ಬಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಸಹೋದ್ಯೋಗಿಗಳ ಅಸಹಕಾರ: ದೀರ್ಘಾವಧಿ ರಜೆ ಹಾಕಿ ತೆರಳಿದ ನಿರ್ದೇಶಕ
ಬಿಮ್ಸ್‌ನಲ್ಲಿ ಮೂರು ಗುಂಪುಗಳಾಗಿದ್ದರಿಂದ ಸುಧಾರಣೆ ವಿಚಾರದಲ್ಲಿ ಅಸಹಾಯಕರಾದ ನಿರ್ದೇಶ ವಿನಯ್ ದಾಸ್ತಿಕೊಪ್ಪ, ತಮ್ಮ ಪ್ರಯತ್ನ ಕೈಚೆಲ್ಲಿ ದೀರ್ಘ ರಜೆ ಪಡೆದು ತೆರಳಿದರು. ಜೂನ್ 2ರಿಂದ ಜುಲೈ 1ರವರೆಗೂ ಆಸ್ಪತ್ರೆಯ ನಿರ್ದೇಶಕ ವಿನಯ್ ರಜೆ ಪಡೆದಿದ್ದಾರೆ.
ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದೆ. ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಸ್ಪತ್ರೆಯ ನಿರ್ದೇಶಕ ವಿನಯ್ ದಾಸ್ತಿಕೊಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವ್ಯವಸ್ಥೆ ಸರಿಪಡಿಸಲು ನಾಲ್ಕು ದಿನಗಳ ಕಾಲಾವಕಾಶ ನೀಡಿದ್ದರು. ಬಿಮ್ಸ್‌ನಲ್ಲಿ ಮೂರು ಗುಂಪುಗಳಾಗಿದ್ದರಿಂದ ಸುಧಾರಣೆ ವಿಚಾರದಲ್ಲಿ ಅಸಹಾಯಕರಾದ ನಿರ್ದೇಶ ವಿನಯ್ ದಾಸ್ತಿಕೊಪ್ಪ, ತಮ್ಮ ಪ್ರಯತ್ನ ಕೈಚೆಲ್ಲಿ ದೀರ್ಘ ರಜೆ ಪಡೆದು ತೆರಳಿದರು. ಜೂನ್ 2ರಿಂದ ಜುಲೈ 1ರವರೆಗೂ ಆಸ್ಪತ್ರೆಯ ನಿರ್ದೇಶಕ ವಿನಯ್ ರಜೆ ಪಡೆದಿದ್ದಾರೆ. ತಮ್ಮ ಡಾ.ಉಮೇಶ್ ಕುಲಕರ್ಣಿ ನನ್ನ ಅನುಪಸ್ಥಿತಿಯಲ್ಲಿ ಕಾರ್ಯಭಾರ ನೋಡಿಕೊಳ್ಳುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಒಬ್ಬ ವೈದ್ಯರನ್ನು ಕಂಡರೆ ಮತ್ತೊಬ್ಬ ವೈದ್ಯರಿಗೆ ಆಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಮಾಹಿತಿ ತಿಳಿದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಳೆದ ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಈ ವೇಳೆ ಬಿಮ್ಸ್ ಆಸ್ಪತ್ರೆಯ ಕೊವಿಡ್ ವಾರ್ಡ್ ಸ್ಥಿತಿ ಕಂಡು ದಿಗ್ಬ್ರಾಂತರಾದರು. ಇದೆಂಥ ಆಸ್ಪತ್ರೆ, ದನದ ಕೊಟ್ಟಿಗೆ ಇದಕ್ಕಿಂತಲೂ ಚೆನ್ನಾಗಿರುತ್ತದೆ ಎಂದು ಎಂದು ಬಿಮ್ಸ್ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ದನದ ಕೊಟ್ಟಿಗೆಗಿಂತಲೂ ಈ ಕೊವಿಡ್ ವಾರ್ಡ್ ಕೆಟ್ಟದಾಗಿದೆ ಎಂದಿದ್ದರು.
ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ವೇಳೆ ಲಕ್ಷ್ಮಣ ಸವದಿ ಎದುರು ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಅಳಲು ತೋಡಿಕೊಂಡಿದ್ದರು. ಹಿರಿಯ ವೈದ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರ ಅಸಹಕಾರ ಬಗ್ಗೆ ಪ್ರಸ್ತಾಪಿಸಿದ್ದರು. ಮೂವರು ವೈದ್ಯರನ್ನು ಬಿಟ್ಟರೆ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಯಾವ ವೈದ್ಯರೂ ಹೋಗುವುದಿಲ್ಲ. ಯಾವ ವೈದ್ಯರೂ ಸಹಕಾರ ನೀಡುತ್ತಿಲ್ಲ. ನನ್ನನ್ನು ಸಸ್ಪೆಂಡ್ ಮಾಡ್ತೀರಾ, ವರ್ಗಾವಣೆ ಮಾಡ್ತೀರಾ ಮಾಡಿ ಸಾರ್ ಎಂದು ಅಳಲು ತೋಡಿಕೊಂಡಿದ್ದರು.
ಈ ಬೆಳವಣಿಗೆಯ ಬಳಿಕ ಎಲ್ಲ ವೈದ್ಯರಿಗೂ ಸೂಚನೆ ನೀಡಿದ್ದ ಲಕ್ಷ್ಮಣ ಸವದಿ, ಎಲ್ಲರೂ 3 ಪಾಳಿಗಳಲ್ಲಿ ಕೆಲಸ ಮಾಡಬೇಕು ಎಂದಿದ್ದರು. ಇದೇ ವೇಳೆ ಬಿಮ್ಸ್‌ನ ವಿವಿಧ ಭಾಗಗಳ ಮುಖ್ಯಸ್ಥರಲ್ಲಿ ‘ವೈದ್ಯಕೀಯ ಮನೋಧರ್ಮ ಮರೆಯಬೇಡಿ’ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದರು.
ಎಲ್ಲ ವಾರ್ಡ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಈ ಹಿಂದೆ ಬಿಮ್ಸ್ ಅವ್ಯವಸ್ಥೆ ಬಗ್ಗೆ ಬೆಳಗಾವಿ ಜಿಲ್ಲೆಯ ಹಲವು ಜನಪ್ರತಿನಿಧಿಗಳು ದೂರು ನೀಡಿದ್ದರು. ಬಿಮ್ಸ್‌ನಲ್ಲಿ ಮೂರು ಗುಂಪುಗಳಿವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬೇಕು.
ಈ ಎಲ್ಲ ಬೆಳವಣಿಗೆಗಳ ನಂತರ ಸ್ವತಃ ಬಿಮ್ಸ್ ನಿರ್ದೇಶಕರು ಅಸಹಾಯಕರಾಗಿ ದೀರ್ಘಾವಧಿ ರಜೆ ಹಾಕಿ ತೆರಳಿರುವ ಬೆಳವಣಿಗೆ ನಡೆದಿದೆ.
(BIMS Director Vinay Dastikoppa Left Hospital on Long Leave Non Cooperation from Colleagues)
ಇದನ್ನೂ ಓದಿ: ಗಾಯಾಳು ಕೈಯಲ್ಲೇ ಗ್ಲೂಕೋಸ್ ಬಾಟಲ್ ಹಿಡಿಸಿ, ಆ್ಯಂಬುಲೆನ್ಸ್ ಹತ್ತಿಸಿಕೊಂಡ ಬಿಮ್ಸ್!
ಇದನ್ನೂ ಓದಿ: ಒಂದೇ ಆ್ಯಂಬುಲೆನ್ಸ್ನಲ್ಲಿ 12 ಸೋಕಿಂತರ ಸ್ಥಳಾಂತರ; ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಎಡವಟ್ಟಿಗೆ ಜನರ ಆಕ್ರೋಶ
Published On - 4:43 pm, Wed, 2 June 21