ಬೆಂಗಳೂರು: ಹಿತೇಶಾ ಚಂದ್ರಾಣಿ ಎಂಬಾಕೆಯ ಮೇಲೆ ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಕಾಮರಾಜ್ ಹಲ್ಲೆಗೈದ ಆರೋಪ ವಿಚಾರಕ್ಕೆ ಸಂಬಂಧಿಸಿ, ಯುವತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಕಾಮರಾಜ್ ದೂರಿನ ಮೇರೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಡೆಲಿವರಿ ಬಾಯ್ ಕಾಮರಾಜ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಈ ಮೊದಲು ಯುವತಿ ಹಿತೇಶಾ ಚಂದ್ರಾಣಿ ದೂರು ಸಲ್ಲಿಸಿದ್ದಳು. ಇದೀಗ ಫುಡ್ ಡೆಲಿವರಿ ಬಾಯ್ ಕಾಮರಾಜ್ ಐಪಿಸಿ ಸೆಕ್ಷನ್ 355 (ಹಲ್ಲೆ), 504 (ನಿಂದನೆ) ಮತ್ತು 506 (ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿದ್ದಾನೆ. ಯುವತಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕಾಮರಾಜು.. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೇಂದ್ರಬಿಂದುವಾಗಿದ್ದಾರೆ. ಬೆಂಗಳೂರಿನ ಮಹಿಳೆ ಹಿತೇಶಾ ಚಂದ್ರಾಣಿ ಇವರ ವಿರುದ್ಧ ಮಾಡಿದ ಆರೋಪದ ಪರಿಣಾಮ ಕಾಮರಾಜುವನ್ನು ಜೊಮ್ಯಾಟೊ ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಇನ್ನು ಜೈಲಿಗೂ ಹೋಗಿಬಂದಿದ್ದಾರೆ. ಮಹಿಳೆಯೊಬ್ಬಳ ಕಣ್ಣೀರು..ಗಾಯ ಮತ್ತು ಆರೋಪದಿಂದ ಕಾಮರಾಜು ನಿಜಕ್ಕೂ ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂಬ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ. ಮೊದಲು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಹಿತೇಶಾ, ಕಾಮರಾಜು ಮೇಲೆ ಆರೋಪ ಮಾಡಿದ್ದರು. ನಾನು ಮನೆಯಲ್ಲಿ ಒಬ್ಬಳೇ ಇದ್ದೆ. ಜೊಮ್ಯಾಟೊದಿಂದ ಫುಡ್ ಆರ್ಡರ್ ಮಾಡಿದ್ದೆ. ಈತ ತಡವಾಗಿ ಬಂದಿದ್ದಲ್ಲದೆ, ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ ಎಂದು ಹೇಳಿದ್ದರು.
ಅದಾದ ಬಳಿಕ ಕಾಮರಾಜು ಅರೆಸ್ಟ್ ಆದರು. ಜಾಮೀನು ಪಡೆದು ಹೊರಬಂದ ಬಳಿಕ ವಿಡಿಯೋವೊಂದನ್ನು ಮಾಡಿ, ನನ್ನದೇನೂ ತಪ್ಪಿಲ್ಲ. ಟ್ರಾಫಿಕ್ ಇದ್ದರೂ ಸಾದ್ಯವಾದಷ್ಟು ಬೇಗ ಹೋಗಿ ಮಹಿಳೆಗೆ ಊಟ ತಲುಪಿಸಿದೆ. ಅವರು ನನ್ನ ಮೇಲೆ ರೇಗಿದರು. ಹೊಡೆಯಲು ಬಂದಾಗ ತಪ್ಪಿಸಿಕೊಂಡೆ.. ಈ ವೇಳೆ ಅವರ ಕೈಲಿದ್ದ ಉಂಗುರವೇ ತಾಗಿ ಮೂಗಿನ ಮೇಲೆ ಗಾಯವಾಗಿದೆ. ನನಗೆ ಈ ಕೇಸ್ನಿಂದ ಹೊರಬರಬೇಕು, ದಯವಿಟ್ಟು ಸಹಾಯ ಮಾಡಿ ಎಂದು ಕಣ್ಣೀರು ಹಾಕುತ್ತ ಹೇಳಿಕೊಂಡಿದ್ದರು. ಇನ್ನು ಕಾಮರಾಜು ಅವರನ್ನು ಅಮಾನತು ಮಾಡಿದ್ದರೂ ಅವರ ಕಾನೂನು ಹೋರಾಟದ ವೆಚ್ಚವನ್ನು ನೋಡಿಕೊಳ್ಳುತ್ತೇವೆ ಎಂದು ಜೊಮ್ಯಾಟೊ ಹೇಳಿಕೊಂಡಿದೆ.
ಇಷ್ಟೆಲ್ಲ ಆದಮೇಲೆ ನೆಟ್ಟಿಗರು ಕಾಮರಾಜುಗೆ ಬೆಂಬಲ ನೀಡುತ್ತಿದ್ದಾರೆ. ಮಹಿಳೆ ಎಂಬ ಕಾರಣಕ್ಕೆ ಅವರ ಕಣ್ಣೀರು ಮಾತ್ರ ನೋಡಬೇಡಿ. ಇಲ್ಲಿ ಸತ್ಯವೇನು ಎಂಬುದನ್ನು ತನಿಖೆ ಮಾಡಿ. ಫುಡ್ ಡೆಲಿವರಿ ಬಾಯ್ ಕಾಮರಾಜು ಮುಗ್ಧರಂತೆ ಕಾಣುತ್ತಾರೆ. ಅವರನ್ನು ಕೆಲಸದಿಂದ ತೆಗೆದು ಹೊಟ್ಟೆಮೇಲೆ ಹೊಡೆಯಬೇಡಿ ಎಂದು ಅನೇಕರು ತಮ್ಮ ಸೋಷಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಹಾಕುವ ಮೂಲಕ ಕಾಮರಾಜು ಪರ ನಿಂತಿದ್ದಾರೆ. ನಿನ್ನೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಕಾಮರಾಜು ಪರ ವಹಿಸಿದ್ದರು. ಆದಷ್ಟು ಬೇಗ ಘಟನೆಯ ಸತ್ಯ ಹೊರಬರಲಿ. ಮಹಿಳೆ ಮಾಡಿದ ಆರೋಪ ಸುಳ್ಳು ಎಂದಾದರೆ ಆಕೆಯೂ ಶಿಕ್ಷೆಯನ್ನು ಅನುಭವಿಸಲೇಬೇಕು. ಈ ವಿಚಾರದಲ್ಲಿ ನಾನು ಏನೇ ಸಹಾಯ ಮಾಡಲೂ ಸಿದ್ಧ ಎಂದಿದ್ದರು.
Published On - 10:13 pm, Mon, 15 March 21