ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ: ಸತೀಶ್ ಜಾರಕಿಹೊಳಿ ಆಪ್ತೆಯ ಬಂಧನ
ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತೆ ಮಂಜುಳಾ ರಾಮಗನಟ್ಟಿ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ. 24 ಗಂಟೆಗಳ ಒಳಗೆ ಅಪಹರಣಕಾರರನ್ನು ಪತ್ತೆ ಹಚ್ಚಿ ಉದ್ಯಮಿಯನ್ನು ರಕ್ಷಿಸಲಾಗಿದೆ. ಐದು ಕೋಟಿ ರೂಪಾಯಿಗಳ ಡಿಮ್ಯಾಂಡ್ ಮಾಡಲಾಗಿತ್ತು.

ಬೆಳಗಾವಿ, ಮಾರ್ಚ್ 03: ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿ ಐದು ಕೋಟಿಗೆ ಡಿಮ್ಯಾಂಡ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಆಪ್ತೆ, ರಾಮಗನಟ್ಟಿ ಗೋಕಾಕ್ (Gokak) ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ರಾಮಗನಟ್ಟಿಯನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ಈ ಹಿಂದೆ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಘಟಪ್ರಭಾ ಠಾಣೆ ಪೊಲೀಸರು ಕೇವಲ 24ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ್ದು, ಅಪಹರಣವಾಗಿದ್ದ ಉದ್ಯಮಿಯನ್ನು ರಕ್ಷಿಸಿದ್ದಾರೆ.
ಅಪಹರಣಕಾರರು ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
ಗಡಿ ಜಿಲ್ಲೆ ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನಾಪ್ ಪ್ರಕರಣ ಪೊಲೀಸರ ನಿದ್ದೆಗೆಡಸಿತ್ತು. ಪ್ರಕರಣ ದಾಖಲಾದ ಕೇವಲ 24ಗಂಟೆಯಲ್ಲಿ ಘಟಪ್ರಭಾ ಪೊಲೀಸರು ಪ್ರಕರಣವನ್ನ ಭೇದಿಸಿದ್ದು ಐವರು ಜನ ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಉದ್ಯಮಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ಅಂಬಿ (48ವರ್ಷ) ಅವರು ಫೆಬ್ರವರಿ 14ರಂದು ರಾತ್ರಿ 11ಗಂಟೆ ಸುಮಾರಿಗೆ ಮಿರಜ್ ದಿಂದ ಮನೆಗೆ ಬರುತ್ತಿರುವಾಗ ಅಪಹರಣ ಮಾಡಲಾಗಿತ್ತು. ಮರುದಿನ ಫೆಬ್ರವರಿ 15 ರಂದು ಬಸವರಾಜ ಅಂಬಿ ಅವರ ಪತ್ನಿ ಶೋಭಾಗೆ ಕರೆ ಮಾಡಿದ್ದ ಅಪಹರಣಕಾರರು “ಐದು ಕೋಟಿ ಹಣ ನೀಡಿ ನಿನ್ನ ಬಿಡಿಸಿಕೊಂಡು ಹೋಗುವಂತೆ” ಹೇಳಿದ್ದರು. ಇದರಿಂದ ಭಯಗೊಂಡ ಶೋಭಾ ತನ್ನ ಮಗನಿಗೆ ವಿಚಾರ ತಿಳಿಸಿ, 10 ಲಕ್ಷ ಹಣ ನೀಡಿ ಪತಿ ಬಸವರಾಜ ಅಂಬಿಯನ್ನು ಬಿಡಿಸಿಕೊಂಡು ಬರಲು ಆರೋಪಿಗಳು ತಿಳಿಸಿದ್ದ ನಿಪ್ಪಾಣಿಯ ಬಳಿಯ ದಾಬಾಗೆ ಹೋಗಿದ್ದರು.
ಆದರೆ, ಶೋಭಾ ಸೇರಿದಂತೆ 4-5 ಜನ ಸ್ಥಳಕ್ಕೆ ಬಂದಿದ್ದನ್ನು ಗಮನಿಸಿದ ಆರೋಪಿಗಳು ಆ ದಿನ ಭೇಟಿಯಾಗಿರಲಿಲ್ಲ. ಮತ್ತೊಮ್ಮೆ ಕರೆ ಮಾಡಿ ಒಬ್ಬರೇ ಬಂದು ಐದು ಕೋಟಿ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಆಗಲು ಸಕ್ಸಸ್ ಆಗಿರಲಿಲ್ಲ. ನಂತರ ಶೋಭಾ ಫೆಬ್ರವರಿ 18ರ ರಾತ್ರಿ ಘಟಪ್ರಭಾ ಪೊಲೀಸ್ ಠಾಣೆಗೆ ತೆರಳಿ “ನನ್ನ ಗಂಡನನ್ನು ಯಾರೋ ಅಪಹರಣ ಮಾಡಿದ್ದಾರೆ. ಹುಡುಕಿ ಕೊಡಿ” ಅಂತ ದೂರು ಕೊಟ್ಟಿದ್ದಾರೆ. ಕೇಸ್ ದಾಖಲಿಸಿಕೊಂಡ ಘಟಪ್ರಭಾ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಅವರ ಗಮನಕ್ಕೆ ವಿಚಾರ ತಂದಿದ್ದಾರೆ.
ತಕ್ಷಣ ಮೂರು ತಂಡಗಳನ್ನು ರಚಿಸಿದ ಎಸ್ಪಿ ಡಾ.ಭೀಮಾಶಂಕರ್ ಅಪಹರಣಕ್ಕೊಳಗಾದ ವ್ಯಕ್ತಿಯ ಪತ್ತೆಗೆ ಸೂಚನೆ ನೀಡಿದ್ದರು. ಪೋನ್ ಲೋಕೇಷನ್ ಆಧಾರದ ಮೇಲೆ ಶೋಧ ಕಾರ್ಯ ಶುರು ಮಾಡಿದ್ದ ಪೊಲೀಸರು ಪ್ರಕರಣ ದಾಖಲಾದ 24ಗಂಟೆಯಲ್ಲಿ ಅಪಹರಣಕ್ಕೊಳಗಾದ ಬಸವರಾಜನನ್ನು ರಕ್ಷಣೆ ಮಾಡಿ, ಅಪಹರಿಸಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಪ್ರಕರಣದ ಪ್ರಮುಖ ಆರೋಪಿ ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಮಂಜುಳಾ ಎಂಬ ವಿಚಾರ ಬಹಿರಂಗವಾಗಿದೆ. ಇನ್ನು, ಮಂಜುಳಾ ಭಾಗಿಯಾಗಿರುವ ಕುರಿತು ಸ್ವತಃ ಆಕೆಯ ಪುತ್ರ ಈಶ್ವರನನ್ನು ಬಾಯಿಬಿಟ್ಟಿದ್ದಾನೆ. ತಾಂತ್ರಿಕ ಸಾಕ್ಷ್ಯ, ಆರೋಪಿಗಳ ಹೇಳಿಕೆ ಆಧರಿಸಿ ಮಂಜುಳಾನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಈವರೆಗೆ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಲು ಕಾರಣವೇನು?
ಅಷ್ಟಕ್ಕೂ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಬಸವರಾಜ ಕೆಲ ವರ್ಷಗಳಿಂದ ಮಹಾಲಿಂಗಪುರ, ತೇರದಾಳ ಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆಯನ್ನ ಶುರು ಮಾಡಿದ್ದರು. ಕೋಟ್ಯಾಂತರ ರೂಪಾಯಿ ವ್ಯವಹಾರದ ಜೊತೆಗೆ ಕಾನೂನು ಬಾಹಿರವಾಗಿ ಕೆಲಸಗಳನ್ನು ಮಾಡುತ್ತಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಇದರಿಂದ ಕೋಟ್ಯಾಂತರ ರೂಪಾಯಿ ಬಸವರಾಜಗೆ ಬರುತ್ತಿತ್ತು. ಈ ಹಣದ ಮೇಲೆ ಕಣ್ಣು ಹಾಕಿದ್ದ ಆರೋಪಿಗಳು ಈತನನ್ನ ಕಿಡ್ಯಾಪ್ ಮಾಡಿದರೇ ಸುಲಭವಾಗಿ ಹಣ ಪಡೆಯಬಹುದು ಜೊತೆಗೆ, ಈತ ಪೊಲೀಸರಿಗೂ ಕೂಡ ಹೇಳಲು ಆಗುವುದಿಲ್ಲ ಅಂತ ತಲೆ ಓಡಿಸಿ ಎರಡು ಕಾರುಗಳಲ್ಲಿ ಗ್ಯಾಂಗ್ ಕಟ್ಟಿಕೊಂಡು ಬಂದು ಮೂಡಲಗಿ ತಾಲೂಕಿನ ದಂಡಾಪುರ ಗ್ರಾಮದ ಕ್ರಾಸ್ ಬಳಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದರು.
ಮುಖ್ಯ ಆರೋಪಿ ಈಶ್ವರ ರಾಮಗನಗಟ್ಟಿ ಸೇರಿ ಸಚಿನ್ ಕಾಂಬ್ಳೆ, ರಮೇಶ್ ಕಾಂಬ್ಳೆ, ರಾಘವೇಂದ್ರ ಮಾರಾಪುರ ಒಟ್ಟು ನಾಲ್ಕು ಜನ ಆರೋಪಿಗಳನ್ನ ಬಂಧಿಸಿ ವಿಚಾರಣೆ ಮಾಡಿದಾಗ ಈ ಎಲ್ಲ ಅಂಶಗಳನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ.