‘ಇರುವ ಎರಡು ಜೊತೆ ಒಳ ಉಡುಪೂ ಹರಿದಿದೆ’; ಬಟ್ಟೆ ಅಂಗಡಿ ತೆರೆಸಲು ಸಿಎಂಗೆ ಮೈಸೂರು ವ್ಯಕ್ತಿ ಮನವಿ
ಹೊಸ ಬಟ್ಟೆ ಖರೀದಿ ಮಾಡಬೇಕು ಎನ್ನುವ ಆಲೋಚನೆ ಇದ್ದವರು ಸುಮ್ಮನಿದ್ದಾರೆ. ಈ ಮಧ್ಯೆ ಮೈಸೂರು ವ್ಯಕ್ತಿಯೋರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಿತ್ರ ಪತ್ರ ಒಂದನ್ನು ಬರೆದಿದ್ದಾರೆ.
ಕೊರೊನಾ ಲಾಕ್ಡೌನ್ನಿಂದ ಜನರಿಗೆ ನಾನಾ ತೊಂದರೆ ಎದುರಾಗುತ್ತಿದೆ. ಮುಂಜಾನೆ ಏಳುವುದು ತಡವಾದರೆ ಅಗತ್ಯ ವಸ್ತುಗಳು ಸಿಗುವುದಿಲ್ಲ. ಇನ್ನು, ಮೊಬೈಲ್ ಹಾಳಾದರೆ ತಕ್ಷಣಕ್ಕೆ ಸಿಗುವುದಿಲ್ಲ. ಆನ್ಲೈನ್ ಮೂಲಕ ಆರ್ಡರ್ ಮಾಡಿ ಅದನ್ನು ತರಿಸಿಕೊಳ್ಳಬೇಕು. ಹೀಗೆ, ಮೊಬೈಲ್ ಆರ್ಡರ್ ಹಾಕೋದಕ್ಕೂ ಇನ್ನೊಂದು ಮೊಬೈಲ್ ಬೇಕು! ಈ ಮಧ್ಯೆ ಲಾಕ್ಡೌನ್ನಿಂದ ಬಟ್ಟೆ ಅಂಗಡಿ ತೆರೆಯುತ್ತಿಲ್ಲ. ಹೀಗಾಗಿ, ಹೊಸ ಬಟ್ಟೆ ಖರೀದಿ ಮಾಡಬೇಕು ಎನ್ನುವ ಆಲೋಚನೆ ಇದ್ದವರು ಸುಮ್ಮನಿದ್ದಾರೆ. ಈ ಮಧ್ಯೆ ಮೈಸೂರು ವ್ಯಕ್ತಿಯೋರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಿತ್ರ ಪತ್ರ ಒಂದನ್ನು ಬರೆದಿದ್ದಾರೆ.
ಹೆಸರು, ಕೊ.ಸು. ನರಸಿಂಹ ಮೂರ್ತಿ. ಸಿಎಂ ಬಳಿ ಅವರು ಬಟ್ಟೆ ಅಂಡಗಿ ತೆರೆಸಬೇಕೆನ್ನುವ ಬೇಡಿಕೆ ಇಟ್ಟಿದ್ದಾರೆ. ಹಾಗಾದರೆ ಅವರಿಗೆ ಹೊಸ ಬಟ್ಟೆ ಖರೀದಿ ಮಾಡಬೇಕೆ? ಇಲ್ಲ. ಅವರ ಒಳ ಉಡುಪು ಹರಿದು ಹೋಗಿದ್ದು, ಹೊಸದನ್ನು ಖರೀದಿಸಬೇಕಂತೆ. ಹೀಗಾಗಿ, ಸಿಎಂ ಎದುರು ಈ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.
‘ಮಾನ್ಯ ಮುಖ್ಯಮಂತ್ರಿಗಳೇ ನನ್ನ ಬೇಡಿಕೆ ನಿಮಗೆ ವಿಚಿತ್ರ ಎನಿಸಬಹುದು. ಆದರೆ, ಪರಿಸ್ಥಿತಿ ಅವಲೋಕಿಸಿ. ಕಳೆದ ಎರಡು ತಿಂಗಳಿಂದ ಎಲ್ಲಾ ಅಂಗಡಿ ತೆರೆದಿವೆ. ಆದರೆ, ಬಟ್ಟೆ ಅಂಗಡಿ ಓಪನ್ ಮಾಡಲು ಅನುಮತಿ ನೀಡಿಲ್ಲ. ಇದರಿಂದ ಜನರಿಗೆ ಎಷ್ಟು ತೊಂದರೆ ಆಗುತ್ತಿದೆ ಗೊತ್ತಾ?’ ಎಂದು ಅವರು ಪತ್ರ ಆರಂಭಿಸಿದ್ದಾರೆ.
‘ಕೇವಲ ಎರಡು ಜತೆ ಒಳಉಡುಪು ಹೊಂದಿರುವ ನನ್ನಂಥವರ ಒಳಚೆಡ್ಡಿ ಹಾಗೂ ಬನಿಯನ್ ಹರಿಯುತ್ತಿದೆ. ಪಾಪ ಹೆಣ್ಣುಮಕ್ಕಳ ಬಟ್ಟೆ ಗತಿಯೂ ಹೀಗೆಯೇ ಆಗಿರಬಹುದು. ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳೋಣ? ಜನರ ಸಮಸ್ಯೆ ನಿಮಗೆ ಗೊತ್ತಾದರೆ ಸಾಕು. ತಿಂಗಳಿಗೆ ಒಮ್ಮೆಯಾದರೂ ಬಟ್ಟೆ ಅಂಗಡಿ ತೆಗೆದು ನಮ್ಮ ಒಳುಡುಪಿನ ಸಮಸ್ಯೆ ಬಗೆಹರಿಸಿ ಸ್ವಾಮಿ’ ಎಂದು ನರಸಿಂಹ ಮೂರ್ತಿ ಪತ್ರದಲ್ಲಿ ಕೋರಿದ್ದಾರೆ.
ಇದನ್ನೂ ಓದಿ: ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದ ಸಂಸದ ಪ್ರತಾಪ್ ಸಿಂಹ