ಅದು ಕೃಷಿ ಸಚಿವರ ಉಸ್ತುವಾರಿ ಜಿಲ್ಲೆ. ಆ ಜಿಲ್ಲೆಯ ರೈತರ ಗೋಳು ಕೇಳೋರೆ ಇಲ್ಲದಂತಾಗಿದೆ. ಮುಂಗಾರು ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಆದ್ರೆ, ಇಡೀ ದಿನ ಕಾದ್ರೂ ಒಂದು ಚೀಲ ರಸಗೊಬ್ಬರ (fertilizers) ಸಿಗ್ತಾಯಿಲ್ಲ. ರಸಗೊಬ್ಬರಕ್ಕಾಗಿ ಅಂಗಡಿ ಅಂಗಡಿ ಸುತ್ತಾಡಿದ್ರೂ ರೈತರಿಗೆ ಒಂದು ಚೀಲ ಡಿಎಪಿ, ಯುರಿಯಾ ಗೊಬ್ಬರ ಸಿಗ್ತಾಯಿಲ್ಲ. ಮುಂಗಾರು ಆರಂಭದಲ್ಲೇ ರಸಗೊಬ್ಬರಕ್ಕಾಗಿ ರೈತರ ಗೋಳಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಹಣ ವಸೂಲಿ ನಡೆದಿದೆ ಅಂತ ರೈತರು ಕಿಡಿಕಾರಿದ್ದಾರೆ. ಆದ್ರೆ, ಕೃಷಿ ಇಲಾಖೆ ಮಾತ್ರ ಗಪ್ ಚುಪ್ ಆಗಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ (Gadag district incharge and agriculture minister BC Patil).
ರೈತರು ಭೂಮಿ ಹದಗೊಳಿಸಿ ಬಿತ್ತನೆಗೆ ಸಜ್ಜಾಗಿದ್ದಾರೆ. ಆದ್ರೆ, ಬಿತ್ತನೆ ಮಾಡಬೇಕು ಅಂದ್ರೆ ರೈತರಿಗೆ ಒಂದು ಚೀಲ್ ಡಿಎಪಿ ಗೊಬ್ಬರ ಸಿಗ್ತಾಯಿಲ್ಲ. ಇಡೀ ದಿನ ಗೊಬ್ಬರದ ಅಂಗಡಿಗಳ ಮುಂದೆ ಠಿಕಾಣಿ ಹೂಡಿದ್ರೂ ಯಾರೂ ಡೋಂಟ್ ಕೇರ್ ಎನ್ನುತ್ತಿಲ್ಲ. ಹೌದು ರೈತರ ಈ ಗೋಳಿನ ದೃಶ್ಯಗಳು ಕಂಡಿದ್ದು ಗದಗ ಜಿಲ್ಲೆಯಲ್ಲಿ. ಗದಗ ಕೃಷಿ ಸಚಿವ ಬಿ ಸಿ ಪಾಟೀಲ್ ಅವ್ರ ಉಸ್ತುವಾರಿ ಜಿಲ್ಲೆ. ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ರೈತರು ಒಂದು ಚೀಲ ಗೊಬ್ಬರಕ್ಕಾಗಿ ಇಡೀ ದಿನ ಪರದಾಡಿದ್ರೂ ಸಿಗ್ತಿಲ್ಲ. (ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ)
ಗದಗ ನಗರದ ರಸಗೊಬ್ಬರ ಅಂಗಡಿಗಳ ಮುಂದೆ ನಿತ್ಯವೂ ವಿವಿಧ ಗ್ರಾಮಗಳ ನೂರಾರು ರೈತರು ರಸಗೊಬ್ಬರಕ್ಕಾಗಿ ಕ್ಯೂ ನಿಂತು ನಿಂತು ಸುಸ್ತಾಗ್ತಾಯಿದ್ದಾರೆ. ಮಾಲೀಕರೇ ಒಂದು ಚೀಲವಾದ್ರೂ ಡಿಎಪಿ ಗೊಬ್ಬರ ಕೊಡಿ ಅಂದ್ರೆ. ಮಾಲೀಕರಿಂದ ಬರೋ ಉತ್ತರ ಡಿಎಪಿ ಗೊಬ್ಬರ ಇಲ್ಲ. ಮೇಲಿನಿಂದಲೇ ಸ್ಟಾಕ್ ಇಲ್ಲ ಅಂತಿದ್ದಾರೆ. ಎಲ್ಲಿಂದ ಕೊಡೋಣ ಅನ್ನೋದು. ಡಿಎಪಿ ಮಾತ್ರವಲ್ಲ ಯೂರಿಯಾ ಗೊಬ್ಬರ ಅಭಾವ ಕೂಡ ಸಾಕಷ್ಠಿದೆ. ಹೀಗಾಗಿ ಗೊಬ್ಬರ ಇಲ್ಲದೇ ಬಿತ್ತನೆ ಮಾಡೋದು ಹೇಗೆ ಅನ್ನೋ ಚಿಂತೆಯಲ್ಲಿ ರೈತರು ಒದ್ದಾಡುತ್ತಿದ್ದಾರೆ.
ಆದ್ರೆ, ರೈತರ ಸಂಕಷ್ಟ ಕೇಳಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಳ್ತಾಯಿಲ್ಲ. ಉಸ್ತುವಾರಿ ಸಚಿವರೂ ಆದ ಕೃಷಿ ಸಚಿವ ಬಿ ಸಿ ಪಾಟೀಲ್ ರೂ ಮೂರು ತಿಂಗಳಿಂದ ಜಿಲ್ಲೆಯತ್ತ ಸುಳಿದಿಲ್ಲ. ಮುಂಗಾರು ಬಿತ್ತನೆಗೆ ಬೇಕಾಗುವ ಅಗತ್ಯ ರಸಗೊಬ್ಬರದ ಬಗ್ಗೆ ಉಸ್ತುವಾರಿ ಸಚಿವರಾಗಲೀ, ಜಿಲ್ಲೆಯ ಸಚಿವ ಸಿ ಸಿ ಪಾಟೀಲ್ ರಾಗಲೀ, ಶಾಸಕರಾಗಲೀ ಯಾರೂ ತಲೆಕೆಡಿಸಿಕೊಂಡಿಲ್ಲ. ಇದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿವೆ.
ಇನ್ನು ರಸಗೊಬ್ಬರ ಅಂಗಡಿ ಮಾಲೀಕರನ್ನು ಕೇಳಿದ್ರೆ ಒಂದು ವಾರದಿಂದ ಡಿಎಪಿ ಗೊಬ್ಬರದ ಕೊರತೆ ಇದೆ. ಕಂಪನಿಗಳಿಂದ ರಸಗೊಬ್ಬರವೇ ಬಂದಿಲ್ಲ. ಎಲ್ಲಿಂದ ರೈತರಿಗೆ ಕೊಡೋಣ ಅಂತಾರೆ. ಹೀಗಾಗಿ ಜಿಲ್ಲೆಯಲ್ಲಿ ರಸಗೊಬ್ಬರ ಅಭಾವದಿಂದ ರೈತರು ಕಂಗಾಲಾಗಿದ್ದಾರೆ. ಚೆನ್ನಾಗಿ ಮಳೆಯಾಗಿದೆ. ಭೂಮಿ ಹಸಿ ಇದೆ. ಆದ್ರೆ, ಬಿತ್ತನೆಗೆ ಗೊಬ್ಬರವಿಲ್ಲ. ವಿಳಂಬವಾದ್ರೆ ಎಲ್ಲಿ ಭೂಮಿ ತೇವಾಂಶ ಕಳೆದುಕೊಳ್ಳುತ್ತೆ ಅನ್ನೋ ಆತಂಕ ರೈತರನ್ನು ಕಾಡ್ತಾಯಿದೆ. ಯೂರಿಯಾ ಹಾಗೂ ಡಿಎಪಿ ಗೊಬ್ಬರ ಸಿಗದೆ ರೈತರು ಪರದಾಟ ನಡೆಸಿದ್ದಾರೆ.
ಇನ್ನು ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಠಿಸಿ ಹೆಚ್ಚಿನ ಬೆಲೆ ಮಾರಾಟ ಮಾಡ್ತಾಯಿದ್ದಾರೆ ಅನ್ನೋ ಆರೋಪ ಅನ್ನದಾತರು ಮಾಡಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆ ಗಮನಕ್ಕೆ ತಂದ್ರೂ ಅಧಿಕಾರಿಗಳು ಮೌನವಾಗಿದ್ದಾರೆ ಅಂತ ಕಿಡಿಕಾರಿದ್ದಾರೆ. ಇನ್ನೂ ಈ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಕೇಳಿದ್ರೆ, ಜೂನ್ ತಿಂಗಳಲ್ಲಿ 4404 ಮೆಟ್ರಿಕ್ ಯೂರಿಯಾ ಗೊಬ್ಬರದ ಬೇಡಿಕೆ ಇದೆ. ಜೂನ್ ತಿಂಗಳಲ್ಲಿ 2376 ಮೆಟ್ರಿಕ್ ಟನ್ ಡಿಎಪಿ ಗೊಬ್ಬರದ ಬೇಡಿಕೆ ಇದೆ. ಡಿಎಪಿ ಗೊಬ್ಬರದ ಸ್ವಲ್ಪ ಮಟ್ಟದ್ದು ಇದೆ ಹಂತ ಹಂತವಾಗಿ ಗೊಬ್ಬರ ಬರುತ್ತದೆ ಎನ್ನುತ್ತಿದ್ದಾರೆ
ರಸಗೊಬ್ಬರ ಮಳಿಗೆ ವ್ಯಾಪರಸ್ಥರು ಯೂರಿಯಾ ಹಾಗೂ ಡಿಎಪಿ ಗೊಬ್ಬರ ಇಲ್ಲಾ ಅಂತಾ ಹೇಳಿದ್ದಾರೆ. ರೈತರು ಯೂರಿಯಾ ಹಾಗೂ ಡಿಎಪಿ ಗೊಬ್ಬರ ಸಿಗ್ತಾಯಿಲ್ಲಾ ಅಂತಿದ್ದಾರೆ. ಆದ್ರೆ, ಅಧಿಕಾರಿಗಳು ಮಾತ್ರ ತಮ್ಮ ಭಂಡತನ ಮುಂದುವರಿಸಿದ್ದು, ಅಷ್ಟೇನೂ ಕೊರತೆ ಇಲ್ಲ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ಗದಗ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಹೇಳೋರೋ ಕೇಳೋರೋ ಇಲ್ಲದಂತಾಗಿದೆ. ಗಂಭೀರ ಸಮಸ್ಯೆ ಇದ್ರೂ ಅಷ್ಟೇನೂ ಇಲ್ಲ ಅನ್ನೋ ಮೂಲಕ ಅಧಿಕಾರಿಗಳು ತಮ್ಮ ವರಸೆ ಮುಂದುವರೆಸಿದ್ದಾರೆ. ಜಿಲ್ಲಾಉಸ್ತುವಾರಿಗಳೂ ಆದ ಕೃಷಿ ಸಚಿವ ಬಿ ಸಿ ಪಾಟೀಲ್ ಇನ್ನಾದ್ರೂ ಜಿಲ್ಲೆಗೆ ಭೇಟಿ ನೀಡಿ ರೈತರ ಸಮಸ್ಯೆಗೆ ಸ್ಪಂದಿಸ್ತಾರಾ ಅನ್ನೋದು ಕಾದು ನೋಡಬೇಕಿದೆ…