ಬೆಂಗಳೂರು: ಯಶವಂತಪುರ ಮೇಲ್ಸೇತುವೆ ಮೇಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಗಾವಲು ವಾಹನ ಹಿಂದೆ ತೆರಳುತ್ತಿದ್ದ ಸರ್ಕಾರಿ ಕಾರು ಅಪಘಾತವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಬಳಸುತ್ತಿದ್ದ ಕಾರು ಕ್ಯಾಂಟರ್ಗೆ ಡಿಕ್ಕಿ ಹೊಡೆದ ಬಳಿಕ ಆಟೋಗೆ ಡಿಕ್ಕಿಯೊಡೆದಿದೆ. ಸಿಎಂ ಬೆಂಗಾವಲು ವಾಹನಗಳ ಜೊತೆಯೇ ಇವರ ಕಾರು ಸಾಗುತ್ತಿತ್ತು. ಘಟನೆ ವೇಳೆ ಕಾರ್ಯದರ್ಶಿ ಸೆಲ್ವಕುಮಾರ್ ಕಾರಿನಲ್ಲಿರಲಿಲ್ಲ.
ಕೆಎ 01 ಜಿ 6661 ನೋಂದಣಿಯ ಸರ್ಕಾರಿ ವಾಹನ ಅಪಘಾತವಾಗಿದೆ. ಮೊದಲಿಗೆ ಯಶವಂತಪುರ ಫ್ಲೈಓವರ್ ಮೇಲೆ ಸರ್ಕಾರಿ ವಾಹನ ಲಾರಿಗೆ ಡಿಕ್ಕಿ ಹೊಡೆದಿದೆ. ನಂತರ ಡಿವೈಡರ್ ಕ್ರಾಸ್ ಮಾಡಿ ಮತ್ತೊಂದೆಡೆಗೆ ಚಲಿಸಿ ಆಟೋಗೆ ಡಿಕ್ಕಿಹೊಡೆದಿದೆ. ಅಪಘಾತದಲ್ಲಿ ಆಟೋ ಚಾಲಕ ವಿನಯ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.