ಬಿ ಎಸ್ ಯಡಿಯೂರಪ್ಪ ಆರೋಗ್ಯ ಸರಿಯಿಲ್ಲ, ರಾಜ್ಯದ ಆಡಳಿತದ ಆರೋಗ್ಯವೂ ಸರಿಯಾಗಬೇಕು: ಹೆಚ್ ವಿಶ್ವನಾಥ್
ಸಂಸದ ಶ್ರೀನಿವಾಸ ಪ್ರಸಾದ್ರನ್ನು ಹೆಚ್.ವಿಶ್ವನಾಥ್ ಮೈಸೂರಿನ ಜಯಲಕ್ಷ್ಮೀಪುರಂ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶ್ರೀನಿವಾಸ ಪ್ರಸಾದ್ ಜತೆ ಎಂಎಲ್‌ಸಿ ವಿಶ್ವನಾಥ್ ಗೌಪ್ಯ ಚರ್ಚೆ ನಡೆಸಿದ್ದಾರೆ. ರಾಜಕೀಯ ವಿದ್ಯಮಾನ, ಜಿಲ್ಲೆಯಲ್ಲಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಗ್ಯ ಸರಿಯಿಲ್ಲ, ಅದರ ಜೊತೆಗೆ ರಾಜ್ಯದ ಆಡಳಿತದ ಆರೋಗ್ಯವೂ ಸರಿಯಾಗಬೇಕು. ಹೀಗಾಗಿ ಹೈಕಮಾಂಡ್ ಶೀಘ್ರ ಒಂದು ನಿರ್ಧಾರ ಮಾಡಬೇಕಿದೆ ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್‌ಸಿ ಹೆಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ಗೊಂದಲ ಇದೆ. ಕೆಲವರು ದೆಹಲಿಗೆ ಹೋಗಿದ್ದಾರೆ, ಕೆಲವರು ಹೇಳಿಕೆ ನೀಡ್ತಿದ್ದಾರೆ. ಇಷ್ಟೆಲ್ಲಾ ಆದ್ರೂ ಯಡಿಯೂರಪ್ಪನವರು ಏನೂ ಮಾತಾಡ್ತಿಲ್ಲ. ಯಾರು ಏನೇ ಮಾಡಿದ್ರೂ ತೀರ್ಮಾನಿಸುವುದು ಹೈಕಮಾಂಡ್ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿ ನಂತರ ಹೆಚ್. ವಿಶ್ವನಾಥ್ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಶ್ರೀನಿವಾಸ್ ಪ್ರಸಾದ್ ಹೆಚ್. ವಿಶ್ವನಾಥ್ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಪರೋಕ್ಷವಾಗಿ ನಾಯಕತ್ವ ಬದಲಾವಣೆಗೆ ಪುಷ್ಠಿ ಕೊಟ್ಟಂತೆ ಹೆಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಈಗ ಯಾವ ವಿಚಾರಕ್ಕೆ ಮುಹೂರ್ತ ಇಟ್ಟಿದ್ದೇವೆಂದು ಹೇಳಲ್ಲ! ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಹಲವು ವಿಚಾರಕ್ಕೆ ಮುಹೂರ್ತ ಇಟ್ಟಿದ್ದೇವೆ. ಇಂದು ಸಹ ಹಲವು ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ. ಈಗ ಯಾವ ವಿಚಾರಕ್ಕೆ ಮುಹೂರ್ತ ಇಟ್ಟಿದ್ದೇವೆಂದು ಹೇಳಲ್ಲ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿ ನಂತರ ವಿಶ್ವನಾಥ್ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿಗೂ ಇಲ್ಲೇ ಮುಹೂರ್ತ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಮುಹೂರ್ತ ಇಟ್ಟಿದ್ದು ಇಲ್ಲೇ. ರಾಜ್ಯ ಸಮ್ಮಿಶ್ರ ಸರ್ಕಾರ ಪತನಕ್ಕೂ ಇಲ್ಲೇ ಮುಹೂರ್ತ ಇಟ್ಟಿದ್ದು. ಯಡಿಯೂರಪ್ಪ ಮುಖ್ಯಮಂತ್ರಿ ಆಗೋದಕ್ಕೂ ಮುಹೂರ್ತ ಇಟ್ಟಿದ್ದು ಇಲ್ಲೇ. ನಂತರದಲ್ಲಿ ಹಲವು ಬೆಳವಣಿಗೆಗೆ ಶ್ರೀನಿವಾಸಪ್ರಸಾದ್ ಮನೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
ಮೈಸೂರು ಜಿಲ್ಲೆ ನಿಮ್ಮಿಬ್ಬರದ್ದೇ ಅಲ್ಲ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಜಟಾಪಟಿ ವಿಚಾರವಾಗಿಯೂ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಮೈಸೂರು ಜಿಲ್ಲೆ ನಿಮ್ಮಿಬ್ಬರದ್ದೇ ಅಲ್ಲ. ಪ್ರತಾಪ್ ಸಿಂಹ, ರೋಹಿಣಿ ಸಿಂಧೂರಿಗೆ ಜಿಲ್ಲೆ ಸೀಮಿತವಲ್ಲ. ಹಾದಿರಂಪ ಬೀದಿರಂಪ ಬಿಡಿ ಎಂದು ವಿಶ್ವನಾಥ್ ಸಲಹೆ ನೀಡಿದ್ದಾರೆ.
ಪ್ರತಾಪ್ ಸಿಂಹ ಸಂಸದರು, ಹಾಗಾಗಿ ಮಾತಿನಲ್ಲಿ ಗಾಂಭೀರ್ಯ ಇರಲಿ. ನಾನು, ಶ್ರೀನಿವಾಸ ಪ್ರಸಾದ್, ರಾಮದಾಸ್, ನಾಗೇಂದ್ರ, ತನ್ವೀರ್ ಸೇಠ್‌ರಂತಹ ಹಿರಿಯರು ಜಿಲ್ಲೆಯಲ್ಲಿ ಇದ್ದೇವೆ. ನೀವು ಬೀದಿಯಲ್ಲಿ ಜಗಳ ಆಡಿದ್ರೆ ನಾವು ಯಾಕಿರಬೇಕು? ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಲಿ ಎಂದು ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಸಂಸದ ಶ್ರೀನಿವಾಸ ಪ್ರಸಾದ್ರನ್ನು ಹೆಚ್.ವಿಶ್ವನಾಥ್ ಮೈಸೂರಿನ ಜಯಲಕ್ಷ್ಮೀಪುರಂ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶ್ರೀನಿವಾಸ ಪ್ರಸಾದ್ ಜತೆ ಎಂಎಲ್‌ಸಿ ವಿಶ್ವನಾಥ್ ಗೌಪ್ಯ ಚರ್ಚೆ ನಡೆಸಿದ್ದಾರೆ. ರಾಜಕೀಯ ವಿದ್ಯಮಾನ, ಜಿಲ್ಲೆಯಲ್ಲಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ‘ಇರುವ ಎರಡು ಜೊತೆ ಒಳ ಉಡುಪೂ ಹರಿದಿದೆ’; ಬಟ್ಟೆ ಅಂಗಡಿ ತೆರೆಸಲು ಸಿಎಂಗೆ ಮೈಸೂರು ವ್ಯಕ್ತಿ ಮನವಿ
Published On - 3:46 pm, Wed, 2 June 21