ಹಾಲು ಉತ್ಪಾದಕರ 656 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ ಸರ್ಕಾರ
ಕರ್ನಾಟಕ ಸರ್ಕಾರವು ಹಾಲು ಉತ್ಪಾದಕರಿಗೆ 656.07 ಕೋಟಿ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆ ಆಗದಿರುವುದು ಇದಕ್ಕೆ ಕಾರಣ ಎಂದು ಪಶುಸಂಗೋಪನಾ ಸಚಿವರು ವಿಧಾನ ಪರಿಷತ್ಗೆ ತಿಳಿಸಿದ್ದಾರೆ. ಹಾಲಿನ ದರ ಹೆಚ್ಚಳದ ಬೇಡಿಕೆಯೂ ಇದೆ ಎಂದು ಅವರು ಹೇಳಿದ್ದು, ಸರ್ಕಾರ ಗ್ರಾಹಕರ ಅಭಿಪ್ರಾಯವನ್ನೂ ಪರಿಗಣಿಸಬೇಕೆಂದು ಸದಸ್ಯರು ಒತ್ತಾಯಿಸಿದ್ದಾರೆ.

ಬೆಂಗಳೂರು, ಮಾರ್ಚ್ 5: ಹಾಲು ಉತ್ಪಾದಕರಿಗೆ (Milk Producers) ರಾಜ್ಯ ಸರ್ಕಾರ (Karnataka Government) ಬರೋಬ್ಬರಿ 656.07 ಕೋಟಿ ರೂ. ಪ್ರೋತ್ಸಾಹ ಧನ (subsidy) ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ. ವಿಧಾನ ಪರಿಷತ್ ಕಲಾಪದ ವೇಳೆ, ಪರಿಷತ್ ಸದಸ್ಯೆ ಉಮಾಶ್ರೀ ಹಾಗು ಎಂಜಿ ಮುಳೆ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೆ ವೆಂಕಟೇಶ್ ಈ ಮಾಹಿತಿ ನೀಡಿದ್ದಾರೆ. ಒಟ್ಟು 9,04,547 ಫಲಾನುಭವಿ ರೈತರಿಗೆ ಹಾಲು ಉತ್ಪಾದನಾ ಪ್ರೋತ್ಸಾಹಧನ ಬಾಕಿ ಇದೆ. ಕಳೆದ ಅಕ್ಟೋಬರ್ ತಿಂಗಳಿಂದ ಪ್ರೋತ್ಸಾಹ ಧನ ನೀಡದೇ ಸರ್ಕಾರ ಸತಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಹಾಲು ಉತ್ಪಾದಕರ ಪ್ರೋತ್ಸಾಹಧನದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆರ್ಥಿಕ ಇಲಾಖೆ ಹಣ ಬಿಡುಗಡೆ ಮಾಡಬೇಕಿದೆ. ಹಾಲು ಉತ್ಪಾದನೆ ಜಾಸ್ತಿ ಆಗುತ್ತಿದೆ, ಉತ್ಪಾದನೆಗೆ ತಕ್ಕಂತೆ ಅನುದಾನ ಹಂಚಿಕೆ ಇಲ್ಲ ಎಂದರು.
ಹಾಲಿನ ದರ ಹೆಚ್ಚಳ ಪ್ರಸ್ತಾಪ: ಸಚಿವರು ಹೇಳಿದ್ದೇನು?
1300 ರಿಂದ 1500 ಕೋಟಿ ರೂ. ಮಾತ್ರ ಬಜೆಟ್ ಹಂಚಿಕೆ ಇದೆ. ಹಾಲಿನ ದರ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ರೈತರಿಂದ ಇದೆ. ರೇಟ್ ಜಾಸ್ತಿ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ. ಇದೇ ವೇಳೆ, ಹಾಲಿನ ರೇಟ್ ಜಾಸ್ತಿ ಮಾಡುವಾಗ ಗ್ರಾಹಕರನ್ನೂ ಗಮನದಲ್ಲಿಟ್ಟುಕೊಂಡು ಮಾಡಿ ಎಂದು ಸದಸ್ಯ ಭೋಜೇಗೌಡ ಹೇಳಿದರು.
ಎಂಜಿ ಮುಳೆ ಆಕ್ಷೇಪ
ಹಾಲಿನ ದರ ಹೆಚ್ಚಳದ ವಿಚಾರ ಪ್ರಸ್ತಾಪವಾದಾಗ ಎಂಜಿ ಮುಳೆ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಪಾಲರ ಭಾಷಣದಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿದೆ ಎಂದು ಹೇಳಿಸುತ್ತೀರಿ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಮಹಿಳೆಯರ ಸಬಲೀಕರಣ ಎನ್ನುತ್ತೀರಿ. ಹಾಲು ಉತ್ಪಾದಕ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವುದಿಲ್ಲ. ಹೀಗಾದರೆ ಚರ್ಚೆಯ ಅವಶ್ಯಕತೆ ಏನಿದೆ ಎಂದು ಎಂಜಿ ಮುಳೆ ಪ್ರಶ್ನಿಸಿದರು.
ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ನೀಡಿದ್ರು ಬಿಗ್ ಅಪ್ಡೇಟ್
ಕೆಲವು ದಿನಗಳ ಹಿಂದಷ್ಟೇ, ಬಜೆಟ್ ನಂತರ ಕೆಎಂಎಫ್ ನಂದಿನಿ ಹಾಲಿನ ದರ 5 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ನಂತರ ಆ ಬಗ್ಗೆ ಸ್ಪಷ್ಟನೆ ನೀಡಿದ್ದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು. ಆದರೆ, ನಂದಿನಿ ಹಾಲಿನ ದರ ಹೆಚ್ಚಳ ಮಾಡಬೇಕೆಂಬ ಒತ್ತಡ ನಮ್ಮ ಮೇಲಿದೆ. ಸಂಬಂಧಿಸಿದ ನಿಗಮಗಳ ಸಭೆ ಕರೆದು ಚರ್ಚೆ ಮಾಡಲಾಗಿದೆ. 5 ರೂ. ಹೆಚ್ಚಳ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೆಚ್ಚಳ ಮಾಡಿದ ದರವನ್ನು ರೈತರಿಗೆ ನೀಡಬೇಕೆಂದು ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Wed, 5 March 25