ನಟಿ ರನ್ಯಾ ಮಲತಂದೆ ರಾಮಚಂದ್ರ ರಾವ್ ಹಿನ್ನೆಲೆಯೇನು? ಚಿನ್ನ ಸ್ಮಗ್ಲಿಂಗ್ನಲ್ಲಿ ಡಿಜಿಪಿ ಕೈವಾಡವೂ ಇತ್ತೇ?
ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನಕ್ಕೊಳಗಾಗಿದ್ದು, ಆಕೆಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಟಿಯ ಮಲತಂದೆ, ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ವಿರುದ್ಧ ಈ ಹಿಂದೆ ಹಣ ದುರ್ಬಳಕೆ ಆರೋಪ ಕೇಳಿಬಂದಿತ್ತು. ಹಾಗಾಗಿ ಇದೀಗ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿಯೂ ಅವರ ವಿರುದ್ಧ ಅನುಮಾನಗಳು ವ್ಯಕ್ತವಾಗಿವೆ. ಹಾಗಾದರೆ, ಕೆ. ರಾಮಚಂದ್ರ ರಾವ್ ಯಾರು? ಅವರ ಹಿನ್ನೆಲೆಯೇನು? ಇಲ್ಲಿದೆ ವಿವರ.

ಬೆಂಗಳೂರು, ಮಾರ್ಚ್ 05: ಚಿನ್ನ ಕಳ್ಳಸಾಗಣೆಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ (Ranya Rao) ಬಂಧನಕ್ಕೆ ಒಳಗಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. 14.20 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪ ನಟಿಯ ಮೇಲಿದೆ. ಪ್ರಕರಣದ ತನಿಖೆ ಮುಂದುವರೆದ್ದು, ನಟಿ ಬಳಿಯಿಂದ ಚಿನ್ನ, ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಡಿಆರ್ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಟಿ ರನ್ಯಾ ರಾವ್ ಬಂಧನಕ್ಕೂ ಎರಡು ವಾರಗಳ ಮುನ್ನ ಸಹ ದುಬೈಗೆ ಹೋಗಿ ಬಂದಿದ್ದರು. ಆಗ, ತಪಾಸಣೆ ವೇಳೆ ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಕಾರಿಗಳ ಜೊತೆ ರನ್ಯಾ ಜಗಳ ಮಾಡಿಕೊಂಡಿದ್ದರು. ತಾನು ಡಿಜಿಪಿ ಪುತ್ರಿ ಎಂದು ಹೇಳಿಕೊಂಡು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗದೆ ಅವರು ಹೊರಗೆ ಹೋಗಿದ್ದರು. ಹಾಗಿದ್ದರೆ ರನ್ಯಾ ರಾವ್ ತಂದೆ ಯಾರು? ಡಿಜಿಪಿಯಾಗಿ ಸದ್ಯ ಕಾರ್ಯನಿರ್ವಹಿಸುತ್ತಿರುವುದಾದರೂ ಎಲ್ಲಿ?
ರನ್ಯಾ ರಾವ್ ತಂದೆ ಡಿಜಿಪಿ ಕೆ. ರಾಮಚಂದ್ರ ರಾವ್. ಮೂಲತಃ ಆಂಧ್ರಪ್ರದೇಶದವರು. ಡಿಜಿಪಿ ಕೆ. ರಾಮಚಂದ್ರ ರಾವ್ ಚಿಕ್ಕಮಗಳೂರು ಜಿಲ್ಲೆ ಕಾಫಿ ಪ್ಲಾಂಟರ್ ಮಾಲಕಿಯ ಜೊತೆ ಎರಡನೇ ವಿವಾಹವಾಗಿದ್ದರು. ರನ್ಯಾ ರಾವ್ ಅವರು ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಮಲ ಮಗಳು.
ಕೆ. ರಾಮಚಂದ್ರ ರಾವ್ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಲಿಮಿಟೆಡ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ಸೇವೆ ಸಲ್ಲಿಸುತ್ತಿದ್ದರು. 2023ರಲ್ಲಿ ಇವರನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಡಿಜಿಪಿ ಮತ್ತು ಅಧ್ಯಕ್ಷ ಮತ್ತು ಎಂಡಿ ಆಗಿ ಬಡ್ತಿ ನೀಡಲಾಯಿತು.
ರಾಮಚಂದ್ರ ರಾವ್ ವಿರುದ್ಧ ಕೇಳಿಬಂದಿತ್ತು ಹಣ ದುರ್ಬಳಕೆ ಆರೋಪ
ಕೆ. ರಾಮಚಂದ್ರ ರಾವ್ ಈ ಹಿಂದೆ 2014ರಲ್ಲಿ ದಕ್ಷಿಣ ವಲಯದ ಐಜಿಪಿಯಾಗಿದ್ದ ಸಮಯದಲ್ಲಿ ಜಪ್ತಿ ಮಾಡಲಾಗಿದ್ದ 2.20 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ ರಾಮಚಂದ್ರ ರಾವ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗಲಿಲ್ಲ. ಈ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.
ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್ಗೆ ನ್ಯಾಯಾಂಗ ಬಂಧನ
ಸದ್ಯ, ಕೆ. ರಾಮಚಂದ್ರ ರಾವ ಮಲ ಮಗಳು ರನ್ಯಾ ರಾವ್ ಚಿನ್ನಕಳ್ಳಸಾಗಾಣಿಕೆಯಲ್ಲಿ ಬಂಧನವಾಗಿದ್ದು, 14 ದಿನ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:44 pm, Wed, 5 March 25