ಮನೆ ಬಳಿ ಸಾಯಲು ಅವಕಾಶ ಕೊಡಿ ಎಂದು ಬೇಡಿಕೊಂಡ ಅಪ್ಪ; ಮಂಡ್ಯದಲ್ಲಿ ನಡೆದ ಮನಕಲಕುವ ಘಟನೆ
ಲಕ್ವಾಗೆ ತುತ್ತಾಗಿ ಎದ್ದು ಓಡಾಡಲಾಗದಂತಹ ಸ್ಥಿತಿಯಲ್ಲಿರುವ 55 ವರ್ಷ ವಯಸ್ಸಿನ ಶಿವರಾಮುವಿಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಗ್ರಾಮದಲ್ಲಿ ಮನೆಯೂ ಇದೆ. ಹೀಗಿರುವಾಗಲೇ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಶಿವರಾಮು ಅಲ್ಲಿ ಲಕ್ವಾಗೆ ತುತ್ತಾಗಿ ಆಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದರು.

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕಾಡು ಕೊತ್ತನಹಳ್ಳಿ ಗ್ರಾಮದಲ್ಲೊಂದು ಮನಕುಲಕುವ ಘಟನೆ ನಡೆದಿದೆ. ತನ್ನ ಮನೆ ಬಳಿ ಸಾಯಲು ಅವಕಾಶ ಕೊಡಿ ಎಂದು ತನ್ನ ಮಕ್ಕಳಲ್ಲಿ ತಂದೆ ಕೇಳಿಕೊಂಡಿದ್ದಾರೆ. ಮಕ್ಕಳಲ್ಲಿ ಮನೆ ಬಳಿ ಸಾಯಲು ಅವಕಾಶ ನೀಡಿ ಎಂದು ಬೇಡಿಕೊಂಡ ತಂದೆ ಹೆಸರು ಶಿವರಾಮು. ಶಿವರಾಮುಗೆ 55 ವರ್ಷ. ಇವರಿಗೆ ಒಬ್ಬ ಮಗ, ಒಬ್ಬ ಮಗಳು ಹಾಗೂ ಪತ್ನಿ ಇದ್ದಾರೆ. ಹೀಗಿದ್ದರೂ ಎಲ್ಲರನ್ನೂ ಬಿಟ್ಟು ತಾನು ಮಾಡಿಕೊಂಡಿದ್ದ ಸಾಲ ತೀರಿಸುವ ಉದ್ದೇಶದಿಂದ ಗ್ರಾಮದಲ್ಲಿದ್ದ 5 ಎಕರೆ ಜಮೀನನ್ನ ಮಾರಿ ಊರಿನಲ್ಲೇ ಹೆಂಡತಿ ಮಕ್ಕಳನ್ನ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದರು. ಹೀಗಿರುವಾಗಲೇ ಆತ ಕಳೆದ 1 ವರ್ಷದಿಂದ ಪಾರ್ಶ್ವವಾಯುಗೆ ತುತ್ತಾಗಿದ್ದು, ನಡೆದಾಡಲು ಆಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಆತ ಹೇಗೋ ಕಳೆದ ನಾಲ್ಕು ದಿನಗಳ ಹಿಂದೆ ಊರಿಗೆ ಬಂದಿದ್ದು, ತನ್ನ ಮನೆಯ ಬಳಿ ಸಾಯಲು ಅವಕಾಶ ಮಾಡಿಕೊಡಿ ಎಂದು ಹೆತ್ತ ಮಕ್ಕಳನ್ನ ಕೇಳಿಕೊಳ್ಳುತ್ತಿದ್ದಾರೆ. ಆದರೆ ಇದ್ದಾಗಲೇ ನಮ್ಮನ್ನ ಸಾಯಿಸಿ ಬದುಕಿದ್ದ ನೀನು ಈಗ ಎಷ್ಟು ಗೋಗರೆದರೂ ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಮಕ್ಕಳು ಹೇಳುತ್ತಿದ್ದಾರೆ.
ಕೊತ್ತನಹಳ್ಳಿ ಗ್ರಾಮದಲ್ಲೇ ಈ ರೀತಿಯ ಮನಕಲಕುವ ಘಟನೆ ನಡೆದಿದ್ದು, ಗ್ರಾಮದ ಶಿವರಾಮು ಎಂಬುವವರು ತನ್ನ ಮನೆಯ ಬಳಿ ಕೊನೆಯ ದಿನಗಳನ್ನ ಕಳೆಯಲು ಅವಕಾಶ ನೀಡುವುಂತೆ ತನ್ನ ಮಕ್ಕಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕ್ಯಾರೆ ಎನ್ನದ ಮಕ್ಕಳು ಅಪ್ಪ ಎಂಬುದನ್ನೂ ನೋಡದೆ ಖಾಯಿಲೆಗೆ ತುತ್ತಾಗಿರುವ ಮನುಷ್ಯನನ್ನ ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ಇದನ್ನ ನೋಡಲಾಗದ ಗ್ರಾಮಸ್ಥರು ಆ ವ್ಯಕ್ತಿಗೆ ಗ್ರಾಮದ ಒಬ್ಬರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ.
ವಾಪಸ್ ಬಂದಿದ್ದೇಕೆ? ಲಕ್ವಾಗೆ ತುತ್ತಾಗಿ ಎದ್ದು ಓಡಾಡಲಾಗದಂತಹ ಸ್ಥಿತಿಯಲ್ಲಿರುವ 55 ವರ್ಷ ವಯಸ್ಸಿನ ಶಿವರಾಮುವಿಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಗ್ರಾಮದಲ್ಲಿ ಮನೆಯೂ ಇದೆ. ಹೀಗಿರುವಾಗಲೇ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಶಿವರಾಮು ಅಲ್ಲಿ ಲಕ್ವಾಗೆ ತುತ್ತಾಗಿ ಆಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದರು. ಆದರೆ ಅಲ್ಲಿ ಕಳೆದ ಹಲವು ತಿಂಗಳುಗಳಿಂದ ಪ್ರತಿ ತಿಂಗಳಿಗೆ 10 ಸಾವಿರ ರೂ. ಹಣ ಕಟ್ಟಲಾಗದ್ದರಿಂದ ಆಶ್ರಯದವರು ಕಳೆದ ನಾಲ್ಕು ದಿನಗಳ ಹಿಂದೆ ಕೊತ್ತನಹಳ್ಳಿ ಗ್ರಾಮಕ್ಕೆ ಕರೆತಂದು ಬಿಟ್ಟು ಹೋಗಿದ್ದಾರೆ. ಇನ್ನೇನು ಮಕ್ಕಳು ಮಡದಿ ಎಲ್ಲರೂ ಇದ್ದಾರೆ. ತನ್ನ ಮನೆಯಲ್ಲಿ ಸಾಯಬಹುದು ಎಂದುಕೊಂಡಿದ್ದ ಶಿವರಾಮುಗೆ ನಿರಾಶೆ ಕಾದಿತ್ತು. ಯಾಕೆಂದರೆ ಅಪ್ಪ ಎಂಬುದನ್ನೂ ಕಾಣದ ಮಕ್ಕಳು ಆತನನ್ನ ಮನೆಗೆ ಸೇರಿಸಿಕೊಳ್ಳದೆ ಹೊರಗೆ ಕಳುಹಿಸಿದ್ದಾರೆ. ಈ ವೇಳೆ ಗ್ರಾಮದ ಕೆಲವರು ಸೇರಿಕೊಂಡು ತಮ್ಮದೇ ಮನೆಯ ಜಗುಲಿಯ ಮೇಲೆ ಆಶ್ರಯ ನೀಡಿದ್ದಾರೆ. ತಾನು ಆಗ ತಪ್ಪು ಮಾಡಿದ್ದೀನಿ ಈಗ ತನ್ನ ಬಳಿ ಏನೂ ಇಲ್ಲ. ಮನೆಯಲ್ಲಿ ನಾನು ಕೊನೆಯ ದಿನಗಳನ್ನ ಕಳೆಯಲು ಅವಕಾಶ ನೀಡಿ ಎಂದು ಮಕ್ಕಳಲ್ಲಿ ಮನವಿ ಮಾಡುತ್ತಿದ್ದಾರೆ.
ಮಕ್ಕಳ ಕೋಪಕ್ಕೆ ಕಾರಣ? ಹೆತ್ತ ಅಪ್ಪ ಎಂಬುದನ್ನೂ ನೋಡದೆ ಮನೆಗೆ ಸೇರಿಸಿಕೊಳ್ಳದ ಮಕ್ಕಳಿಗೆ ಅಪ್ಪನ ಕಂಡರೆ ಯಾಕಿಷ್ಟು ದ್ವೇಷ ಎಂಬುದನ್ನ ಹುಡುಕುತ್ತಾ ಹೊರಟರೆ ಅಲ್ಲಿ ದೊಡ್ಡ ಕಥೆಯೇ ತೆರೆದುಕೊಳ್ಳುತ್ತಿದೆ. ಯಾಕೆಂದರೆ ಶಿವರಾಮು ಆಗಲೇ 5 ಎಕರೆಗೂ ಹೆಚ್ಚಿನ ಜಮೀನು ಹೊಂದಿದ್ದರು. ಪತ್ನಿ ಪ್ರಭಾವತಿ, ಮಗ ಅಕ್ಷಯ್, ಮಗಳು ಅಮೃತರ ಜೊತೆ ನೆಮ್ಮದಿಯಾಗಿ ಬದುಕಬಹುದಿತ್ತು. ಆದರೆ ಕೈ ತುಂಬಾ ಸಾಲ ಮಾಡಿಕೊಂಡು ಹದಿನೈದು ವರ್ಷಗಳ ಹಿಂದೆಯೇ ಜಮೀನನ್ನ ಮಾರಾಟ ಮಾಡಿ ಹೆಂಡತಿ ಮಕ್ಕಳು ಇರಲು ಮನೆಯನ್ನೂ ಬಿಡದೆ ಎಲ್ಲವನ್ನೂ ಗುತ್ತಿಗೆ ನೀಡಿ ಸಾಕಷ್ಟು ಹಣ ಕಳೆದು ಬೆಂಗಳೂರು ಸೇರಿಕೊಂಡರು. ಅಲ್ಲಿ ಓಡಾಡಿಕೊಂಡು ತನ್ನ ಪಾಡಿಗೆ ತಾನು ಇದ್ದುಬಿಟ್ಟರು. ಇತ್ತ ಊರಿನಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ ನಾವು ಈ ಮನೆಯನ್ನ ಮತ್ತೆ ನಮ್ಮದಾಗಿಸಿಕೊಳ್ಳಲು ಎಷ್ಟು ಕಷ್ಟಪಟ್ಟಿದ್ದೇವೆ ಎನ್ನುವುದು ನಮಗೆ ಮಾತ್ರ ಗೊತ್ತು. ಮಕ್ಕಳನ್ನ ಜವಾಬ್ದಾರಿಯಿಂದ ಬೆಳೆಸಬೇಕಾದ ಅಪ್ಪನೇ ಇದ್ದ ಆಸ್ತಿ ಎಲ್ಲವನ್ನೂ ಕಳೆದು ಈಗ ನಡೆದಾಡಲು ಆಗದಂತಹ ಸ್ಥಿತಿಯಲ್ಲಿ ಬಂದು ಆಶ್ರಯ ಕೊಡಿ ಎಂದರೆ ಹೇಗೆ ಸಾಧ್ಯವಾಗಲಿದೆ. ಇಷ್ಟು ವರ್ಷ ನಾವು ಅಪ್ಪ ಇಲ್ಲ ಎಂದೇ ಬದುಕಿದ್ದೇವೆ. ಮುಂದೆಯೇ ಹಾಗೆಯೇ ಬದುಕುತ್ತೇವೆ ಎಂದು ಶಿವರಾಮು ಮಗಳು ಅಮೃತ ಹೇಳಿದ್ದಾರೆ.
ಇದನ್ನೂ ಒದಿ
ರಾಜಸ್ಥಾನ: ಧಾನ್ಯ ಸಂಗ್ರಹಿಸುವ ಕಂಟೇನರ್ನೊಳಗೆ ಸಿಲುಕಿ 5 ಮಕ್ಕಳು ಸಾವು
Reliance- Future deal: ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದಿಂದ ಫ್ಯೂಚರ್ ರೀಟೇಲ್ಗೆ ನಿರಾಳ
Published On - 2:14 pm, Mon, 22 March 21