ಗದಗದ ಹೂವು ಬೆಳೆಗಾರರಲ್ಲಿ ಹೆಚ್ಚಿದ ಆತಂಕ; ವ್ಯಾಪಾರವಿಲ್ಲದೆ ಹುಬ್ಬಳ್ಳಿ ಮಾರುಕಟ್ಟೆಯ ಕಸದ ತೊಟ್ಟಿಗೆ ಸೇವಂತಿ ಎಸೆದ ರೈತರು
ಹುಬ್ಬಳ್ಳಿ ಮಾರುಕಟ್ಟೆಗೆ ಹೋಗಿ ಕ್ವಿಂಟಾಲ್ ಗಟ್ಟಲೆ ಹೂವು ಕಸದ ತೊಟ್ಟಿಗೆ ಹಾಕಿ ಬಂದಿದ್ದು, ಕೊನೆಗೆ ಊರಿಗೆ ಬರಲು ದುಡ್ಡಿಲ್ಲದೇ 200 ಸಾಲ ಮಾಡಿಕೊಂಡು ಊರಿಗೆ ಬಂದಿರುವುದಾಗಿ ಹೂವು ಬೆಳೆಗಾರರಾದ ಕೋಟ್ರುಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಗದಗ: ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದೆ. ಅಲ್ಲದೆ ಈ ಲಾಕ್ಡೌನ್ನಿಂದಾಗಿ ಕ್ರಮೇಣ ಕೊವಿಡ್ ಪ್ರಕರಣಗಳು ಕಡಿಮೆಯಾಗುತ್ತಾ ಬರುತ್ತಿದೆ. ಆದರೆ ಲಾಕ್ಡೌನ್ನಿಂದಾಗಿ ವ್ಯಾಪಾರ, ವ್ಯವಹಾರಗಳು ನಿಂತು ಹೋಗಿದ್ದು, ಕೂಲಿ ಕಾರ್ಮಿಕರು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಲ್ಲೂ ರೈತರು ಬೆಳೆದ ಬೆಳೆ ಹೊಲದಲ್ಲಿ, ತೋಟದಲ್ಲಿ ಕಮರಿಹೋಗುತ್ತಿದ್ದು, ಸಾಲದ ಹೊರೆ ಹೆಚ್ಚಾಗುತ್ತಿದೆ.ಇಂತಹದ್ದೇ ಪರಿಸ್ಥಿತಿ ಸದ್ಯ ಗದಗ ಜಿಲ್ಲೆಯ ಹೂವು ಬೆಳೆಗಾರರದ್ದಾಗಿದ್ದು, ಮಾರಾಟವಾಗದ ಹೂವನ್ನು ತಿಪ್ಪೆಗೆ ಎಸೆಯುತ್ತಿದ್ದಾರೆ.
ಗದಗ ತಾಲೂಕಿನ ಲಕ್ಕುಂಡಿ, ಸಂಭಾಪೂರ, ಕದಂಪೂರ, ಕಣವಿ ಹೊಸೂರ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 1ಸಾವಿರ ಎಕರೆಯಲ್ಲಿ ರೈತರು ಹೂವು ಬೆಳೆದಿದ್ದಾರೆ. ಹೂವು ಕೂಡ ಈ ಬಾರಿ ಚೆನ್ನಾಗೆ ಬಂದಿದೆ. ಈ ಗ್ರಾಮಗಳ ಸುತ್ತಮುತ್ತಲಿನ ಯಾವ ಹೊಲಗಳಿಗೆ ಹೋದರು ಹೂವುಗಳು ಹೊಲದಲ್ಲಿ ತುಂಬಿ ತುಳುಕುತ್ತಿವೆ. ನಾಲ್ಕೈದು ಗ್ರಾಮಗಳ ವ್ಯಾಪ್ತಿಯಲ್ಲಿ ಸೇವಂತಿ, ಕತ್ತಿ ಸೇವಂತಿ, ಚೆಂಡು ಹೂವು, ಗಲಾಟೆ ಹೀಗೆ ಹಲವಾರು ನಮೂನೆಯ ಹೂವು ಬೆಳೆಯಲಾಗುತ್ತದೆ. ಅದರಂತೆ ಇಲ್ಲಿ ಬೆಳೆದ ಹೂವುಗಳಿಗೆ ಬೇಡಿಕೆ ಕೂಡ ಇದೆ.
ಆದರೆ ಲಾಕ್ಡೌನ್ ಎಲ್ಲಾ ಬದಲಾಯಿಸಿದೆ.ಮದುವೆ ಸೀಜನ್ನಲ್ಲಿ ಸುಮಾರು ಒಂದು ಕೋಟಿಯಷ್ಟು ವಹಿವಾಟು ನಡೆಯಬೇಕಿತ್ತು. ಅಷ್ಟೊಂದು ಪ್ರಮಾಣದಲ್ಲಿ ರೈತರು ಹೂವು ಬೆಳೆದಿದ್ದಾರೆ. ಕೆಜಿಗೆ 250-300 ರೂಪಾಯಿವರೆಗೆ ಮಾರಾಟ ಆಗುತ್ತಿದ್ದ ಹೂವು, ಈಗ 10ರಿಂದ 20 ರೂಪಾಯಿಗೆ ಯಾರೂ ಕೇಳುತ್ತಿಲ್ಲ. ಹೀಗಾಗಿ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಸರ್ಕಾರ ಹೇಕ್ಟರ್ಗೆ 10 ಸಾವಿರ ನೀಡಿದ್ದು, ಇದು ಔಷಧಿಗೂ ಸಾಲಲ್ಲ. ಹೀಗಾಗಿ ಸರ್ಕಾರ ಕನಿಷ್ಠ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಹೂವು ಬೆಳೆಗಾರರಾದ ಪ್ರಕಾಶ ಮನವಿ ಮಾಡಿದ್ದಾರೆ.
ಗದಗ ಜಿಲ್ಲೆಯಲ್ಲಿ ಬೆಳೆದ ಹೂವು ಗದಗ, ಹುಬ್ಬಳ್ಳಿ, ಬೆಳಗಾವಿ ಮಾರುಕಟ್ಟೆಗೆ ಕಳಿಸಲಾಗುತ್ತದೆ. ಆದರೆ, ಗದಗ ಜಿಲ್ಲೆ ಸಂಪೂರ್ಣ ಲಾಕ್ಡೌನ್ ಇರುವುದರಿಂದ ನಾಲ್ಕು ದಿನಗಳ ಹಿಂದೆ ರೈತರು ಹೂವು ಕಟಾವು ಮಾಡಿ ಹುಬ್ಬಳ್ಳಿ ಮಾರುಕಟ್ಟೆಗೆ ಹೋದರೆ 10-20 ರೂಪಾಯಿಗೆ ಕೆಜಿ ಹೂವು ಖರೀದಿಯಾಗಿಲ್ಲ. ಹುಬ್ಬಳ್ಳಿ ಮಾರುಕಟ್ಟೆಗೆ ಹೋಗಿ ಕ್ವಿಂಟಾಲ್ ಗಟ್ಟಲೆ ಹೂವು ಕಸದ ತೊಟ್ಟಿಗೆ ಹಾಕಿ ಬಂದಿದ್ದು, ಕೊನೆಗೆ ಊರಿಗೆ ಬರಲು ದುಡ್ಡಿಲ್ಲದೇ 200 ಸಾಲ ಮಾಡಿಕೊಂಡು ಊರಿಗೆ ಬಂದಿರುವುದಾಗಿ ಹೂವು ಬೆಳೆಗಾರರಾದ ಕೋಟ್ರುಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಒಂದು ಎಕರೆಯಲ್ಲಿ ಹೂವು ಬೆಳೆದ ರೈತರು ಮದುವೆ ಸೀಜನ್ನಲ್ಲಿ ವಾರಕ್ಕೆ ಒಂದು ಲಕ್ಷ ಲಾಭ ಪಡೆಯುತ್ತಿದ್ದರು. ಅಂದರೆ ತಿಂಗಳಿಗೆ ನಾಲ್ಕು ಲಕ್ಷ ಅಂದ್ರೆ ಮೂರು ತಿಂಗಳಲ್ಲಿ 12 ಲಕ್ಷ ಆದಾಯ ಪಡೆಯುತ್ತಿದ್ದರು. ಆದರೆ ಕಳೆದ ವರ್ಷ ಮತ್ತು ಈ ಬಾರಿ ರೈತರು ಸಂಪೂರ್ಣ ನಷ್ಟದ ಕೂಪದಲ್ಲಿ ಒದ್ದಾಡುತ್ತಿದ್ದಾರೆ. ಕನಿಷ್ಠ ಹೂವು ಮಾರಾಟಕ್ಕೆ ಆರು ಗಂಟೆ ಅವಕಾಶ ನೀಡಿದರೆ ಸರ್ಕಾರದ ಪರಿಹಾರವೇ ಬೇಡ ಎನ್ನುವುದು ಈ ಭಾಗದ ರೈತರ ವಾದವಾಗಿದೆ.
ಲಾಕ್ಡೌನ್ ಹಿನ್ನಲೆಯಲ್ಲಿ ಮದುವೆಗಳು ರದ್ದಾಗಿವೆ. ಮಾರುಕಟ್ಟೆ ವ್ಯವಸ್ಥೆ ಇಲ್ಲ. ಹೇಗೊ ಮಾರುಕಟ್ಟೆಗೆ ಹೋದರೆ ಖರೀದಿ ಮಾಡೋರು ಯಾರು ಇಲ್ಲ. ಹೀಗಾಗಿ ರೈತರ ಪಾಡು ಹೇಳತೀರದಾಗಿದೆ. ಈಗ ಗಿಡದಲ್ಲಿ ಭರಪೂರ ಹೂವು ಇದ್ದರು ಕಟಾವು ಮಾಡುತ್ತಿಲ್ಲ. ಹಾಗೇ ಬಿಟ್ಟರೆ ಇಡೀ ತೋಟ ಹಾಳಾಗುತ್ತದೆ. ಹೀಗಾಗಿ ಏನು ಮಾಡದ ಸ್ಥಿತಿಯಲ್ಲಿ ರೈತರು ಇದ್ದಾರೆ.
ಇದನ್ನೂ ಓದಿ:
ಚಿಕ್ಕಮಗಳೂರು ರೈತರಲ್ಲಿ ಆತಂಕ; ಲಾಕ್ಡೌನ್ ಹಿನ್ನೆಲೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲು
ಬೀದಿಗೆ ಬಂದ ಹೂವು ಬೆಳೆಗಾರರ ಬದುಕು; ರಸ್ತೆಯಲ್ಲಿಯೇ ಹೂವುಗಳನ್ನು ಸುರಿದು ರೈತರ ಆಕ್ರೋಶ