ಬೆಂಗಳೂರು: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ನಾಳೆ ಹೆದ್ದಾರಿಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ 12ರಿಂದ 3 ಗಂಟೆವರೆಗೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆದು ಧರಣಿ ನಡೆಸಲು ಚಿಂತನೆ ನಡೆದಿದೆ. ದೆಹಲಿಯನ್ನು ಹೊರತುಪಡಿಸಿ ಉಳಿದ ಕಡೆ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇನ್ನು ಈ ಧರಣಿಯನ್ನು ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗದಂತೆ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಪ್ರತಿಭಟನೆ ವೇಳೆ ಸಿಲುಕುವ ಸಾರ್ವಜನಿಕರಿಗೆ ಆಹಾರ ವ್ಯವಸ್ಥೆ, ಅಲ್ಲಿಯೇ ನೀರು, ಆಹಾರ ಪೂರೈಕೆಯನ್ನು ರೈತರು ಮಾಡಲಿದ್ದಾರೆ. ಜೊತೆಗೆ ಇಂಥ ಸಮಸ್ಯೆ ಸೃಷ್ಟಿಯಾಗಲು ಕೇಂದ್ರ ಸರ್ಕಾರವೇ ಕಾರಣ ಎಂಬುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಚಕ್ಕಾ ಜಾಮ್ ಹೋರಾಟಕ್ಕೆ ರಾಜ್ಯದಲ್ಲೂ ರೈತರು ಸಾಥ್ ನೀಡಲಿದ್ದಾರೆ. ಸಂಯುಕ್ತ ಹೋರಾಟ ಸಮಿತಿ ಹೆದ್ದಾರಿಗಳನ್ನು ಬಂದ್ ಮಾಡಿಸಲಿದೆ. ಮತ್ತೊಂದೆಡೆ ನಾಳಿನ ಪ್ರತಿಭಟನೆಗೆ ಬೆಂಬಲ ಸೂಚಿಸಲು ಈಗಾಗಲೇ ದೆಹಲಿಗೆ 500ಕ್ಕೂ ಹೆಚ್ಚು ರೈತರು ತೆರಳಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ದೆಹಲಿಯಲ್ಲಿ ಬೆಂಬಲ ವ್ಯಕ್ತವಾಗಲಿದೆ. ರಾಜ್ಯದಲ್ಲಿ ನಾಳೆ ಹಲವೆಡೆ ಹೆದ್ದಾರಿ ತಡೆದು ರೈತರ ಆಕ್ರೋಶ ಹೊರ ಹಾಕಲಿದ್ದಾರೆ. ಹೀಗಾಗಿ ನಾಳೆ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಾಸವಾಗಲಿದೆ.
ನಾಳೆ ಯಾವ ಯಾವ ಹೆದ್ದಾರಿ ತಡೆ
ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಾಳೆ ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ, ಬೆಂಗಳೂರು-ಮೈಸೂರು ರಸ್ತೆಯಲ್ಲಿ 2 ಕಡೆ ಹೆದ್ದಾರಿ ತಡೆಯಲಾಗುತ್ತೆ. ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಬಿಡದಿ, ಮಂಡ್ಯ, ರಾಯಚೂರಿನ ಅಸ್ಕಿಹಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆಯಲಾಗುತ್ತೆ. ಚಾಮರಸ ಮಾಲಿ ಪಾಟೀಲ್ ನೇತೃತ್ವದಲ್ಲಿ ನಾಳೆ ರಾಜ್ಯದ ಹಲವೆಡೆ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಿಗೆ ತಡೆಯಲಾಗುತ್ತೆ.
ಬೆಂಗಳೂರು-ಗೋವಾ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಪುಣೆ, ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಮೈಸೂರು, ಬೆಂಗಳೂರು-ಚಾಮರಾಜನಗರ, ಬೆಂಗಳೂರು-ಮಾಗಡಿ ರೋಡ್, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಗಳಿಗೆ ತಡೆ ಹಿಡಿದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ.
ಫೆಬ್ರವರಿ 6ರಂದು 3 ಗಂಟೆ ಕಾಲ ದೇಶಾದ್ಯಂತ ರಸ್ತೆ ತಡೆಗೆ ಕರೆ ಕೊಟ್ಟ ಯೋಗೇಂದ್ರ ಯಾದವ್
Published On - 9:10 am, Fri, 5 February 21