ಮಂಡ್ಯ: ಜಿ.ಮಾದೇಗೌಡ.. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುರುದೇವರಹಳ್ಳಿ ಗ್ರಾಮದ ನಿವಾಸಿ. ಮಾಜಿ ಸಂಸದ, ಹಿರಿಯ ರೈತ ಹೋರಾಟಗಾರರು. ಕಾವೇರಿ ನೀರು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.. ಬಡವರ ನೋವಲ್ಲಿ.. ರೈತರ ಕಷ್ಟಗಳಲ್ಲಿ ಭಾಗಿಯಾಗುತ್ತಿದ್ದ ಕರುಣಾಮಯಿ.. ಯಾರಿಗೂ ಕೆಟ್ಟದ್ದು ಬಯಸದ ಸಹೃದಯದವರು.. ಆದ್ರೆ, ಇಂತಹ ಹಿರಿಯಜೀವ ಈಗ ನೆನಪು ಮಾತ್ರ.
ಸದ್ಯ ಕೆ.ಎಂ.ದೊಡ್ಡಿಯಿಂದ ಮಂಡ್ಯದ ಬಂದೀಗೌಡ ಬಡಾವಣೆಯ ನಿವಾಸಕ್ಕೆ ಪಾರ್ಥಿವ ಶರೀರ ಶಿಫ್ಟ್ ಮಾಡಲಾಗಿದೆ. ಮನೆ ಬಳಿ ಬೆಳಗ್ಗೆ 11ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಗಾಂಧಿ ಭವನದ ಬಳಿ ಅಂತಿಮ ದರ್ಶನಕ್ಕೆ ಇಡಲಾಗುತ್ತೆ. ಗಣ್ಯರು, ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಮಾದೇಗೌಡರ ಆಸೆ ಇನ್ನೂ ಈಡೇರಿಲ್ಲ
ಮಾಜಿ ಸಂಸದ ಜಿ.ಮಾದೇಗೌಡ ನಿಧನಕ್ಕೆ ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಸಂತಾಪ ಸೂಚಿಸಿದ್ದಾರೆ. ಮದೇಗೌಡರ ಆಸೆ ಇನ್ನೂ ಈಡೇರಿಲ್ಲ. ಕಾವೇರಿ ವಿಚಾರದಲ್ಲಿ ಇನ್ನೂ ನಮಗೆ ಸರಿಯಾದ ನ್ಯಾಯ ದೊರೆತಿಲ್ಲ. ಕಾವೇರಿ ವಿಚಾರವಾಗಿ ಮಾದೇಗೌಡರು ಸಾಕಷ್ಟು ಹೋರಾಟ ನಡೆಸಿದ್ದಾರೆ. ಕಾವೇರಿ ವಿಚಾರದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ಲ ಎಂಬ ಕೊರಗು ಮಾದೇಗೌಡರಿಗೆ ಇತ್ತು. ಈ ಬಗ್ಗೆ ಮತ್ತೆ ಹೋರಾಟ ಮುಂದುರೆಯಬೇಕು. ಕಾವೇರಿ ವಿಚಾರದಲ್ಲಿ ನ್ಯಾಯದೊರಕಿದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂದು ಅಂತಿಮ ದರ್ಶನದ ನಂತರ ಮಂಡ್ಯ ಶಾಸಕ ಎಂ ಶ್ರೀನಿವಾಸ್ ಹೇಳಿದ್ರು.
ಗಾಂಧಿ ಗ್ರಾಮ ಯೋಜನೆ ಪೂರ್ತಿಗೊಳಿಸಲಾಗದೆ ಹೋಗಿದ್ದಾರೆ
ಮಂಡ್ಯದಲ್ಲಿ ಎಂಎಲ್ಸಿ ಶ್ರೀಕಂಠೇಗೌಡ ಮಾತನಾಡುತ್ತ ಮದೇಗೌಡರ ಕೆಲಸಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿಕೊಂಡಿದ್ದಾರೆ. ಆರು ಬಾರಿ ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಭಾರತಿ ವಿದ್ಯಾಸಂಸ್ಥೆ ಲಕ್ಷಾಂತರ ವಿಧ್ಯಾರ್ಥಿ ಜೀವನಕ್ಕೆ ನಾಂದಿಯಾಗಿದೆ. ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆ ಮೂಲಕ ಮಂಡ್ಯಕ್ಕೆ ಕೊಡುಗೆ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದಾರೆ. ಕಾವೇರಿ ಹೋರಾಟದಲ್ಲಿ ಮಾದೇಗೌಡರ ಪಾತ್ರ ಪ್ರಮುಖ. ಹನುಮಂತನಗರ ಪ್ರವಾಸಿ ಸ್ಥಳವಲ್ಲದೇ ಧಾರ್ಮಿಕ ಕ್ಷೇತ್ರವೂ ಆಗಿದೆ. ಮಲ್ಲಿಗೆರೆಯಲ್ಲಿ ಗಾಂಧಿ ಗ್ರಾಮ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಇಂದು ಅವರು ಗಾಂಧಿ ಗ್ರಾಮ ಯೋಜನೆ ಪೂರ್ತಿಗೊಳಿಸಲಾಗದೆ ಹೋಗಿದ್ದಾರೆ. ಅದನ್ನು ಪೂರ್ತಿ ಮಾಡುವ ಹೊಣೆ ಜನಪ್ರತಿನಿಧಿಗಳದ್ದಾಗಿದೆ. ಅವರ ಅಗಲಿಕೆ ನೋವನ್ನ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದರು.
ಮಾಜಿ ಸಂಸದ ಮಾದೇಗೌಡರ ಪುತ್ರ ಮಧು ಮಾದೇಗೌಡ ಮಾತನಾಡುತ್ತ ತಂದೆಯ ಅಗಲಿಕೆಯ ನೋವನ್ನು ಹಂಚಿಕೊಂಡಿದ್ದಾರೆ. ನನ್ನ ತಂದೆ ಮಾದೇಗೌಡರ ಅಗಲಿಕೆ ಮಂಡ್ಯ ಜಿಲ್ಲೆ ಕರ್ನಾಟಕಕ್ಕೆ ತುಂಬಲಾಗದ ನಷ್ಟವಾಗಿದೆ. ನಿರಂತರವಾಗಿ ಹಲವು ಹೋರಾಟವನ್ನು ಮಾಡಿಕೊಂಡು ಬಂದವರು ರಾಜಕೀಯ ಜೊತೆಗೆ ಹೋರಾಟದಲ್ಲಿ ಸಕ್ರಿಯರಾಗಿದ್ದವರು. ಪಕ್ಷಾತೀತವಾಗಿ ಎಲ್ಲರ ಜೊತೆ ಗುರುತಿಸಿಕೊಂಡಿದ್ದರು. ಸರ್ಕಾರಿ ಗೌರವ ನೀಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳಾದ ಅಶ್ವಥನಾರಾಯಣ ಕೂಡ ಮಾತನಾಡಿದ್ದಾರೆ. 10:30 ವರೆಗೂ ಮಂಡ್ಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಮಂಡ್ಯದ ಗಾಂಧಿ ಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: G Madegowda Death: ಹಿರಿಯ ಹೋರಾಟಗಾರ ಜಿ ಮಾದೇಗೌಡ ನಿಧನಕ್ಕೆ ಗಣ್ಯರ ಸಂತಾಪ