- Kannada News Photo gallery Reels to Record Book: a Raichur girl wrote National Anthem in Rice Grain in kannada
ರೀಲ್ಸ್ ಹುಚ್ಚು ಬಿಟ್ಟು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ರಾಯಚೂರಿನ ಯುವತಿ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹುಲಿಗುಡ್ಡ ಗ್ರಾಮದ ಐಶ್ವರ್ಯಾ ಎಂಬ ಯುವತಿ, 133 ಅಕ್ಕಿ ಕಾಳುಗಳ ಮೇಲೆ ರಾಷ್ಟ್ರಗೀತೆಯನ್ನು ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾಳೆ. ಬುಲೆಟ್ ಏರಿ ರೀಲ್ಸ್ ಮಾಡಿದ್ದಕ್ಕೆ ಮನೆಯವರು ಬುದ್ಧಿವಾದ ಹೇಳಿದ್ದರು. ಈ ವೇಳೆ ಏನಾದರೂ ಸಾಧಿಸುವ ಛಲ ಹೊಂದಿದ್ದ ಯುವತಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಿರ್ಮಿಸಿದ್ದಾರೆ.
Updated on:Mar 28, 2025 | 8:03 AM

ಯೂತ್ಗೆ ಟ್ರೆಂಡ್ ಆಗಿರುವ ರೀಲ್ಸ್ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ. ಬುಲೆಟ್ ಬೈಕ್ ಏರಿ ರೀಲ್ಸ್ ಮಾಡುತ್ತಿದ್ದ ಯುವತಿಗೆ ಮನೆಯವರು ಬೈದು ಬುದ್ದಿ ಹೇಳಿದ್ದರು. ಮನೆಯವರು ಬೈದ್ರು ಅಂತ ಅದೆಷ್ಟೋ ಜನ ಜೀವ ಕಳೆದುಕೊಂಡಿರುವ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಆದರೆ ಈ ಬಾಲೆ ಮಾಡಿದ್ದೇ ಬೇರೆ.

ಅಕ್ಕಿ ಕಾಳಿನಲ್ಲಿ ಹೀಗೂ ಅಕ್ಷರಗಳನ್ನು ಮುದ್ರಿಸಬಹುದು ಅಂತ ತೋರಿಸಿಕೊಟ್ಟಿದ್ದು ಐಶ್ವರ್ಯ. ಅಕ್ಕಿ ಕಾಳುಗಳ ಮೇಲೆ ರಾಷ್ಟ್ರ ಗೀತೆ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹುಲಿಗುಡ್ಡ ಗ್ರಾಮದ ಐಶ್ವರ್ಯಾ ಲಿಂಗಸುಗೂರಿನ ಖಾಸಗಿ ಕಾಲೇಜಿನಲ್ಲಿ ಬಿಎಡ್ ಓದುತ್ತಿದ್ದಾಳೆ.

ಓದಿನಲ್ಲಿ ಜಾಣೆಯಾಗಿರುವ ಐಶ್ವರ್ಯಾಗೆ ರೀಲ್ಸ್ ಮಾಡೋದು ಅಂದ್ರೆ ಎಲ್ಲಿಲ್ಲದ ಹುಚ್ಚು. ತಂದೆ ಮುನಿಸ್ವಾಮಿ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ಹೋಟೆಲ್ನಲ್ಲಿ ರೊಟ್ಟಿ ಮಾಡುತ್ತಾರೆ. ಹೀಗೆ ಮನೆಯಲ್ಲಿ ಕಷ್ಟವಿದ್ದರೂ ಬಿಎಡ್ ಓದಿ ಶಿಕ್ಷಕಿಯಾಗುವ ಕನಸು ಕಾಣ್ತಿದ್ದಾಳೆ ಈಕೆ.

ಬುಲೆಟ್ ಏರಿ ರೀಲ್ಸ್ ಮಾಡಿದ್ದಕ್ಕೆ ಮನೆಯವರು ಬುದ್ಧಿವಾದ ಹೇಳಿ, ಏನಾದರೂ ಸಾಧನೆ ಮಾಡು ಅಂದಿದ್ರಂತೆ. ಇದನ್ನೇ ಛಲವಾಗಿ ಸ್ವೀಕರಿಸಿದ ಐಶ್ವರ್ಯಾ ಅಕ್ಕಿ ಕಾಳುಗಳ ಮೇಲೆ ರಾಷ್ಟ್ರ ಗೀತೆ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ.

ಐಶ್ವರ್ಯಾ ಜಸ್ಟ್ 32 ನಿಮಿಷ 20 ಸೆಕೆಂಡ್ಗಳಲ್ಲಿ 133 ಅಕ್ಕಿ ಕಾಳುಗಳಲ್ಲಿ ರಾಷ್ಟ್ರ ಗೀತೆ ಬರೆದಿದ್ದಾಳೆ. ಇನ್ಸ್ಟಾಗ್ರಾಮ್ನಲ್ಲಿ ವಿವಿಧ ಮಾದರಿಯ ಸಾಧನೆಗಳನ್ನ ಹುಡುಕಾಡಿ ತಾನೂ ಹೊಸದಾಗಿ ಸಾಧನೆ ಮಾಡಬೇಕು ಅಂತ 133 ಅಕ್ಕಿ ಕಾಳುಗಳಲ್ಲಿ ರಾಷ್ಟ್ರ ಗೀತೆ ಬರೆಯುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಪುಟ ಸೇರಿದ್ದಾಳೆ.

ರೀಲ್ಸ್ಗೆ ಅಡಿಕ್ಟ್ ಆಗಿ ಟೈಂ ವೇಸ್ಟ್ ಮಾಡುವ ಯುವಜನತೆ ನಡುವೆ, ಅದೇ ರೀಲ್ಸ್ಗಳಿಂದ ಪ್ರಭಾವಿತಳಾದ ಐಶ್ವರ್ಯಾ ಪೋಷಕರು, ಊರ ಜನರು ಮೆಚ್ಚುವಂತಾ ಸಾಧನೆ ಮಾಡಿದ್ದಾಳೆ.
Published On - 8:02 am, Fri, 28 March 25



















