ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಶಾಕ್: ಸುಪ್ರೀಂ ಮೆಟ್ಟಿಲೇರಲು ಕೈಗಾರಿಕೋದ್ಯಮಿಗಳ ನಿರ್ಧಾರ
ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳು ವಿಲ ವಿಲ ಒದ್ದಾಡುವಂತಾಗಿದೆ. ಪವರ್ ಸ್ಟ್ರೋಕ್ನಿಂದ ಕೈಗಾರಿಕೆಗಳು ತತ್ತರಿಸಿವೆ. ಪಿಂಚಣಿ, ಗ್ರಾಚ್ಯುಟಿ ಹೆಸರಿನಲ್ಲಿ ಇಂಧನ ಇಲಾಖೆ ದರ ಹೆಚ್ಚಳ ಮಾಡಿರುವ ಬಗ್ಗೆ ಅಸಮಾಧಾನ ಸ್ಫೋಟಗೊಂಡಿದೆ. ದರ ಏರಿಕೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೈಗಾರಿಕೋದ್ಯಮಿಗಳು ನಿರ್ಧರಿಸಿದ್ದಾರೆ.

ಬೆಂಗಳೂರು, ಮಾರ್ಚ್ 28: ವಿದ್ಯುತ್ ದರ ಹೆಚ್ಚಳದಿಂದ (Electricity Price Hike) ಜನ ಮಾತ್ರವಲ್ಲ, ಈಗ ಬೆಂಗಳೂರಿನ ಕೈಗಾರಿಕೆಗಳು ಕೂಡ ಕಂಗಲಾಗಿವೆ. ಪಿಂಚಣಿ ಹಾಗೂ ಗ್ರಾಚ್ಯುಟಿಗಾಗಿ ದರ ಏರಿಕೆ ಮಾಡಿದ್ದ ಇಂಧನ ಇಲಾಖೆ, ಈಗ ಮತ್ತೆ ವಾರ್ಷಿಕ ದರ ಏರಿಕೆಗೂ ಸಜ್ಜಾಗಿದೆ. ಇದರ ಪರಿಣಾಮವಾಗಿ ಕೈಗಾರಕೆಗಳು ಸಿಬ್ಬಂದಿಗೆ ಕೋಕ್ ಕೊಡುವ ಪರಿಸ್ಥಿತಿ ಉದ್ಭವಿಸಿದೆ ಎಂದು ಕೈಗಾರಿಕೋದ್ಯಮಿಗಳು (Industrialists) ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಅನೇಕ ಕೈಗಾರಿಕೆಗಳು ಅನ್ಯ ರಾಜ್ಯಕ್ಕೆ ವಲಸೆ ಹೋಗಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಬಹುತೇಕ ಕೈಗಾರಿಕೆಗಳು ವಲಸೆ ಹೋಗಲಿವೆ ಎಂದು ಕೈಗಾರಿಕೋದ್ಯಮಿಗಳು ಹೇಳಿದ್ದಾರೆ. ಪಿಂಚಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಗೆ ದರ ಏರಿಕೆ ಮಾಡಿದ್ದು, ಕೈಗಾರಿಕೋದ್ಯಮಿಗಳ ಸಿಟ್ಟಿಗೆ ಕಾರಣವಾಗಿದೆ. ಹೀಗಾಗಿ ಈ ಅವೈಜ್ಞಾನಿಕ ನೀತಿಯನ್ನು ಸುಪ್ರೀಂ ಕೋರ್ಟ್ನಲ್ಲಿ (Supreme Court) ಪ್ರಶ್ನೆ ಮಾಡಲಿದ್ದೇವೆ ಎಂದು ಕೈಗಾರಿಕೋದ್ಯಮಿಗಳು ಹೇಳಿದ್ದಾರೆ. ಈ ಬಗ್ಗೆ ಎಫ್ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.
ದರ ಏರಿಕೆಯ ಬಾಣಲೆಯಲ್ಲಿ ಜನರ ಜೊತೆ ಈಗ ಕೈಗಾರಿಕೆಗಳು ಕೂಡ ಬೆಂದು ಹೋಗಿದೆ. ರಾಜ್ಯದಲ್ಲಿ 5.54 ಲಕ್ಷ ಎಂಎಸ್ಎಂಇ ಗಳಿವೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ವಾರ್ಷಿಕವಾಗಿ 13110 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ ಮಾಡುತ್ತದೆ. ಇಷ್ಟು ದಿನ ಇದರ ವೆಚ್ಚ 13,110 ಕೋಟಿ ರೂಪಾಯಿ ಆಗ್ತಿತ್ತು. ಆದರೆ ಸದ್ಯ 0.36 ಪೈಸೆ ವಿದ್ಯುತ್ ದರ ಹೆಚ್ಚಳದಿಂದ ವಾರ್ಷಿಕವಾಗಿ 1200 ಕೋಟಿ ರೂ ಹೆಚ್ಚುವರಿ ಹೊರೆಯಾಗಿದೆ ಎಂದು ಪೀಣ್ಯ ಕೈಗಾರಿಕಾ ಪ್ರದೇಶ ಅಧ್ಯಕ್ಷ ಆರ್. ಶಿವಕುಮಾರ್ ಹೇಳಿದ್ದಾರೆ.
ವಿದ್ಯುತ್ ದರ ಹೆಚ್ಚಳ ಬಗ್ಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮಾರ್ಚ್ 27ರಂದು ಅಧಿಕೃತ ಆದೇಶ ಹೊರಡಿಸಿದೆ. ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ವಿದ್ಯುತ್ ದರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ. ಮುಂದಿನ ಮೂರು ವರ್ಷಗಳಿಗೆ ದರ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ವಿದ್ಯುತ್ ದರ ಹೆಚ್ಚಳ..ಯೂನಿಟ್‌ಗೆ ಎಷ್ಟು ಗೊತ್ತಾ?
ಒಟ್ಟಿನಲ್ಲಿ ವಿದ್ಯುತ್ ದರ ಎರೆಡೆರಡು ಬಾರಿ ಏರಿಕೆಯಾಗಿ ಜನರಿಗೆ ಭರ್ಜರಿ ಶಾಕ್ ಕೊಟ್ಟಿದ್ದರೆ, ಅತ್ತ ಕೈಗಾರಿಕೋದ್ಯಮ ಸದ್ಯ ತತ್ತರಿಸಿ ಹೋಗಿದೆ. ಇಂಧನ ಇಲಾಖೆ ಏನಾದರೂ ದರ ಕಡಿಮೆ ಮಾಡುತ್ತಾ ಎಂದು ಕಾದು ನೋಡಬೇಕಿದೆ.