G Madegowda Death: ಹಿರಿಯ ಹೋರಾಟಗಾರ ಜಿ ಮಾದೇಗೌಡ ನಿಧನಕ್ಕೆ ಗಣ್ಯರ ಸಂತಾಪ

G Madegowda Passes Away : ಜಿ ಮಾದೇಗೌಡರವರು ಚಿರನಿದ್ರೆಗೆ ಜಾರಿದ ಸುದ್ದಿ ಅತೀವ ದುಃಖ ತಂದಿದೆ. ರಾಜ್ಯಕ್ಕೆ ತಮ್ಮ ನಿಸ್ವಾರ್ಥ ಸೇವೆ ಮತ್ತು ಹೋರಾಟದ ಛಲ ಮುಂಬರುವ ಪೀಳಿಗೆಗಳಿಗೆ ಮಾದರಿಯಾಗಿ ಉಳಿಯಲಿದೆ. ತಮ್ಮ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ತಮ್ಮ ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ತಮ್ಮ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

G Madegowda Death: ಹಿರಿಯ ಹೋರಾಟಗಾರ ಜಿ ಮಾದೇಗೌಡ ನಿಧನಕ್ಕೆ ಗಣ್ಯರ ಸಂತಾಪ
ಜಿ.ಮಾದೇಗೌಡ
Follow us
TV9 Web
| Updated By: guruganesh bhat

Updated on: Jul 17, 2021 | 10:26 PM

ಮಂಡ್ಯ: ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರು, ರೈತ ಹೋರಾಟಗಾರರು, ಭಾರತಿ ವಿದ್ಯಾ ಸಂಸ್ಥೆಯ ಜನಕರು, ಮಾಜಿ ಸಚಿವರು ಮತ್ತು ಸಂಸದರೂ ಆಗಿದ್ದ ಜಿ.ಮಾದೇಗೌಡರ (G Madegowda) ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರು ಅಶ್ರುತರ್ಪಣ ಸುರಿಸಿದ್ದಾರೆ.

ಜಿ ಮಾದೇಗೌಡರವರು ಚಿರನಿದ್ರೆಗೆ ಜಾರಿದ ಸುದ್ದಿ ಅತೀವ ದುಃಖ ತಂದಿದೆ. ರಾಜ್ಯಕ್ಕೆ ತಮ್ಮ ನಿಸ್ವಾರ್ಥ ಸೇವೆ ಮತ್ತು ಹೋರಾಟದ ಛಲ ಮುಂಬರುವ ಪೀಳಿಗೆಗಳಿಗೆ ಮಾದರಿಯಾಗಿ ಉಳಿಯಲಿದೆ. ತಮ್ಮ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ತಮ್ಮ ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ತಮ್ಮ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಹಿರಿಯ ರೈತಪರ ಹೋರಾಟಗಾರರು, ಮಾಜಿ ಸಚಿವರು, ಮಾಜಿ ಸಂಸದರಾದ ಜಿ.ಮಾದೇಗೌಡರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ನಿಧನದಿಂದ ನಾಡು ಹಿರಿಯ ಹೋರಾಟಗಾರರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಅವರ ಕುಟುಂಬವರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ.

ನಾಡಿನ ರೈತ ಧ್ವನಿ ಜಿ.ಮಾದೇಗೌಡರ ನಿಧನಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ. ಕಾವೇರಿ ನದಿ ನೀರು ಮತ್ತು ಕನ್ನಡ ನಾಡಿನ ನೆಲ, ಜಲದ ವಿಚಾರದಲ್ಲಿ ರಾಜಿ ರಹಿತ ಹೋರಾಟ ನಡೆಸುತ್ತಿದ್ದ ರೈತ ಮತ್ತು ಶ್ರಮಿಕರ ಒಡನಾಡಿ ಜಿ.ಮಾದೇಗೌಡ ಅವರು ನನ್ನ ಅತ್ಯಂತ ಆತ್ಮೀಯರು. ಇವರ ನಿಧನ ನನಗೆ ಅಪಾರ ದುಃಖ ತಂದಿದೆ. ಜಿ. ಮಾದೇಗೌಡರು ತಮ್ಮ ಈ ವಯಸ್ಸಿನಲ್ಲಿ ನಿಧನರಾಗಿದ್ದು ಉಸಿರಿರುವವರೆಗೂ ಹೋರಾಟ ಮನೋಭಾವವನ್ನು ಬಿಟ್ಟಿರಲಿಲ್ಲ. ತಮ್ಮ ಬದುಕಿನ ಕೊನೆಯವರೆಗೂ ಕ್ರಿಯಾಶೀಲರಾಗಿದ್ದ ಮಾದೇಗೌಡರು ಜಿಲ್ಲೆಯ ರೈತರ ಹಿತಕ್ಕೆ ದಕ್ಕೆ ಬಂದಾಗೆಲ್ಲ ಪ್ರತಿಭಟನೆಯ ಧ್ವನಿಯಾಗಿದ್ದರು. ಅಗತ್ಯ ಬಿದ್ದಾಗಲೆಲ್ಲಾ ಸರ್ಕಾರಕ್ಕೆ ಸಲಹೆಗಳನ್ನೂ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮೈಷುಗರ್ ಕಾರ್ಖಾನೆಯ ಖಾಸಗೀಕರಣದ ಪ್ರಸ್ತಾಪದ ವಿರುದ್ಧ ನಿರಂತರವಾಗಿ ಹೋರಾಟಗಾರರ ಜೊತೆ ನಿಂತಿದ್ದರು ಮತ್ತು ಇಳಿ ವಯಸ್ಸಿನಲ್ಲಿಯೂ ಅನೇಕ ಪ್ರತಿಭಟನೆಗಳಲ್ಲಿ ಖುದ್ದು ಭಾಗವಹಿಸಿದ್ದರು. ಹಿಡಿದ ಕೆಲಸವನ್ನು ಸಾಧಿಸುವ ಹಟವಾದಿಯಾಗಿದ್ದ ಮಾದೇಗೌಡರು ಕೆ.ಎಂ.ದೊಡ್ಡಿಯಲ್ಲಿ ಭಾರತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ತಮ್ಮ ನೆಲೆಯಲ್ಲೇ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದ್ದರು. ಸದಾ ಜಿಲ್ಲೆಯ ರೈತರ ಧ್ವನಿಯಾಗಿದ್ದ ಮಾದೇಗೌಡರ ಸಾವು ಜಿಲ್ಲೆಯ ಜನಪರ ಹೋರಾಟಗಳಿಗೆ ಮತ್ತು ರಾಜಕಾರಣಕ್ಕೆ ಆದ ಬಹುದೊಡ್ಡ ನಷ್ಟ. ಇವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಲೇ ಜಿಲ್ಲೆಯ ರೈತ ಸಮುದಾಯಕ್ಕೆ, ಕುಟುಂಬವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ಮುತ್ಸದ್ಧಿ ರಾಜಕಾರಣಿ, ರೈತ ಹೋರಾಟಗಾರ G. ಮಾದೇಗೌಡರ ನಿಧನ ಸಂಗತಿ ತೀವ್ರ ನೋವುಂಟುಮಾಡಿದೆ. ಕಾವೇರಿ ರಕ್ಷಣೆ, ರೈತರ ಹಿತಕ್ಕಾಗಿ ಶ್ರಮಿಸಿದ್ದವರು ಮಾದೇಗೌಡರು. ಅವರ ನಿಧನದಿಂದ ಮಂಡ್ಯ ತನ್ನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ. ಇತ್ತೀಚೆಗಷ್ಟೇ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದಿದ್ದೆ. ಅವರು ಗುಣವಾಗುವ ವಿಶ್ವಾಸ ಹುಸಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿ.ಮಾದೇಗೌಡರು ನಿಧನದಿಂದ ಮಂಡ್ಯ ಜಿಲ್ಲೆಯ ಜನರಿಗೆ ಆಘಾತವಾಗಿದೆ. ರೈತಾಪಿ ವರ್ಗಕ್ಕೆ ತುಂಬಾಲಾಗದ ನಷ್ಟವಾಗಿದೆ. ರೈತರ ಸಮಸ್ಯೆಗಳು ಬಂದರೆ ರೈತ ಪರ ಹೋರಾಟ ಮಾಡುತ್ತಿದ್ದವರು. ಮುತ್ಸದ್ದಿ ಹಿರಿಯ ರಾಜಕಾರಣಿ, ಹೋರಾಟಗಾರ ಮಾದೇಗೌಡರನ್ನು ಮಂಡ್ಯ ಜಿಲ್ಲೆಯ ಜನರು ಕಳೆದು ಕೊಂಡಿದ್ದೇವೆ. ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: 

G Madegowda Death: ಮಾಜಿ ಸಂಸದ, ಹಿರಿಯ ರೈತ ಹೋರಾಟಗಾರ ಜಿ. ಮಾದೇಗೌಡ ವಿಧಿವಶ

(G Madegowda Death many leaders condolences)