ಬೆಂಗಳೂರು: ಫ್ಲೈಓವರ್ಗಳಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ, ವ್ಹೀಲಿಂಗ್ ತಡೆಗೆ ಪೊಲೀಸರ ಕ್ರಮ
ಬೆಂಗಳೂರಿನಲ್ಲಿ ಯುವಕರ ವ್ಹೀಲಿಂಗ್‌ನಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವುದರಿಂದ, ರಾತ್ರಿ 11 ರಿಂದ ಬೆಳಗ್ಗೆ 6 ರವರೆಗೆ ಎಲ್ಲಾ ಮೇಲ್ಸೇತುವೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಮತ್ತೊಂದೆಡೆ, ಪಬ್ಲಿಕ್ ಐ ಅಪ್ಲಿಕೇಶನ್ ಬದಲಿಗೆ ಅಸ್ತ್ರಂ ಅಪ್ಲಿಕೇಶನ್ ಬಳಸಿ ಟ್ರಾಫಿಕ್ ನಿಯಮ ಉಲ್ಲಂಘನೆ ವರದಿ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಯುಗಾದಿ ಮತ್ತು ರಂಜಾನ್ ಹಬ್ಬದಿಂದಾಗಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದ್ದು, ಆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಎಲ್ಲ ವಿವರಗಳು ಇಲ್ಲಿವೆ.

ಬೆಂಗಳೂರು, ಮಾರ್ಚ್ 28: ಬೆಂಗಳೂರಿನಲ್ಲಿ (Bangalore) ವ್ಹೀಲಿಂಗ್ (Wheeling) ಮಾಡಿ ಯುವಕರು ಪುಂಡಾಟ ಮೆರೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಟ್ರಾಫಿಕ್ ಪೊಲೀಸರು (Bangalore Traffic Police) ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಬೆಂಗಳೂರು ನಗರದಾದ್ಯಂತ ಮೇಲ್ಸೇತುವೆಗಳಲ್ಲಿ (Bangalore Flyovers) ರಾತ್ರಿ 11 ರಿಂದ ಬೆಳಿಗ್ಗೆ 6 ವರೆಗೆ ಸಂಚಾರ ನಿಷೇಧಿಸಿದ್ದಾರೆ. ಕೆಆರ್ ಮಾರುಕಟ್ಟೆ, ಶಾಂತಿನಗರ ಡಬಲ್ ರೋಡ್ ಫ್ಲೈಓವರ್ ಸೇರಿದಂತೆ ನಗರದ ಎಲ್ಲ ಪ್ರಮುಖ ಮೇಲ್ಸೇತುವೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಸಂಚಾರಕ್ಕೆ ತಡೆಯೊಡ್ಡುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.
ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಪುಂಡರು ವ್ಹೀಲಿಂಗ್ ನಡೆಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಖುದ್ದು ಗೃಹ ಸಚಿವ ಪರಮೇಶ್ವರ್ ಅವರೇ ಆ ಬಗ್ಗೆ ಪ್ರತಿಕ್ರಿಯಿಸಿ, ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಸಾಲು ರಜೆ ಹಿನ್ನೆಲೆ ಟ್ರಾಫಿಕ್ ಜಾಮ್ ಸಾಧ್ಯತೆ
ವಾರಾಂತ್ಯ ಹಾಗೂ ಮೂರು ರಜೆ ಒಟ್ಟಿಗೆ ಬಂದಿರುವುದರಿಂದ ಶುಕ್ರವಾರ ವಿವಿಧ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ ಇದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ಸಂಭಾವ್ಯ ಸಂಚಾರ ದಟ್ಟಣೆ ಪ್ರದೇಶಗಳ ಬಗ್ಗೆ ಎಕ್ಸ್ ಮೂಲಕ ಮಾಹಿತಿ ನೀಡಿದ್ದು, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಮನವಿ ಮಾಡಿದ್ದಾರೆ.
ಯುಗಾದಿ ಮತ್ತು ರಂಜಾನ್ ಹಬ್ಬವಿರುವುದರಿಂದ ಹಾಗೂ ವಾರಾಂತ್ಯವಿರುವುದರಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಹೆಚ್ಚಿನ ವಾಹನಗಳಲ್ಲಿ ಸಾರ್ವಜನಿಕರು ಹೋಗುವುದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು ಸಾರ್ವಜನಿಕ ಸಹಕರಿಸಲು ಕೋರಿದೆ ಎಂದು ಎಕ್ಸ್ ಸಂದೇಶದಲ್ಲಿ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
ಟ್ರಾಫಿಕ್ ಪೊಲೀಸ್ ಸಂದೇಶ
ಸಂಚಾರ ಸಲಹೆ
ಯುಗಾದಿ ಮತ್ತು ರಂಜಾನ್ ಹಬ್ಬವಿರುವುದರಿಂದ ಹಾಗೂ ವಾರಾಂತ್ಯವಿರುವುದರಿಂದ ಹೊರ ಜಿಲ್ಲೆ & ಹೊರ ರಾಜ್ಯಗಳಿಗೆ ಹೆಚ್ಚಿನ ವಾಹನಗಳಲ್ಲಿ ಸಾರ್ವಜನಿಕರು ಹೋಗುವುದರಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು ಸಾರ್ವಜನಿಕ ಸಹಕರಿಸಲು ಕೋರಿದೆ pic.twitter.com/HhyIqDhP90
— K.R.PURA TRAFFIC POLICE.BENGALURU. (@KRPURATRAFFIC) March 27, 2025
ಪಬ್ಲಿಕ್ ಐ ಬದಲು ಅಸ್ತ್ರಂ ಬಳಸಿ: ಸಂಚಾರ ಪೊಲೀಸ್ ಮನವಿ
ನಿಯಮ ಉಲ್ಲಂಘನೆಗಳನ್ನು ದಾಖಲು ಮಾಡಲು ಸಾರ್ವಜನಿಕರಿಗೆ ಅನುಕೂಲವಾಗುಂತೆ ಈ ಹಿಂದೆ ಬಳಸಲಾಗುತ್ತಿದ್ದ ಪಬ್ಲಿಕ್ ಐ (PublicEye) ಆ್ಯಪ್ ಅನ್ನು ಈಗ ಬಳಸಲಾಗುತ್ತಿಲ್ಲ. ಅದರ ಬದಲಿಗೆ ಅಸ್ತ್ರಂ ಆ್ಯಪ್ ಬಳಸಬೇಕು ಎಂದು ಸಂಚಾರ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಪಬ್ಲಿಕ್ ಐ ಆ್ಯಪ್ನ ಮೇಲ್ವಿಚಾರಣೆಯನ್ನು ಬೆಂಗಳೂರು ಸಂಚಾರ ವಿಭಾಗವು ಈಗ ನಿರ್ವಹಿಸುತ್ತಿಲ್ಲ. ಆದ್ದರಿಂದ, ಈ ಅಪ್ಲಿಕೇಶನ್ ನ ಬಳಕೆಯನ್ನು ತೆಗೆದುಹಾಕಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಸಂಚಾರ ಉಲ್ಲಂಘನೆಗಳನ್ನು ವರದಿ ಮಾಡುವ ಸಲುವಾಗಿ ಹೊಸದಾಗಿ ಅಭಿವೃದ್ಧಿಪಡಿಸಲಾದ BTP-ASTraM ಬಳಸಬಹುದಾಗಿದೆ. ಸಂಚಾರ ಉಲ್ಲಂಘನೆಗಳನ್ನು ವರದಿ ಮಾಡಲು, ನೈಜ-ಸಮಯದ ಟ್ರಾಫಿಕ್ ಅಪ್‌ಡೇಟ್‌ಗಳನ್ನು ಹಾಗೂ ದಂಡ ಪಾವತಿ ಆಯ್ಕೆಗಳನ್ನು ಪಡೆಯಲು, Google Play Store ಮತ್ತು App Store ಎರಡರಲ್ಲೂ ಲಭ್ಯವಿರುವ BTP ASTraM ಅಪ್ಲಿಕೇಶನನ್ನು ಡೌನ್‌ಲೋಡ್ ಮಾಡಿಕೊಂಡು ನಿಯಮ ಉಲ್ಲಂಘನೆಗಳನ್ನು ದಾಖಲು ಮಾಡಬಹುದಾಗಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆ, ಮೆಟ್ರೋ ಕಾಮಗಾರಿ ಕಾರಣ ಬೆಂಗಳೂರಿನ ಹಲವೆಡೆ ಸಂಚಾರ ದಟ್ಟಣೆ
ಈ ಹೊಸ ವೇದಿಕೆಯನ್ನು ಬಳಸುವುದರ ಮೂಲಕ ಸಾರ್ವಜನಿಕರು, ಸಂಚಾರ ವಿಭಾಗದಿಂದ ಕೈಗೊಂಡಿರುವ ಈ ಉಪಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಕೋರಲಾಗಿದೆ ಎಂದು ಎಕ್ಸ್ ಸಂದೇಶದಲ್ಲಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:19 am, Fri, 28 March 25