ರಾಮನಗರ: ಕನಕಪುರದ ಕಪಾಲ ಬೆಟ್ಟದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿವಾದಕ್ಕೆ ಸಂಬಂಧಿಸಿ ಸರ್ಕಾರಕ್ಕೆ ವರದಿ ನೀಡುವ ಮುನ್ನವೇ ತಹಶೀಲ್ದಾರ್ ಎತ್ತಂಗಡಿಯಾಗಿದ್ದಾರೆ. ಕನಕಪುರ ತಹಶೀಲ್ದಾರ್ ಆನಂದಯ್ಯರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಆನಂದಯ್ಯ ಸ್ಥಾನಕ್ಕೆ ಚಾಮರಾಜನಗರ ಜಿಲ್ಲೆ ಯಳಂದೂರು ತಹಶೀಲ್ದಾರ್ ವರ್ಷಾರನ್ನು ಕನಕಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಯೇಸು ಪ್ರತಿಮೆ ವಿವಾದ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಕಂದಾಯ ಸಚಿವ ಆರ್.ಅಶೋಕ್ ಸೂಚಿಸಿದ್ದರು.
ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸೂಚನೆ ಮೇರೆಗೆ ಡಿಸೆಂಬರ್ 28ರಂದು ಕಪಾಲ ಬೆಟ್ಟಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಎಸಿ ದಾಕ್ಷಾಯಿಣಿ ಜೊತೆ ತಹಶೀಲ್ದಾರ್ ಆನಂದಯ್ಯ ಸೇರಿದಂತೆ ಅಧಿಕಾರಿಗಳ ತಂಡ ಕಪಾಲ ಬೆಟ್ಟಕ್ಕೆ ಭೇಟಿ ನೀಡಿತ್ತು. ಪ್ರಕರಣದ ವರದಿ ಸಲ್ಲಿಕೆ ಜವಾಬ್ದಾರಿ ತಹಶೀಲ್ದಾರ್ ಆನಂದಯ್ಯ ಮೇಲಿತ್ತು ಎನ್ನಲಾಗಿದೆ. ಇದೀಗ ರಾಜ್ಯ ಸರ್ಕಾರ ಆನಂದಯ್ಯರನ್ನ ವರ್ಗಾವಣೆ ಮಾಡಿ ಆದೇಶ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.