ಹೂವು ಬೆಳೆಗಾರರಿಗೆ ಆಷಾಢ ಸಂಕಷ್ಟ; ವ್ಯಾಪಾರವಿಲ್ಲದೆ ಚಿಕ್ಕಬಳ್ಳಾಪುರ ರೈತರು ಕಂಗಾಲು

| Updated By: preethi shettigar

Updated on: Jul 14, 2021 | 11:49 AM

ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದಿದ್ದ ಹೂಗಳನ್ನು ಮಾರುಕಟ್ಟೆಗೆ ತಂದರೆ, ಮಾರುಕಟ್ಟೆಯಲ್ಲಿ ಹೂಗಳನ್ನು ಕೇಳುವವರು ಇಲ್ಲ. ಇದರಿಂದ ಕೆಜಿ ಮೇರಾಬುಲ್ ರೋಜ್ 10 ರೂಪಾಯಿಗೆ ಬಿಕಾರಿಯಾಗುತ್ತಿದೆ. ಇನ್ನೂ ಸೇವಂತಿ ಹೂ ಕೆಜಿಗೆ 30 ರೂಪಾಯಿ, ಚೆಂಡು ಹೂ ಕೆಜಿಗೆ 2 ರೂಪಾಯಿ, ಹೀಗೆ ಯಾವುದೇ ಹೂವಿಗೂ ಬೆಲೆಯಿಲ್ಲ.

ಹೂವು ಬೆಳೆಗಾರರಿಗೆ ಆಷಾಢ ಸಂಕಷ್ಟ; ವ್ಯಾಪಾರವಿಲ್ಲದೆ ಚಿಕ್ಕಬಳ್ಳಾಪುರ ರೈತರು ಕಂಗಾಲು
ಸೇವಂತಿ ಹೂವು
Follow us on

ಚಿಕ್ಕಬಳ್ಳಾಪುರ: ಕೊರೊನಾ ಎರಡನೇ ಅಲೆಯ ಲಾಕ್​ಡೌನ್​ ಮುಕ್ತಾಯವಾದ ನಂತರದಲ್ಲಿ ವ್ಯಾಪಾರ-ವ್ಯವಹಾರಗಳು ಮತ್ತೆ ಪ್ರಾರಂಭವಾಗಿದೆ. ಆದರೆ ರೈತರ(Farmers) ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಲಾಕ್​ಡೌನ್​ ಮುಗಿಯಿತು ಎನ್ನುವ ಹೊತ್ತಿಗೆ, ಮಳೆರಾಯನ ಆರ್ಭಟ ಶುರುವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗಲೇ ಹೂವು(Flower) ಬೆಳೆಗಾರರು ಮತ್ತೊಂದು ಆತಂಕಕ್ಕೆ ಸಿಲುಕಿದ್ದಾರೆ. ಅದುವೇ ಆಷಾಢ. ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ರೈತರು, ತರೇವಾರಿ ಹೂಗಳನ್ನೇ ಬೆಳೆದು ಅದರಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಆಷಾಢ ಮಾಸ ಬಂದಿದ್ದು, ಮತ್ತೆ ರೈತರು ಬೆಳೆದ ಹೂಗಳಿಗೆ ಬೆಲೆಯಿಲ್ಲದಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತರಕಾರಿ ನಂತರ ಅತಿ ಹೆಚ್ಚಾಗಿ ಸೇವಂತಿ, ಮೇರಾಬುಲ್, ಗ್ಲಾಡಿಯೋಲಸ್, ಮಲ್ಲಿಗೆ, ಸುಗಂಧರಾಜ, ಕಾಕಡ, ಕನಕಾಂಬರಾ ಹೂಗಳು ಸೇರಿದಂತೆ ತರೇವಾರಿ ಹೂಗಳನ್ನು ಬೆಳೆಯುತ್ತಾರೆ. ಅಲ್ಲದೆ ಚಿಕ್ಕಬಳ್ಳಾಪುರದಿಂದ ಹೂಗಳು ರಾಜ್ಯ, ದೇಶ, ವಿದೇಶಗಳಿಗೆ ರಪ್ತು ಆಗುತ್ತಿತ್ತು. ಸದಾ ಹೂಗಳಿಗೆ ಒಳ್ಳೆ ಬೆಲೆಯಿದ್ದ ಕಾರಣ, ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ರೈತರು, ಹೂಗಳ ಬೆಳೆಯನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಕೊರೊನಾ ಸೋಂಕು ಪ್ರತ್ಯೇಕ್ಷವಾದ ಬಳಿಕ ಒಂದಿಲ್ಲ ಒಂದು ಸಮಸ್ಯೆ ರೈತರನ್ನು ಕಾಡುತ್ತಿದೆ.

ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದಿದ್ದ ಹೂಗಳನ್ನು ಮಾರುಕಟ್ಟೆಗೆ ತಂದರೆ, ಮಾರುಕಟ್ಟೆಯಲ್ಲಿ ಹೂಗಳನ್ನು ಕೇಳುವವರು ಇಲ್ಲ. ಇದರಿಂದ ಕೆಜಿ ಮೇರಾಬುಲ್ ರೋಜ್ 10 ರೂಪಾಯಿಗೆ ಬಿಕಾರಿಯಾಗುತ್ತಿದೆ. ಇನ್ನೂ ಸೇವಂತಿ ಹೂ ಕೆಜಿಗೆ 30 ರೂಪಾಯಿ, ಚೆಂಡು ಹೂ ಕೆಜಿಗೆ 2 ರೂಪಾಯಿ, ಹೀಗೆ ಯಾವುದೇ ಹೂವಿಗೂ ಬೆಲೆಯಿಲ್ಲ. ಏಕೆಂದರೆ ಆಷಾಢ ಮಾಸ ಎಂದು ಶುಭ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಮತ್ತೊಂದೆಡೆ ಜಾತ್ರೆ, ಉತ್ಸಹಗಳು, ಮದುವೆ ಮುಂಜಿ ಏನು ನಡೆಯುತ್ತಿಲ್ಲ. ಇದರಿಂದ ಹೂಗಳನ್ನು ಕೊಂಡುಕೊಳ್ಳಲು ಯಾರು ಬರುತ್ತಿಲ್ಲ ಎಂದು ಹೂ ವರ್ತಕ ಶ್ರೀಧರ್ ತಿಳಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಆಷಾಢ ಮಾಸಕ್ಕೆ ಅದರದೆ ಆದ ಮಹತ್ವವಿದ್ದು, ಸಾಮಾನ್ಯವಾಗಿ ಹಿಂದೂಗಳು ಆಷಾಢ ಮಾಸದಲ್ಲಿ ಯಾವುದೆ ಶುಭ ಕಾರ್ಯಗಳನ್ನು ಮಾಡಲ್ಲ. ಇನ್ನೂ ಆಷಾಢ ಮಾಸದಲ್ಲಿ ಜಾತ್ರೆ ಹಾಗೂ ಉತ್ಸಹಗಳು ಇರುತ್ತದೆ. ಆದರೆ ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿ ಹಿನ್ನಲೆ ಜನರನ್ನು ಸೇರಿಸಿ ಜಾತ್ರೆಗಳನ್ನು ಮಾಡುವಂತಿಲ್ಲ. ಇದರಿಂದ ರೈತರು ಬೆಳೆದ ಹೂಗಳಿಗೆ ಬೆಲೆಯಿಲ್ಲದಂತಾಗಿದೆ.

ಇದನ್ನೂ ಓದಿ:
ಗದಗದ ಹೂವು ಬೆಳೆಗಾರರಲ್ಲಿ ಹೆಚ್ಚಿದ ಆತಂಕ; ವ್ಯಾಪಾರವಿಲ್ಲದೆ ಹುಬ್ಬಳ್ಳಿ ಮಾರುಕಟ್ಟೆಯ ಕಸದ ತೊಟ್ಟಿಗೆ ಸೇವಂತಿ ಎಸೆದ ರೈತರು

ಹಡಿಲು ಭೂಮಿಯಲ್ಲಿ ಚೆಂಡು ಹೂ ಬೆಳೆದು ಭರಪೂರ ಫಸಲು ಪಡೆದ ಕಾರ್ಕಳದ ರೈತ; ಲಾಕ್​ಡೌನ್​ನಿಂದ ಕಂಗಾಲು