Nandini Milk Price: ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬರೆ: ನಂದಿನಿ ಹಾಲು ಮತ್ತಷ್ಟು ದುಬಾರಿ, ಎಷ್ಟು ಗೊತ್ತಾ?
Nandini Milk Price Hiked: ಕರ್ನಾಟಕದ ಹೆಮ್ಮೆಯ ನಂದಿನಿ ಹಾಲಿನ ದರ ಹೆಚ್ಚಿಸಿ ವರ್ಷ ಕಳೆದೇ ಇಲ್ಲ. ಆಗಲೇ ದರ ಏರಿಕೆಗೆ ಪ್ರಸ್ತಾಪ ಬಂದಿತ್ತು. ಕೆಎಂಎಫ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಲಿ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸರಿಲಿಲ್ಲ. ಆದ್ರೆ, ಇದೀಗ ನಂದಿನ ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬರೆ ಬೀಳುವುದು ಖಾತರಿಯಾಗಿದೆ. ಹಾಗಾದ್ರೆ, ಈ ಬಾರಿ ಹಾಲಿನ ದರ ಏರಿಕೆ ಮಾಡಿದ್ದಾರೆ ಎನ್ನುವ ವಿವರ ಇಲ್ಲಿದೆ.

ವೆಂಗಳೂರು, (ಮಾರ್ಚ್ 27): ಗ್ರಾಹಕರಿಗೆ ಮತ್ತೆ ನಂದಿನ ಹಾಲಿನ ಬೆಲೆ(Nandini Milk Price) ಏರಿಕೆ ಬಿಸಿ ತಟ್ಟಿದೆ. ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆ ಮಾಡಲು ಸಚಿವ ಸಂಪುಟ(Siddarmaiah Cabinet) ಅನುಮೋದನೆ ನೀಡಿದೆ. ಇಂದು (ಮಾರ್ಚ್ 27) ನಡೆದ ಸಚಿವ ಸಂಪುಟದಲ್ಲಿ ಹಾಲು ಒಕ್ಕೂಟಗಳ ಮನವಿಯನ್ನು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಒಂದೇ ವರ್ಷದಲ್ಲಿ ಎರಡು ಬಾರಿಗೆ ಹಾಲಿನದ ಏರಿಕೆ ಮಾಡಿದಂತಾಗಿದೆ. ಇದೇ ಫೆಬ್ರವರಿಯಲ್ಲಿ ಪ್ರತಿ ಲೀಟರ್‌ಗೆ 2 ರೂ ಏರಿಕೆ ಮಾಡಲಾಗಿತ್ತು. ಆದ್ರೆ, ಇದೀಗ ಲೀಟರ್‌ಗೆ ಬರೋಬ್ಬರಿ ನಾಲ್ಕು ರೂಪಾಯಿ ಏರಿಕೆ ಮಾಡಲಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆ ದೊಡ್ಡ ಹೊರೆಯಾದಂತಾಗಿದೆ.
ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ ನಿರಂತವಾಗಿ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್ ಹಾಲಿನ ದರ 5ರೂ. ಹೆಚ್ಚಳ ಮಾಡಬೇಕೆಂದು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಆದ್ರೆ ಇದೀಗ ಸಚಿವ ಸಂಪುಟ ನಾಲ್ಕು ರೂ ಏರಿಕೆಗೆ ಒಪ್ಪಿಗೆ ನೀಡಿದೆ. ಇದೇ ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿ ಬರಲಿದೆ.
ಇದನ್ನೂ ಓದಿ: ಹಾಲು ಉತ್ಪಾದಕರ 656 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ ಸರ್ಕಾರ
ದರ ಏರಿಕೆ ವಿವರ ಇಲ್ಲಿದೆ
- ಹೋಮೋಜಿನೆಸ್ಟ್ ಟೋನ್ಡ್ ಹಾಲು :ರಾಜ್ಯದಲ್ಲಿ ಸದ್ಯ ಹೋಮೋಜಿನೆಸ್ಟ್ ಟೋನ್ಡ್ ಹಾಲು ಅರ್ಧ ಲೀಟರ್ 24 ರೂಪಾಯಿ ಇದ್ರೆ, ಇದೇ ಹಾಲು ಒಂದು ಲೀಟರ್ 45 ರೂಪಾಯಿ ಇದೆ. ಈಗ ಹೊಸ ದರ ಜಾರಿಗೆ ಬಂದ್ರೆ ಅರ್ಧ ಲೀಟರ್ 26 ಮತ್ತು ಒಂದು ಲೀಟರ್ ಹಾಲು 49 ರೂಪಾಯಿ ಆಗಲಿದೆ.
- ನೀಲಿ ಪ್ಯಾಕೆಟ್ ಹಾಲು – 44 ರೂ.ದಿಂದ 48 ರೂ. ಏರಿಕೆ(ಪ್ರತಿ ಲೀಟರ್‌ಗೆ).
- ಆರೆಂಜ್ ಪ್ಯಾಕೆಟ್ ಹಾಲು – 54 ರೂ. ನಿಂದ 58 ರೂ.
- ಸಮೃದ್ಧಿ ಹಾಲಿನ ಪ್ಯಾಕೆಟ್: 56 ರೂ. ನಿಂದ 60 ರೂ.
- ಗ್ರೀನ್ ಸ್ಪೇಷಲ್ ಹಾಲು: 54 ರೂ. ನಿಂದ 58 ರೂ.
- ನಾರ್ಮಲ್ ಗ್ರೀನ್ ಹಾಲು: 52 ರೂ. ನಿಂದ 56 ರೂ.
5 ರೂ. ಹೆಚ್ಚಿಸುವಂತೆ ಮನವಿ ಮಾಡಿದ್ದ ಒಕ್ಕೂಟಗಳು
ಕೆಎಂಎಫ್ ಹಾಗೂ ಅದರ ಸದಸ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಿಸುವಂತೆ ಹಲವು ತಿಂಗಳಿಂದ ಸರಕಾರಕ್ಕೆ ಒತ್ತಾಯಿಸುತ್ತಿವೆ. ಮತ್ತೊಂದೆಡೆ ರೈತರು ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿ ಎದುರು ಇತ್ತೀಚೆಗೆ ಪ್ರತಿಭಟನೆ ಮಾಡಿ ಹಾಲಿನ ದರ ಹೆಚ್ಚಿಸುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಕೆಎಂಎಫ್ ಹಾಗೂ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಪ್ರತಿನಿಧಿಗಳು ಸಭೆ ನಡೆಸಿ ಹಾಲಿನ ದರ ಪ್ರತಿ ಲೀಟರ್‌ಗೆ 5 ರೂ. ಹೆಚ್ಚಿಸುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಿದ್ದರು. ಈ ನಿರ್ಧಾರದಂತೆ ಹಾಲಿನ ದರವನ್ನು ಲೀಟರ್‌ಗೆ 5 ರೂ. ಹೆಚ್ಚಳ ಮಾಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು.
ಹೈನುಗಾರಿಕೆಯ ಖರ್ಚು ವೆಚ್ಚಗಳ ಹೆಚ್ಚಳದಿಂದಾಗಿ ಹಾಲಿನ ಬೆಲೆ ಏರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಲಿನ ದರ ಹೆಚ್ಚಿಸದಿದ್ದರೆ ಜಿಲ್ಲಾ ಹಾಲು ಒಕ್ಕೂಟಗಳು ನಷ್ಟ ಅನುಭವಿಸಬೇಕಾಗುತ್ತದೆ. ಮತ್ತೊಂದೆಡೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇತರೆ ಬ್ರ್ಯಾಂಡ್‌ಗಳ ಹಾಲಿನ ದರಕ್ಕೆ ಹೋಲಿಸಿದರೆ ರಾಜ್ಯದ ನಂದಿನಿ ಹಾಲಿನ ಬೆಲೆ ತುಂಬಾ ಕಡಿಮೆಯಿದೆ ಎಂದು ಪ್ರಸ್ತಾವದಲ್ಲಿ ಉಲ್ಲೇಸಲಾಗಿತ್ತು.
ದರ ಏರಿಕೆ ಸಚಿವ ಸಂಪುಟಕ್ಕೆ ಬಿಟ್ಟಿದ್ದ ಸಿಎಂ
ರೈತರು ಹಾಗೂ ಹಾಲು ಒಕ್ಕೂಟಗಳ ಒತ್ತಡದಿಂದ ನಂದಿನಿ ಉತ್ಪನ್ನಗಳ ದರ ಏರಿಕೆಯ ಪ್ರಸ್ತಾಪ ಕೇಳಿಬಂದಿತ್ತು. ಅಧಿವೇಶನ ಮುಗಿಯುತ್ತಿದ್ದಂತೆಯೇ ದರ ಏರಿಕೆ ಆಗಲಿದೆ ಎಂಬೆಲ್ಲಾ ಮಾತುಗಳು ಹರಿದಾಡಿದ್ದವು. ಇದರ ಮಧ್ಯ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿರಲಿಲ್ಲ. ಬದಲಿಗೆ ದರ ಹೆಚ್ಚಳದ ಸಾಧಕ, ಭಾದಕಗಳ ಬಗ್ಗೆ ಚರ್ಚೆ ನಡೆದಿದ್ದು, ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಸಿಎಂ ಹೇಳಿದ್ದರು. ಆದ್ರೆ, ಸಭೆ ಬಳಿಕ ಮಾತನಾಡಿದ್ದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ದರ ಏರಿಕೆಯ ಶಾಕ್ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಸಚಿವ ಸಂಪುಟ ನಂದಿನ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ.
2023ರ ಆಗಸ್ಟ್‌ನಲ್ಲಿ ಹಾಲಿನ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಲಾಗಿತ್ತು. ಆಗ ದರ ಪರಿಷ್ಕರಣೆಯೊಂದಿಗೆ ಹಾಲಿನ ದರವು ಲೀಟರ್‌ಗೆ 39 ರೂ.ನಿಂದ 42 ರೂ.ಗೆ ಏರಿಕೆಯಾಗಿತ್ತು. ಬಳಿಕ ರಾಜ್ಯದಲ್ಲಿ ಹಾಲು ಸಂಗ್ರಹಣೆಯು ದಾಖಲೆ ಪ್ರಮಾಣದಲ್ಲಿಏರಿಕೆಯಾಗಿದ್ದ ಕಾರಣಕ್ಕೆ ಕೆಎಂಎಫ್, 2024ರ ಜೂನ್ 26ರಿಂದ ಅನ್ವಯವಾಗುವಂತೆ ಹಾಲಿನ ದರ ಪರಿಷ್ಕರಣೆಯೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ಹಾಲು ವಿತರಿಸಲು ಆರಂಭಿಸಿತ್ತು. ನಂದಿನಿ ಬ್ರ್ಯಾಂಡ್‌ನ ಎಲ್ಲಾ ಮಾದರಿಯ ಹಾಲಿನ ದರದಲ್ಲಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿತ್ತು. ಗ್ರಾಹಕರು ಕೊಡುವ 2 ರೂ. ಹೆಚ್ಚುವರಿ ಹಣಕ್ಕೆ ಪ್ರತಿಯಾಗಿ 50 ಎಂಎಲ್ ಹೆಚ್ಚುವರಿ ಹಾಲು ನೀಡಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Thu, 27 March 25