ಬೆಳಗಾವಿ: ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ತಾಯಿ ಆತ್ಮಹತ್ಯೆ
ಮದ್ಯ ವ್ಯಸನಿ ಪತಿಯ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಬಳಿ ಸಂಭವಿಸಿದೆ. ಸದ್ಯ, ಮಹಿಳೆಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತ್ಮಹತ್ಯೆ ಯತ್ನದ ವೇಳೆ ಒಬ್ಬ ಬಾಲಕಿಯನ್ನು ರಕ್ಷಿಸಲಾಯಿತಾದರೂ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಬೆಳಗಾವಿ, ಮಾರ್ಚ್ 5: ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ (Krishna River) ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ (Belagavi) ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಬಳಿ ನಡೆದಿದೆ. ತಾಯಿ ಶಾರದಾ (32), ಮಕ್ಕಳಾದ ಅಮೃತಾ, ಆದರ್ಶ ಹಾಗೂ ಅನುಷ್ಕಾ ಮೃತ ದುರ್ದೈವಿಗಳು. ನದಿಗೆ ಹಾರಿದ್ದನ್ನು ನೋಡಿದ ಸ್ಥಳೀಯರು ನೀರಿನಲ್ಲಿ ಮುಳುಗುತ್ತಿದ್ದ ಅನುಕ್ಷಾಳನ್ನು ರಕ್ಷಣೆ ಮಾಡಿದ್ದರು. ನಂತರ ಆಕೆಯನ್ನು ರಾಯಬಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸಗೆ ಸ್ಪಂದಿಸದೆ ಆಕೆಯೂ ಸಾವಿಗೀಡಾಗಿದ್ದಾಳೆ.
ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪತಿ ಅಶೋಕ್ ಕಿರುಕುಳದಿಂದ ಬೇಸತ್ತು ಶಾರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪತಿ ಅಶೋಕ್ ನಿತ್ಯ ಮದ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಸದ್ಯ ಪತಿ ಅಶೋಕ್ನನ್ನು ಡಾಲೆ ವಶಕ್ಕೆ ಪಡೆದಿದ್ದಾರೆ.
ಬಡ್ಡಿ ದಂಧೆಕೋರರ ಹಾವಳಿ: ಯುವಕನ ಅಪಹರಣ
ಬೆಳಗಾವಿಯಲ್ಲಿ ಮೈಕ್ರೋ ಫೈನಾನ್ಸ್ ಬಳಿಕ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಬಡ್ಡಿ ಹಣಕ್ಕಾಗಿ ಯುವಕನನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ನಡೆದಿದೆ. ಬೆಳಗಾವಿಯ ಸದಾಶಿವ ನಗರದ ನಿವಾಸಿ ವಿಶ್ವಜಿತ್ ಎಂಬವರನ್ನು ಅಪಹರಿಸಲಾಗಿದೆ. ಡ್ಯಾನಿ ಬೀಡಕರ್ ಎಂಬಾತನ ಬಳಿ ವಿಶ್ವಜಿತ್ 2 ಲಕ್ಷ ರೂ. ಪಡೆದಿದ್ದರು. ಸಾಲದ ಅಸಲು ತೀರಿಸಿದ ಬಳಿಕವೂ ಬಡ್ಡಿ ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಟೀ ಕುಡಿದು ಬರೋಣ ಬಾ ಎಂದು ವಿಶ್ವಜಿತ್ ಕರೆದೊಯ್ದಿದ್ದ ಡ್ಯಾನಿ, ಬಳಿಕ ಹಣ ಕೊಡುವವರೆಗೂ ಬಿಡಲ್ಲ ಎಂದು ಕೂಡಿ ಹಾಕಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸಂತಿ ಬಸ್ತವಾಡ ಗ್ರಾಮದ ಫಾರ್ಮ್ ಹೌಸ್ನಲ್ಲಿ ಗೃಹಬಂಧನದಲ್ಲಿ ಇಡಲಾಗಿತ್ತು.
ವಿಶ್ವಜಿತ್ ತಂದೆ ಆತನಿಗೆ ಕರೆ ಮಾಡಿದಾಗ ಕಿಡ್ನ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅವರು ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಯುವಕನನ್ನು ರಕ್ಷಿಸಿದ ಪೊಲೀಸರು, ಆರೋಪಿ ಡ್ಯಾನಿ ಬೀಡಕರ್ನನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ದಾಳಿ
ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಹಾಗೂ ಕಾಲೇಜು ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ಲೋಕಾಯುಕ್ತ ಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ 20 ಕ್ಕೂ ಅಧಿಕ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಕಡತಗಳ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ಪ್ರೇಯಸಿಯ ಕತ್ತು ಸೀಳಿ ಬಳಿಕ ಅದೇ ಚಾಕುವಿನಿಂದ ಕತ್ತು ಕೊಯ್ದುಕೊಂಡು ಪ್ರಾಣಬಿಟ್ಟ ಪ್ರಿಯಕರ
ಬಿಮ್ಸ್ ನಿರ್ದೇಶಕ ಡಾ. ಅಶೋಕುಮಾರ್ ಶೆಟ್ಟರ್ ಚೇಂಬರ್‌ನಲ್ಲಿ ತಪಾಸಣೆ ನಡೆಸಲಾಗಿದೆ. ಔಷಧಿ ಖರೀದಿಯಲ್ಲಿ ಅವ್ಯವಹಾರ, ಕರ್ತವ್ಯ ಪಾಲನೆಯಲ್ಲಿ ವೈದ್ಯರ ಲೋಪ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.