Personality Test: ಯುವಕರೇ ಸ್ಟೈಲಿಶ್ ಆಗಿ ಕಾಣಲು ಗಡ್ಡ ಬಿಟ್ಟಿದ್ದೀರಾ, ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಎಲ್ಲರಿಗೂ ತಮ್ಮ ವ್ಯಕ್ತಿತ್ವ ತಿಳಿದುಕೊಳ್ಳುವುದೆಂದರೆ ಇಷ್ಟ. ಆದರೆ ಸನ್ನಿವೇಶ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಒಬ್ಬೊಬ್ಬರು ಒಂದೊಂದು ರೀತಿ ವರ್ತನೆ ಹಾಗೂ ನಡವಳಿಕೆ ತೋರ್ಪಡಿಸುತ್ತಾರೆ. ಹೀಗಾಗಿ ವ್ಯಕ್ತಿಯ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಕಣ್ಣು, ಕಿವಿ, ಮೂಗು, ನಾಲಗೆ, ಹುಬ್ಬು, ಕೈ ಬೆರಳುಗಳ ಆಕಾರ, ಮಲಗುವ, ಕುಳಿತುಕೊಳ್ಳುವ ಹಾಗೂ, ನಡೆಯುವ ರೀತಿಯಿಂದಲೂ ವ್ಯಕ್ತಿತ್ವ ಅರಿತುಕೊಳ್ಳಬಹುದು. ಅಷ್ಟೇ ಅಲ್ಲದೇ ಪುರುಷದ ಸೌಂದರ್ಯವನ್ನು ಇಮ್ಮಡಿಗೊಳಿಸುವ ಈ ಗಡ್ಡವು ಕೂಡ ವ್ಯಕ್ತಿತ್ವ ಹೇಳುತ್ತದೆಯಂತೆ. ಗಡ್ಡದ ಆಕಾರ ನೋಡಿ ವ್ಯಕ್ತಿಯ ಗುಣಸ್ವಭಾವ ಹಾಗೂ ವ್ಯಕ್ತಿತ್ವ ಹೇಳಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಗಡ್ಡ (Beard) ಪುರುಷತ್ವದ ಸಂಕೇತ, ಆದರೆ ಮದುವೆಯಾದ ಗಂಡಸರು ಗಡ್ಡ ಬಿಟ್ಟ ಕೂಡಲೇ ಏನಾದ್ರು ಸಿಹಿ ಸುದ್ದಿ ಇದೆಯೇ ಎಂದು ಕಾಲೆಳೆಯುವುದಿದೆ. ಈ ಗಡ್ಡ ಬಿಡುವುದು ಕೂಡ ಟ್ರೆಂಡ್. ಫ್ರೆಂಚ್ , ಚಿನ್‌ಸ್ಟ್ರಿಪ್, ಗೌಟಿ, ಫುಲ್ ಬಿಯರ್ಡ್, ಸೊಲ್‌ಪ್ಯಾಚ್ ಹೀಗೆ ನಾನಾ ರೀತಿಯ ಸ್ಟೈಲ್ (Style) ಗಳಿದ್ದು ಇದು ಪುರುಷರನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ. ಆದರೆ ನಿಮ್ಮ ಗಡ್ಡದ ಆಕಾರವು ವ್ಯಕ್ತಿತ್ವ (Personality) ವನ್ನು ಬಹಿರಂಗ ಪಡಿಸುತ್ತದೆ. ಹಾಗಾದ್ರೆ ನಿಮ್ಮ ಗಡ್ಡ ಯಾವ ಅಕಾರದಲ್ಲಿದೆ ಎಂದು ನೋಡಿ, ಇದು ನಿಗೂಢ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು.
- ಉದ್ದವಾದ ಗಡ್ಡ : ಕೆಲವರು ತುಂಬಾ ಉದ್ದವಾದ ಗಡ್ಡ ಬಿಡುತ್ತಾರೆ. ಈ ವ್ಯಕ್ತಿಗಳು ಎಲ್ಲರ ಮೇಲೆ ಬಲವಾದ ನಂಬಿಕೆ ಹೊಂದಿರುತ್ತಾರೆ. ಹೊರ ನೋಟಕ್ಕೆ ಕಠಿಣವಾಗಿ ಕಾಣಿಸಿದರೂ ಕೂಡ ದಯೆ, ವಿಶ್ವಾಸಾರ್ಹ, ಧೈರ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ. ಶಾಂತ ಸ್ವಭಾವದವರಾದ ಈ ವ್ಯಕ್ತಿಗಳು ಎಲ್ಲರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆಕರ್ಷಣೆಯನ್ನು ಕಾಪಾಡಿಕೊಳ್ಳಲು ಇಷ್ಟಪಡುವ ಪುರುಷರು ಸಾಮಾನ್ಯವಾಗಿ ಗುಂಪಿನಲ್ಲಿ ಎದ್ದು ಕಾಣಲು ಇಷ್ಟಪಡುತ್ತಾರೆ. ಹಾಸ್ಯಮಯ ಪ್ರವೃತ್ತಿಯವರಾಗಿದ್ದು ಜೋರಾದ ನಗುವಿನ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.
- ಗ್ವಾಯೆಟೆ ಗಡ್ಡ : ಈ ರೀತಿ ಗಡ್ಡ ಬಿಟ್ಟಾಗ ಸ್ವಲ್ಪ ಕುರಿಗೆ ಗಡ್ಡ ಬಂದಂತೆ ಕಾಣುವುದರಿಂದ ಇದನ್ನು ಗ್ವಾಯೆಟೆ ಗಡ್ಡವೆಂದು ಕರೆಯುತ್ತಾರೆ. ಈ ರೀತಿ ಗಡ್ಡದ ಆಕಾರ ಹೊಂದಿರುವ ವ್ಯಕ್ತಿಗಳು ಸಮರ್ಥ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಹಳೆಯ ಮೌಲ್ಯಗಳು ಮತ್ತು ನಂಬಿಕೆಗಳಲ್ಲಿ ಬೇರೂರಿರುತ್ತಾರೆ. ಬದ್ಧತೆಗಳನ್ನು ಉಳಿಸಿಕೊಳ್ಳುವಲ್ಲಿ ಹಾಗೂ ದೀರ್ಘಕಾಲೀನ ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಶ್ರಮಿಸುತ್ತಾರೆ. ತಮ್ಮ ಕುಟುಂಬಕ್ಕೆ ಹಾಗೂ ಪ್ರೀತಿಪಾತ್ರರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ತಮ್ಮ ಭಾವನೆಗಳನ್ನು ನೇರವಾಗಿ ವ್ಯಕ್ತಪಡಿಸುವ ಗುಣ ಇವರಲ್ಲಿರುತ್ತದೆ. ತನ್ನ ಸಂಗಾತಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.
- ಸ್ಟಬಲ್ ಗಡ್ಡ : ಗಡ್ಡದ ಆಕಾರ ಈ ರೀತಿಯಾಗಿದ್ದರೆ ಕ್ರೀಡಾ ಚಟುವಟಿಕೆ ಆನಂದಿಸುವುದು, ಸಾಹಸಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೆಂದರೆ ಇವರಿಗೆ ತುಂಬಾನೇ ಇಷ್ಟ. ಹೆಚ್ಚು ಪ್ರಬುದ್ಧರಾಗಿದ್ದು ನಿರ್ಧಾರ ತೆಗೆದುಕೊಳ್ಳುವಾಗ ನೂರು ಬಾರಿ ಯೋಚಿಸುತ್ತಾರೆ. ಕೆಲವೊಮ್ಮೆ ಹಾಸ್ಯಪ್ರವೃತ್ತಿಯಿಂದ ಎಲ್ಲರಿಗೂ ಹತ್ತಿರವಾಗುತ್ತಾರೆ. ವಿಮರ್ಶಕರಾಗಿದ್ದು ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಯೋಚಿಸಿ ಮುಂದಿನ ಹೆಜ್ಜೆ ಇಡುತ್ತಾರೆ. ತಮ್ಮ ಕೆಲಸ ಕಾರ್ಯಗಳನ್ನು ತಾವು ಅಂದುಕೊಂಡ ಸಮಯದೊಳಗೆ ಮುಗಿಸಿ ಬಿಡುತ್ತಾರೆ. ಹೀಗಾಗಿ ಇವರನ್ನು ಕಠಿಣ ಪರಿಶ್ರಮಿಗಳೆನ್ನಬಹುದು.
- ಫ್ರೆಂಚ್ ಗಡ್ಡ : ಪ್ರೆಂಚ್ ಗಡ್ಡ ಬಿಟ್ಟಿರುವ ವ್ಯಕ್ತಿಗಳು ಸಂಘಟಿತ, ಆತ್ಮವಿಶ್ವಾಸವುಳ್ಳ ವ್ಯಕ್ತಿಗಳು. ವಿಷಯಗಳನ್ನು ನಿರ್ವಹಿಸುವಲ್ಲಿ ಪ್ರಬುದ್ಧವಾಗಿರುತ್ತಾರೆ. ಸಮಸ್ಯೆಗಳನ್ನು ನಿಭಾಯಿಸುವ ರೀತಿಯಿಂದ ಇವರನ್ನು ಬುದ್ಧಿವಂತರು ಹಾಗೂ ಪ್ರಬುದ್ಧರು ಎನ್ನಬಹುದು. ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ಸದಾ ಸುರಕ್ಷಿತವಾಗಿರಲು ಬಯಸುತ್ತಾರೆ. ಹೀಗಾಗಿ ಸುರಕ್ಷಿತ ವಾತಾವರಣವನ್ನು ನಿರ್ಮಿಸಿಕೊಳ್ಳುತ್ತಾರೆ. ತಾವು ಏನು ಮಾಡುತ್ತಿದ್ದೇವೆ, ಮಾಡುವ ಕೆಲಸದಿಂದ ಏನಾಗಬಹುದು ಎನ್ನುವುದನ್ನು ನಿಖರವಾಗಿ ತಿಳಿದಿರುತ್ತಾರೆ. ಎಲ್ಲಾ ಸನ್ನಿವೇಶವನ್ನು ಲೆಕ್ಕಾಚಾರ ಹಾಕಿ ನಿರ್ವಹಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ