ಯತ್ನಾಳ್ ಬೆಂಬಲಿಸಿ ನಿನ್ನೆ ರಾಜೀನಾಮೆ ನೀಡಿದ್ದ ಪದಾಧಿಕಾರಿ ಇಂದು ಕಾರು ಅಪಘಾತದಲ್ಲಿ ಸಾವು
ಬಿಜೆಪಿಯಿಂದ ಯತ್ನಾಳ್ರನ್ನು ಉಚ್ಚಾಟನೆಯ ನಂತರ, ಅವರನ್ನು ಬೆಂಬಲಿಸಿ ರಾಜೀನಾಮೆ ನೀಡಿದ್ದ ವಿಜಯಪುರದ ಬಿಜೆಪಿ ನಗರ ಎಸ್ಟಿ ಮೋರ್ಚಾ ಪದಾಧಿಕಾರಿ ಕಾರು ಅಪಘಾತದಲ್ಲಿ ಮೃತಪಟ್ಟಿರುವಂತಹ ಘಟನೆ ನಡೆದಿದೆ. ಜೊತೆಗೆ ಯತ್ನಾಳ್ ಉಚ್ಛಾಟನೆ ಖಂಡಿಸಿ ಪಕ್ಷದ ವಿವಿಧ ಪದಾಧಿಕಾರಿಗಳ ರಾಜೀನಾಮೆ ಪರ್ವ ಕೂಡ ಮುಂದುವರೆದಿದೆ.

ವಿಜಯಪುರ, ಮಾರ್ಚ್ 27: ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ (Basanagouda Patil Yatnal) ಬಿಜೆಪಿ ಗೇಟ್‌ಪಾಸ್ ನೀಡಿದೆ. ಮುಂದಿನ 6 ವರ್ಷಗಳ ಕಾಲ ಬಿಜೆಪಿಯಿಂದ ಯತ್ನಾಳ್‌ರನ್ನ ಉಚ್ಛಾಟನೆ ಮಾಡಲಾಗಿದೆ. ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಉಚ್ಛಾಟನೆ ಮಾಡಿ ನಿನ್ನೆ ಆದೇಶ ಹೊರಡಿಸಿತ್ತು. ಆ ಮೂಲಕ ಫೈರ್‌ಬ್ರ್ಯಾಂಡ್‌ಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿತ್ತು. ಅತ್ತ ಅವರನ್ನು ಉಚ್ಚಾಟನೆ ಮಾಡುತ್ತಿದ್ದಂತೆ ಇತ್ತ ಯತ್ನಾಳ್ರನ್ನು ಬೆಂಬಲಿಸಿ ನಿನ್ನೆ ರಾಜೀನಾಮೆ ನೀಡಿದ್ದ ಪದಾಧಿಕಾರಿ ಇಂದು ಅಪಘಾತದಲ್ಲಿ ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ.
ಬಿಜೆಪಿ ನಗರ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಸಂತೋಷ್ ತಟಗಾರ ಮೃತ ಪದಾಧಿಕಾರಿ. ಸಂತೋಪ್ ತಟಗಾರ ಪ್ರಯಾಣಿಸುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಉಚ್ಟಾಟನೆಯಿಂದ ಯತ್ನಾಳ್ ಮೇಲಾಗುವ ಪರಿಣಾಮಗಳೇನು? ಶಾಸಕ ಸ್ಥಾನದ ಕಥೆ ಏನು?
ಯತ್ನಾಳ್ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರಬಹುದು. ಆದರೆ ಜನರ ಮನಸ್ಸಿನಿಂದ ಉಚ್ಛಾಟನೆ ಮಾಡುವುದಕ್ಕೆ ಆಗಲ್ಲ. ವೇಟ್ ಆ್ಯಂಡ್ ಸಿ. ಬಿಜೆಪಿಗೆ ಭಾವಪೂರ್ವ ಶ್ರದ್ಧಾಂಜಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾವಿಗೂ ಮುನ್ನ ಸಂತೋಷ್ ತಟಗಾರ ಪೋಸ್ಟ್ ಹಂಚಿಕೊಂಡಿದ್ದರು.
ಯತ್ನಾಳ್ ಉಚ್ಛಾಟನೆ ಬೆನ್ನಲ್ಲೆ ರಾಜೀನಾಮೆ ಪರ್ವ
ಇನ್ನು ಮಧ್ಯೆ ಯತ್ನಾಳ್ ಉಚ್ಛಾಟನೆ ಖಂಡಿಸಿ ಪಕ್ಷದ ವಿವಿಧ ಪದಾಧಿಕಾರಿಗಳ ರಾಜೀನಾಮೆ ಪರ್ವ ಮುಂದುವರೆದಿದೆ. ಬಿಜೆಪಿ ನಗರದ ಮಂಡಳ ಅಧ್ಯಕ್ಷ ಶಂಕರ ಹೂಗಾರ, ಕಾರ್ಯದರ್ಶಿ ಸಿದ್ದನಗೌಡ ಬಿರಾದಾರ್, ಬಿಜೆಪಿ ನಗರ ಓಬಿಸಿ ಮೋರ್ಚಾ ಸ್ಥಾನಕ್ಕೆ ಭೀಮು ಮಾಶ್ಯಾಳ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಚು ಬಿರಾದಾರ ರಾಜೀನಾಮೆ ನೀಡಿದ್ದಾರೆ.
ಜೊತೆಗೆ ಪದಾಧಿಕಾರಿಗಳು ಸಹ ಯತ್ನಾಳ್ ಬೆಂಬಲಕ್ಕೆ ನಿಂತ್ತಿದ್ದು, ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಶಂಕರ ಹೂಗಾರ, ಯತ್ನಾಳ್ ಉಚ್ಛಾಟನೆಯನ್ನು ಹೈಕಮಾಂಡ್ ಹಿಂಪಡೆಯಬೇಕೆಂದು ಒತ್ತಾಯ ಮಾಡಿದರು. ಇದು ಹಿಂದುತ್ವಕ್ಕೆ ಮಾಡಿದ ಅಪಮಾನವಾಗಿದೆ. ಯತ್ನಾಳ್ ಹತ್ತಿಕ್ಕೊ ಕೆಲಸ ಮಾಡಲಾಗಿದೆ. ಬಿಜೆಪಿಯ ನಿಷ್ಠಾವಂತ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ. ಕಾರಣ ನಾನೂ ನಗರ ಮಂಡಳ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಯತ್ನಾಳ್‌ಗೆ ಈ ಉಚ್ಛಾಟನೆ ಶಿಕ್ಷೆ ಇದೇನು ಮೊದಲಲ್ಲ…2 ಬಾರಿ ಅಮಾನತುಗೊಂಡು ವಾಪಸ್ ಪಕ್ಷಕ್ಕೆ ಬಂದವರು
ನಗರ ಶಾಸಕ ಯತ್ನಾಳ್ ಅಭಿವೃದ್ದಿ ಹರಿಕಾರರಾಗಿದ್ದಾರೆ. ಯತ್ನಾಳ್ ಭ್ರಷ್ಠಾಚಾರದ ವಿರುದ್ದ ಮಾತನಾಡಿದ್ದು ತಪ್ಪಾ? ಕುಟುಂಬ ರಾಜಕಾರಣದ ವಿರುದ್ದ ಮಾತನಾಡಿದ್ದು ತಪ್ಪಾ? ಈ ಕೂಡಲೆ ಹಿಂಪಡೆಯಬೇಕೆಂದು ಒತ್ತಾಯಿಸಿ ಕಣ್ಣೀರು ಹಾಕಿದ್ದಾರೆ. ಇಲ್ಲವಾದರೆ ಸಾಮೂಹಿಕ ರಾಜಿನಾಮೆ ನೀಡಲಿದ್ದೇವೆಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:37 pm, Thu, 27 March 25