ಚಿಕ್ಕಮಗಳೂರು ರೈತರಲ್ಲಿ ಆತಂಕ; ಲಾಕ್ಡೌನ್ ಹಿನ್ನೆಲೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲು
ಸೇವಂತಿಗೆ ಹೂದೋಟದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಎರಡು ತೋಟಕ್ಕೂ ಒಂದು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಇದೀಗ ಮಾರುಕಟ್ಟೆಗೆ ತಲುಪಿಸಲಾರದೇ, ಹೊಲದತ್ತ ಬರುವ ಖರೀದಿದಾರರು ಮೂರು ಕಾಸಿಗೆ ಕೆಳದ ಹಿನ್ನೆಲೆಯಲ್ಲಿ ಟೊಮೆಟೊ ಕರಗಿ ಹೋಗುತ್ತಿದ್ದರೆ, ಹೂವು ಬಾಡಿ ಹೋಗುತ್ತಿದೆ. ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿದೆ ಎಂದು ಬೆಳೆ ಕಳೆದುಕೊಂಡ ರೈತ ಶೇಖರಪ್ಪ ಕಣ್ಣೀರಿಟ್ಟಿದ್ದಾರೆ.
ಚಿಕ್ಕಮಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದು, ಯಾವುದೇ ಸಭೆ- ಸಮಾರಂಭಗಳನ್ನು ನಡೆಸದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ನೇರ ಪರಿಣಾಮ ಸದ್ಯ ರೈತರ ಮೇಲಾಗಿದ್ದು, ಮದುವೆ ಇನ್ನಿತರ ಕಾರ್ಯಕ್ರಮಗಳು ನಡೆಯದೆ, ಬೆಳೆದ ತರಕಾರಿ, ಹಣ್ಣುಗಳನ್ನು ಕೊಂಡುಕೊಳ್ಳುವವರೇ ಇಲ್ಲದಂತಾಗಿದೆ. ಇನ್ನು ಜನರ ಸಂಚಾರ ಕಡಿಮೆಯಾಗಿ, ವ್ಯಾಪರ ಇಲ್ಲದ ಹಿನ್ನೆಲೆ ರೈತರು ಬೆಳೆದ ತರಕಾರಿ, ಹೂ ಬೆಳೆಗಳು ಹೊಲದಲ್ಲೇ ಕರಗಿ ಗೊಬ್ಬರವಾಗುತ್ತಿದೆ. ಇಂತಹದ್ದೇ ಸ್ಥಿತಿ ಈಗ ಚಿಕ್ಕಮಗಳೂರು ರೈತರದ್ದಾಗಿದ್ದು, ಕಳೆದ ಬಾರಿಯ ಲಾಕ್ಡೌನ್ನಲ್ಲೂ ಹೀಗೆ ಆಗಿತ್ತು, ಈ ಬಾರಿ ಮತ್ತದೇ ಪುನಾರವರ್ತನೆ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಲ್ಲಿಗೇನಗಹಳ್ಳಿಯ ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ, ಸರಿಯಾದ ಬೆಲೆಯೂ ಸಿಗದೇ ಅಕ್ಷರಶಃ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಈ ಗ್ರಾಮದ ಶೇಖರಪ್ಪ ಎನ್ನುವ ರೈತನ ಸ್ಥಿತಿ ಕೂಡ ಹೀಗೆ ಆಗಿದ್ದು, ರೈತ ಶೇಖರಪ್ಪ ಅರ್ಧ ಎಕರೆ ಟೊಮೆಟೊ ಬೆಳೆ, ಮೂಕ್ಕಾಲು ಎಕರೆ ಸೇವಂತಿಗೆ ತೋಟ ಮಾಡಿದ್ದರು. ಈ ರೈತನ ಕುಟುಂಬ ಹಾಕಿದ ಪರಿಶ್ರಮಕ್ಕೆ ಟೊಮೆಟೊ ಬೆಳೆ ಸೇರಿದಂತೆ ಸೇವಂತಿಗೆ ಹೂ ಚೆನ್ನಾಗಿ ಬೆಳೆದಿತ್ತು. ಆದರೆ ಇನ್ನೆನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು ಎನ್ನುವಾಗ ಲಾಕ್ಡೌನ್ ಜಾರಿಯಾಗಿದೆ. ಟೊಮೆಟೊ ಬೆಳೆ ಮಾರುಕಟ್ಟೆಗೆ ಸಾಗಿಸಲಾಗದೇ ಇದ್ದಿದ್ದರಿಂದ ಹೊಲದಲ್ಲೇ ಕೊಳೆಯುವಂತಾಗಿದೆ.
ಸೇವಂತಿಗೆ ಹೂದೋಟದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಎರಡು ತೋಟಕ್ಕೂ ಒಂದು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಇದೀಗ ಮಾರುಕಟ್ಟೆಗೆ ತಲುಪಿಸಲಾರದೇ, ಹೊಲದತ್ತ ಬರುವ ಖರೀದಿದಾರರು ಮೂರು ಕಾಸಿಗೆ ಕೆಳದ ಹಿನ್ನೆಲೆಯಲ್ಲಿ ಟೊಮೆಟೊ ಕರಗಿ ಹೋಗುತ್ತಿದ್ದರೆ, ಹೂವು ಬಾಡಿ ಹೋಗುತ್ತಿದೆ. ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಬೆಳೆ ಕಣ್ಣೆದುರೇ ನಾಶವಾಗುತ್ತಿದೆ ಎಂದು ಬೆಳೆ ಕಳೆದುಕೊಂಡ ರೈತ ಶೇಖರಪ್ಪ ಕಣ್ಣೀರಿಟ್ಟಿದ್ದಾರೆ.
ಲಾಕ್ಡೌನ್ನಿಂದ ಕೇವಲ ಟೊಮೆಟೊ ಬೆಳೆ ಮಾತ್ರ ಹಾಳಾಗುತ್ತಿಲ್ಲ, ಎಲೆಕೋಸಿನ ಬೆಳೆಯೂ ಹೀಗೆಯೇ. ಎಲೆಕೋಸನ್ನು ಕೂಡ ಕಡೂರು ತಾಲೂಕಿನ ಹಲವೆಡೆ ಯಥೇಚ್ಛವಾಗಿ ಬೆಳೆಯಲಾಗಿದೆ. ಆದರೆ ಲಾಕ್ಡೌನ್ಹಿನ್ನೆಲೆಯಲ್ಲಿ ಮಾರುಕಟ್ಟೆ ಬಂದ್ ಆಗಿದ್ದು, ಎಲೆಕೋಸನ್ನು ಕೊಂಡುಕೊಳ್ಳುವವರೆ ಇಲ್ಲದಂತಾಗಿದೆ. ಹೀಗಾಗಿ ಮಲ್ಲಿಗೇನಹಳ್ಳಿ ಗ್ರಾಮದ ರೈತ ಚಂದ್ರಪ್ಪ, ಹೊಲದಲ್ಲಿ ಎಲೆಕೋಸು ಬೆಳೆಯನ್ನು ನಾಶ ಮಾಡುತ್ತಿದ್ದಾರೆ.
ಈ ಬೆಳೆಯನ್ನು ಕಟಾವು ಮಾಡಿ, ಮಾರುಕಟ್ಟೆಗೆ ಸಾಗಿಸೋಣ ಎಂದರೆ ಆರಂಭದಲ್ಲಿ ಖರ್ಚು ಮಾಡಿದ್ದು, ಹೋಗಲಿ, ಈಗ ಖರ್ಚು ಮಾಡಿ ಕಟಾವು ಮಾಡಿದ ವೆಚ್ಚ ಕೂಡ ಸಿಗಲ್ಲ. ಸದ್ಯ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಯಾವ ಮೂಲೆಗೂ ಸಾಕಾಗಲ್ಲ, ಸೂಕ್ತ ವೈಜ್ಞಾನಿಕ ಪರಿಹಾರ ಕೊಡಬೇಕು ಎಂದು ಬೆಳೆ ಕಳೆದುಕೊಂಡ ರೈತ ಚಂದ್ರಪ್ಪ ಆಗ್ರಹಿಸಿದ್ದಾರೆ.
ಹಾಗಂತ ಇದು ಕೇವಲ ಶೇಖರಪ್ಪ, ಚಂದ್ರಪ್ಪನಂತಹ ರೈತರ ಕಣ್ಣೀರಿನ ಕಥೆಯಲ್ಲ. ಬದಲಾಗಿ ಇಡೀ ಜಿಲ್ಲೆಯ ರೈತರ ಸಂಕಷ್ಟ ಹೇಳತೀರಾದಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ನಾಶವಾಗಿವೆ. ತರಕಾರಿ, ಹೂವಿನ ಬೆಳೆಯನ್ನು ಕೆಳುವವರು ಇಲ್ಲದಂತಾಗಿದೆ. ಮಾರುಕಟ್ಟೆಗಳು ಕೂಡ ತೆರೆಯದೆ ಇರುವುದು ರೈತರು ಕಣ್ಣೀರು ಸುರಿಸುವಂತಾಗಿದೆ. ಸದ್ಯ ಸರ್ಕಾರ ಹೆಕ್ಟೇರ್ಗೆ 10 ಸಾವಿರ ಎಂದು ಹಣ ಘೋಷಿಸಿದೆ. ಆದರೆ ಈ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಸಾಲಸೋಲ ಮಾಡಿ ಕಳೆದುಕೊಂಡ ಬೆಳೆಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:
ಕೊರೊನಾ ಲಾಕ್ ಡೌನ್ ಹಿನ್ನೆಲೆ ಬೆಲೆ ಸಿಗದೆ ದಪ್ಪ ಮಣಸಿನಕಾಯಿ ಬೆಳೆ ನಾಶ ಮಾಡಿದ ರೈತರು
ಕೊರೊನಾ ಗಾಯದ ಮೇಲೆ ಕೊಳೆ ರೋಗದ ಬರೆ: ಟ್ರಾಕ್ಟರ್ನಿಂದ ಈರುಳ್ಳಿ ಬೆಳೆ ನಾಶ