಹೊಸ ಬೆಳೆಯತ್ತ ಮುಖ ಮಾಡಿದ್ದು, ಉತ್ತಮ ಲಾಭ ಗಳಿಸಿದ್ದಾರೆ. ಟೊಮ್ಯಾಟೋ ಹಾಗೂ ಇನ್ನಿತರ ತರಕಾರಿ ಗಿಡಗಳನ್ನು ಬೆಳೆದು ನಷ್ಟದ ಮೇಲೆ ನಷ್ಟ ಅನುಭವಿಸಿದ್ದ, ಬಯಲು ಸೀಮೆಯ ರೈತರಿಗೆ ಕಳ್ಳಿ ಜಾತಿಯ ಗಿಡದ ಹಣ್ಣು ಕೈ ಹಿಡಿಯುತ್ತಿದೆ. ಅತಿ ಅಪರೂಪವಾದ ಈ ಹಣ್ಣುಗಳನ್ನು ಬೆಳೆದ ರೈತರಿಗೆ ಒಳ್ಳೆಯ ಸಂಪಾದನೆಯಾದರೆ, ಅದನ್ನು ತಿಂದವರಿಗೂ ಉತ್ತಮ ಆರೋಗ್ಯ ಸಿಗುತ್ತಿದೆ. ಹಾಗಿದ್ದಾರೆ ಆ ಬೆಳೆ ಯಾವುದು ಎಂಬ ಪ್ರಶ್ನೆ ಮೂಡುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಕೋಲಾರ ಜಿಲ್ಲೆಯಲ್ಲಿ ರೈತರು ಮೇಲಿಂದ ಮೇಲೆ ಟೊಮ್ಯಾಟೋ ಹಾಗೂ ಇನ್ನಿತರ ತರಕಾರಿ ಬೆಳೆಗಳನ್ನು ಬೆಳೆದು ಸರಿಯಾಗಿ ಬೆಲೆ ಸಿಗದೆ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದರು. ಅದಕ್ಕಾಗಿಯೇ ಈಗ ಹೊಸ ಪ್ರಯೋಗಕ್ಕೆ ಜಿಲ್ಲೆಯ ರೈತರು ಇಳಿದಿದ್ದಾರೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಶ್ರೀನಿವಾಸಪುರ ತಾಲ್ಲೂಕು ಕಾಡದೇವಂಡಹಳ್ಳಿ ಗ್ರಾಮದ ಧನಂಜಯಗೌಡ ಎಂಬುವರು ತಮ್ಮ ಒಂದು ಎಕರೆ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಹೀಗೆ ಸ್ನೇಹಿತರೊಬ್ಬರು ನೀಡಿದ ಮಾಹಿತಿಯನ್ನು ಆಧರಿಸಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ನಿರ್ಧರಿಸಿದ ಅವರು, ಗುಜರಾತ್ನಿಂದ ಡ್ರ್ಯಾಗನ್ ಫ್ರೂಟ್ ನಾರುಗಳನ್ನು ತರಿಸಿ ಅದನ್ನು ಬೆಳೆದಿದ್ದಾರೆ.
18 ತಿಂಗಳ ನಂತರ ಮೊದಲ ಫಸಲು ಬಂದಿದ್ದು, ಮೊದಲ ಫಸಲಲ್ಲೇ, ಕೊರೊನಾ ಲಾಕ್ಡೌನ್ ನಡುವೆಯೂ ಒಳ್ಳೆಯ ಲಾಭ ಬಂದಿದೆ. ಬಯಲು ಸೀಮೆ ಕೋಲಾರದ ವಾತಾವಣದಲ್ಲಿ ಈ ಡ್ರ್ಯಾಗನ್ ಫ್ರೂಟ್ ಬೆಳೆಯೋದು ಅಷ್ಟು ಸುಲಭವಲ್ಲ. ಹೆಚ್ಚಾಗಿ ಬಂಡವಾಳ ಬಯಸುವ ಈ ಬೆಳೆ, ಒಮ್ಮೆ ಹಾಕಿದರೆ ಕನಿಷ್ಠ 20 ವರ್ಷ ನಿರಂತರವಾಗಿ ಫಸಲು ಕೊಡುತ್ತದೆ. ವರ್ಷದಲ್ಲಿ ಅಂದರೆ, ಮಾರ್ಚ್ನಲ್ಲಿ ಆರಂಭವಾದರೆ ನಿರಂತರವಾಗಿ ನವೆಂಬರ್ವರೆಗೂ ಫಸಲು ಕೊಡುತ್ತದೆ. ನಿರ್ವಹಣೆ ವೆಚ್ಚವನ್ನು ಹೊರತು ಪಡಿಸಿದರೆ, ಬೇರೆ ಬೆಳೆಯಂತೆ ಅಷ್ಟೇನು ನೀರು ಹಾಗೂ ಕೂಲಿಯವರನ್ನು ಅಪೇಕ್ಷಿಸುವುದಿಲ್ಲ ಎಂದು ಡ್ರ್ಯಾಗನ್ ಫ್ರೂಟ್ ಬೆಳೆದ ರೈತ ಧನಂಜಯಗೌಡ ತಿಳಿಸಿದ್ದಾರೆ.
ಆಗಾಗ ಕೀಟನಾಶಕ ಸಿಂಪಡಿಸಿ, ಗೊಬ್ಬರ ಹಾಕಿ ಚೆನ್ನಾಗಿ ನಿರ್ವಹಣೆ ಮಾಡಿದರೆ. ಡ್ರ್ಯಾಗನ್ ಫ್ರೂಟ್ನಿಂದ ಒಳ್ಳೆಯ ಲಾಭ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಈ ಡ್ರ್ಯಾಗನ್ ಫ್ರೂಟ್ ಒಂದು ಹಣ್ಣು 150 ಗ್ರಾಂ ನಿಂದ 450 ಗ್ರಾಂ ವರೆಗೆ ಬರುತ್ತದೆ. ಮಾರುಕಟ್ಟೆಯಲ್ಲೂ ಇದಕ್ಕೆ ಒಳ್ಳೆಯ ಬೇಡಿಕೆ ಇದೆ. ಒಂದು ಹಣ್ಣಿಗೆ 40 ರಿಂದ 50 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವ ಬೆಳೆಗೂ ಬೆಲೆ ಇಲ್ಲ. ಹೀಗಿರುವಾಗ ಡ್ರ್ಯಾಗನ್ ಫ್ರೂಟ್ ಬೆಳೆದ ರೈತರಿಗೆ ಒಂದಷ್ಟು ಆದಾಯ ಸಿಗುತ್ತಿದೆ. ಬೇರೆ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುವುದಕ್ಕಿಂತ ಡ್ರ್ಯಾಗನ್ ಫ್ರೂಟ್ ಬೆಳೆ ಉತ್ತಮ ಎಂದು ತೋಟ ನಿರ್ವಹಣೆ ಮಾಡುವ ನಂದನ್ಗೌಡ ಹೇಳಿದ್ದಾರೆ.
ಒಟ್ಟಾರೆ ಹಳ್ಳಿಗಳಲ್ಲಿ ಡ್ರ್ಯಾಗನ್ ಫ್ರೂಟ್ನಂತಹ ಹಣ್ಣುಗಳಿಗೆ ಬೇಡಿಕೆ ಕಡಿಮೆಯಾದರೂ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಹಾಗಾಗಿಯೇ ಕಷ್ಟಪಟ್ಟು ಬೆಳೆದವರಿಗೆ ಮೋಸವಾಗದೆ ಒಂದಷ್ಟು ಆದಾಯ ಮಾಡೋದಕ್ಕೆ ಈ ಡ್ರ್ಯಾಗನ್ ಫ್ರೂಟ್ ದಾರಿಯಾಗಿದೆ.
ಇದನ್ನೂ ಓದಿ:
ಮುಕ್ಕಾಲು ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಆದಾಯ ಗಳಿಸಿದ ರೈತ; ಬಿಬಿಎಂ ಪದವೀಧರನ ಕೃಷಿ ಒಲವು
ಗುಜರಾತ್ನಲ್ಲಿ ಡ್ರ್ಯಾಗನ್ ಫ್ರೂಟ್ಗೆ ಮರುನಾಮಕರಣ; ಇನ್ಮುಂದೆ ಈ ಹಣ್ಣು ‘ಕಮಲಂ’ ಎಂದ ಮುಖ್ಯಮಂತ್ರಿ
Published On - 9:03 am, Sun, 18 July 21