ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಮತ್ತೆ ತೀವ್ರ ವಾಯುಭಾರ ಕುಸಿತವಾಗಿ ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಕ್ಯಾರ್ ಚಂಡಮಾರುತ ಅಪ್ಪಳಿಸಿತ್ತು. ಒಂದೇ ಸಮನೆ ಸುರಿದ ಮಳೆಗೆ ಜನ ಹೈರಾಣಗೊಂಡಿದ್ದರು. ಉತ್ತರ ಭಾಗಕ್ಕೆ ಚಲಿಸುವ ಚಂಡಮಾರುತ ಕರ್ನಾಟಕದ ಕರಾವಳಿ, ಮಲೆನಾಡು ಭಾಗದತ್ತ ಚಲಿಸಿ ಭಾರೀ ಮಳೆಯಾಗಿತ್ತು.
ಶಿಕ್ಷಕರು ಪಾಠ ಮಾಡುತ್ತಿದ್ದ ವೇಳೆ ಹಾರಿಹೋದ ಹಂಚುಗಳು:
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಜೋರಾಗಿತ್ತು. ಮೂಡಿಗೆರೆ ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆ ಶುರುವಾಗಿ ಕೊಟ್ಟಿಗೆಹಾರ, ದೇವರಮನೆ, ಗುತ್ತಿ, ಚಾರ್ಮಾಡಿ ಘಾಟ್ ಸೇರಿದಂತೆ ಹಲವೆಡೆ ಗಾಳಿ ಮಳೆ ಜೋರಾಗಿದೆ. ಬಿರುಗಾಳಿ ಮಳೆಯ ಹೊಡೆತಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಕೊಟ್ಟಿಗೆಹಾರದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಪ್ರೌಢಶಾಲೆಯೊಂದರ ಹೆಂಚುಗಳು ಹಾರಿಹೋದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.
ಕರಾವಳಿ ಜಿಲ್ಲೆಗಳಿಗೆ ‘ಕ್ಯಾರ್’ ಬಳಿಕ ‘ಮಹಾ’ ಭೀತಿ!
ಕರಾವಳಿ ಜಿಲ್ಲೆಗಳಿಗೆ ‘ಕ್ಯಾರ್’ ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ‘ಮಹಾ’ ಚಂಡಮಾರುತ ಅಪ್ಪಳಿಸಿದೆ. ಇದರಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ರಕ್ಕಸ ಅಲೆಗಳು ಕಡಲಲ್ಲಿ ಆರ್ಭಟಿ ಕರಾವಳಿ ಭಾಗದ ಜನರು ಹಾಗೂ ಪ್ರವಾಸಿಗರಲ್ಲಿ ‘ಮಹಾ’ ಭಯ ಶುರುಲಾಗಿತ್ತು.
ಕಡಲ ನಿವಾಸಿಗಳು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚಿಸಿತ್ತು. ಅಷ್ಟೇ ಅಲ್ಲ ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಕೆ ಕೂಡ ಕೊಟ್ಟಿದ್ದರು. ಯಾಕಂದ್ರೆ ಇದು ಕ್ಯಾರ್ ಚಂಡಮಾರುತಕ್ಕಿಂತ ಭಯಂಕರವಾಗಿ ಸುಮಾರು 20 ಕಿ.ಮೀ ವೇಗದಲ್ಲಿ ಗಾಳಿ ಬೀಸೋ ಸೈಕ್ಲೋನ್ ಆಗಿದೆ. ಹೀಗಾಗಿ ಮೀನುಗಾರರು ನವೆಂಬರ್ 4ರ ವರೆಗೆ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ‘ಮಹಾ’ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿಯಲ್ಲಿ ವ್ಯಾಪಕವಾಗಿ ಮಳೆಯಾಗಿತ್ತು.
Published On - 10:54 am, Tue, 31 December 19